ಉಪಹಾರ್ ಸಿನೆಮಾ ಮಂದಿರ ಅಗ್ನಿ ದುರಂತ ಪ್ರಕರಣ: ಸಂತ್ರಸ್ತರ ಮನವಿಗೆ ಪ್ರತಿಕ್ರಿಯಿಸಲು ಪೊಲೀಸರಿಗೆ ಹೈಕೋರ್ಟ್ ಸೂಚನೆ
ಹೊಸದಿಲ್ಲಿ, 19: ಉಪಹಾರ್ ಸಿನೆಮಾ ಮಂದಿರ ಅಗ್ನಿ ದುರಂತ ಪ್ರಕರಣದಲ್ಲಿ ಪುರಾವೆಗಳನ್ನು ತಿರುಚಿರುವುದಕ್ಕೆ ತನ್ನನ್ನು ದೋಷಿ ಎಂದು ಪರಿಗಣಿಸಿ ಶಿಕ್ಷೆ ವಿಧಿಸಿ ನೀಡಿದ ತೀರ್ಪನ್ನು ಬದಿಗಿರಿಸುವಂತೆ ಕೋರಿ ಅನ್ಸಾಲ್ ಕುಟುಂಬದ ಮಾಜಿ ನೌಕರ ಸಲ್ಲಿಸಿದ ಮನವಿ ಕುರಿತಂತೆ ದಿಲ್ಲಿ ಉಚ್ಚ ನ್ಯಾಯಾಲಯ ಬುಧವಾರ ದಿಲ್ಲಿ ಪೊಲೀಸರ ಪ್ರತಿಕ್ರಿಯೆ ಕೋರಿದೆ.
ನ್ಯಾಯಮೂರ್ತಿ ಪುರುಶೈಂದರ್ ಕುಮಾರ್ ಕೌರವ್ ಅವರು ದಿಲ್ಲಿ ಪೊಲೀಸರಿಗೆ ನೋಟಿಸು ಜಾರಿ ಮಾಡಿ ಪಿ.ಪಿ. ಬಾತ್ರಾ ಅವರ ಮನವಿಗೆ ಪ್ರತಿಕ್ರಿಯಿಸುವಂತೆ ಸೂಚಿಸಿದ್ದಾರೆ.
59 ಜನರ ಸಾವಿಗೆ ಕಾರಣವಾದ 1997 ಜೂನ್ 13ರಂದು ಸಂಭವಿಸಿದ ಅಗ್ನಿ ದುರಂತಕ್ಕೆ ಸಂಬಂಧಿಸಿದ ಈ ಪ್ರಕರಣದಲ್ಲಿ ಪಿ.ಪಿ. ಬಾತ್ರಾ ಅವರು ಈಗಾಗಲೇ ಜೈಲು ಶಿಕ್ಷೆಯ ಅವಧಿಯನ್ನು ಪೂರ್ಣಗೊಳಿಸಿದ್ದಾರೆ.
ಬಾತ್ರಾ ಅವರಲ್ಲದೆ, ಥಿಯೇಟರ್ ಮಾಲಕತ್ವ ಹೊಂದಿದ್ದ ಅನ್ಸಾಲ್ ಕುಟುಂಬದ 83ರ ಹರೆಯದ ಸುಶೀಲ್ ಅನ್ಸಾಲ್ ಅವರು ಕೂಡ ತನ್ನನ್ನು ದೋಷಿ ಎಂದು ಪರಿಗಣಿಸಿ ಶಿಕ್ಷೆ ವಿಧಿಸಿ ನೀಡಿದ ತೀರ್ಪನ್ನು ಬದಿಗಿರಿಸುವಂತೆ ಉಚ್ಚ ನ್ಯಾಯಾಲಯವನ್ನು ಸಂಪರ್ಕಿಸಿದ್ದಾರೆ.
ಪುರಾವೆ ತಿರುಚಿದ ಪ್ರಕರಣದಲ್ಲಿ ದೋಷಿಗಳ ಶಿಕ್ಷೆಯನ್ನು ಹೆಚ್ಚಿಸಬೇಕು ಎಂಬ ಸಂತ್ರಸ್ತರ ಮನವಿಯ ಕುರಿತ ವಿಚಾರಣೆಯ ಸಂದರ್ಭ ನೀವು ಅಥವಾ ನಿಮ್ಮ ಪ್ರತಿನಿಧಿಯಾಗಿ ಯಾರಾದರೂ ಒಬ್ಬರು ನ್ಯಾಯವಾದಿಗಳು ಹಾಜರಿರಬೇಕು ಎಂದು ಉಚ್ಚ ನ್ಯಾಯಾಲಯ ಅಕ್ಟೋಬರ್ 11ರಂದು ಬಾತ್ರಾ ಅವರಿಗೆ ಜಾಮೀನು ರಹಿತ ಬಂಧನ ಆದೇಶ ನೀಡಿತ್ತು.
ಮ್ಯಾಜಿಸ್ಟ್ರೇಟ್ ನ್ಯಾಯಾಲಯ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಬಾತ್ರಾಗೆ 2021 ನವೆಂಬರ್ 8ರಂದು 7 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.