ಜಯ್ ಶಾ ಹೇಳಿಕೆ ನಂತರ ಪಾಕ್ ಪ್ರತಿಕ್ರಿಯೆಗೆ ಕ್ರೀಡಾ ಸಚಿವ ಅನುರಾಗ್ ಠಾಕುರ್ ಪ್ರತಿಕ್ರಿಯಿಸಿದ್ದು ಹೀಗೆ...

Update: 2022-10-20 13:24 GMT
ಕ್ರೀಡಾ ಸಚಿವ ಅನುರಾಗ್ ಠಾಕುರ್ (PTI)

ಹೊಸದಿಲ್ಲಿ: ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯವ ಏಷ್ಯಾ ಕಪ್ ಪಂದ್ಯಾವಳಿಗೆ ಭಾರತ ತಂಡ ಅಲ್ಲಿಗೆ ತೆರಳುವುದಿಲ್ಲ ಹಾಗೂ ಪಂದ್ಯಾವಳಿಯನ್ನು ಬೇರೆ ಸ್ಥಳದಲ್ಲಿ ಆಯೋಜಿಸಬಹುದು ಎಂದು ಬಿಸಿಸಿಐ (BCCI) ಕಾರ್ಯದರ್ಶಿ ಹಾಗೂ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಜಯ್ ಶಾ ಹೇಳಿಕೆ ವಿವಾದಕ್ಕೀಡಾದ ಬೆನ್ನಲ್ಲೇ ತಾನು ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್‍ನಿಂದ ಹಿಂದೆ ಸರಿಯುವುದಾಗಿ ಪಾಕಿಸ್ತಾನ ಬೆದರಿಕೆಯೊಡ್ಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಕ್ರೀಡಾ ಸಚಿವ ಅನುರಾಗ್ ಠಾಕುರ್ (Anurag Thakur), "ನೀವು ಭಾರತವನ್ನು ಕಡೆಗಣಿಸಲು ಸಾಧ್ಯವಿಲ್ಲ,'' ಎಂದಿದ್ದಾರಲ್ಲದೆ ವಿಶ್ವ ಕಪ್ ಪಂದ್ಯಾವಳಿಗೆ ಎಲ್ಲಾ ಅಗ್ರ ತಂಡಗಳು ಭಾರತಕ್ಕೆ ಬರಲಿವೆ ಎಂದಿದ್ದಾರೆ.

"ಏಕದಿನ ಪಂದ್ಯಾವಳಿಯ ವಿಶ್ವಕಪ್ ಮುಂದಿನ ವರ್ಷ ನಡೆಯಲಿದೆ ಮತ್ತು ಜಗತ್ತಿನ ಎಲ್ಲಾ ದೊಡ್ಡ ತಂಡಗಳು ಭಾಗಿಯಾಗಲಿವೆ. ಏಕೆಂದರೆ ಯಾವುದೇ ಕ್ರೀಡೆಯಲ್ಲಿ ಭಾರತವನ್ನು ಕಡೆಗಣಿಸುವ ಹಾಗಿಲ್ಲ, ಏಕೆಂದರೆ ಭಾರತವು ಕ್ರೀಡೆ, ಪ್ರಮುಖವಾಗಿ ಕ್ರಿಕೆಟ್‍ಗೆ ಬಹಳಷ್ಟು ಕೊಡುಗೆ ನೀಡಿದೆ. ಭಾರತವಿಲ್ಲದೆ  ಕ್ರಿಕೆಟ್ ಏನಿದೆ,'' ಎಂದು ಠಾಕುರ್ ಹೇಳಿದ್ದಾರೆ.

ಏಷ್ಯಾ ಕಪ್‍ಗಾಗಿ ಭಾರತ ತಂಡವು ಪಾಕಿಸ್ತಾನಕ್ಕೆ ಪ್ರಯಾಣಿಸುವುದೇ ಎಂಬ ವಿಚಾರವನ್ನು ಗೃಹ ಸಚಿವಾಲಯ ನಿರ್ಧರಿಸಲಿದೆ. "ಸಂಭಾವ್ಯತೆಗಳು ಇವೆ. ಏನು ಬೇಕಾದರೂ ಆಗಬಹುದು, ಆದರೆ ಸಂಭಾವ್ಯತೆ ಹೆಚ್ಚೇನೂ ಇಲ್ಲ. ಒಟ್ಟಾರೆ ಆಟಗಾರರ ಸುರಕ್ಷತೆ ಮತ್ತು ಭದ್ರತೆ ಪ್ರಮುಖವಾಗಿದೆ,'' ಎಂದು ಅವರು ಹೇಳಿದರು.

ಜಯ್ ಶಾ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಅವರ ಹೇಳಿಕೆ ಏಕಪಕ್ಷೀಯವಾಗಿದೆ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಸಮುದಾಯವನ್ನು ಒಡೆಯಬಹುದು. ಏಷ್ಯಾ ಕಪ್ ಪಂದ್ಯಾವಳಿಯನ್ನು ಪಾಕಿಸ್ತಾನದ ಹೊರಗೆ ನಡೆಸುವುದು, ಭವಿಷ್ಯದಲ್ಲಿ ಭಾರತದಲ್ಲಿ ನಡೆಯುವ ವಿಶ್ವಕಪ್ ನಂತಹ ಪಂದ್ಯಾವಳಿಗಳ ಮೇಲೆ ಪರಿಣಾಮ ಬೀರಬಹುದು, ಎಂದು ಮಂಡಳಿ ಹೇಳಿತ್ತು.

ಇದನ್ನೂ ಓದಿ: ಅಹ್ಮದಾಬಾದ್‍ನಲ್ಲಿ ದೇಶದ ಅತ್ಯಂತ ದೊಡ್ಡ ಮಾಲ್ ಸ್ಥಾಪಿಸಲಿರುವ ಲುಲು ಗ್ರೂಪ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News