ಕಾಶ್ಮೀರಿ ಪತ್ರಕರ್ತೆಯ ವಿದೇಶ ಪ್ರಯಾಣ ನಿರ್ಬಂಧಿಸಿದ ಕ್ರಮದ ಕುರಿತು ಅಮೆರಿಕ ಪ್ರತಿಕ್ರಿಯಿಸಿದ್ದು ಹೀಗೆ...

Update: 2022-10-20 12:37 GMT
ಸನಾ ಇರ್ಷಾದ್ ಮಟ್ಟೂ (Photo: Facebook)

ಹೊಸದಿಲ್ಲಿ: ಪುಲಿಟ್ಝರ್ ಪ್ರಶಸ್ತಿ ಪುರಸ್ಕೃತ (Pulitzer Prize winner) ಕಾಶ್ಮೀರಿ ಪತ್ರಕರ್ತೆ ಸನಾ ಇರ್ಷಾದ್ ಮಟ್ಟೂ (Sanna Irshad Mattoo) ಅವರು ಅಮೆರಿಕಕ್ಕೆ ಪ್ರಯಾಣಿಸುವುದನ್ನು ತಡೆದ ಕ್ರಮವನ್ನು ವಿಶ್ವಾದ್ಯಂತ ಪತ್ರಿಕಾ ಸ್ವಾತಂತ್ರ್ಯವನ್ನು ಉತ್ತೇಜಿಸುವ 'ದಿ ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್ಸ್' (ಸಿಪಿಜೆ) ಖಂಡಿಸಿದೆ. ಇದೇ ವೇಳೆ, ಈ ಘಟನೆಯ ಕುರಿತು ತನಗೆ ಅರಿವಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆಯು ತಿಳಿಸಿದೆ.

‘ಮಟ್ಟೂ ಅಮೆರಿಕಕ್ಕೆ ಪ್ರಯಾಣಿಸುವುದನ್ನು ತಡೆಹಿಡಿಯಲಾಗಿದೆ ಎಂಬ ವರದಿಗಳ ಕುರಿತು ನಮಗೆ ಅರಿವಿದೆ ಮತ್ತು ಈ ಬೆಳವಣಿಗೆಗಳ ಮೇಲೆ ನಾವು ನಿಗಾಯಿರಿಸಿದ್ದೇವೆ ’ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ಉಪವಕ್ತಾರ ವೇದಾಂತ ಪಟೇಲ್ ಅವರು ತನ್ನ ದೈನಂದಿನ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಪತ್ರಿಕಾ ಸ್ವಾತಂತ್ರವನ್ನು ಬೆಂಬಲಿಸಲು ನಾವು ಬದ್ಧರಾಗಿದ್ದೇವೆ. ಪತ್ರಿಕಾ ಸ್ವಾತಂತ್ರಕ್ಕೆ ಗೌರವ ಸೇರಿದಂತೆ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಉಭಯ ದೇಶಗಳ ಬದ್ಧತೆಯು ಅಮೆರಿಕ-ಭಾರತ ಸಂಬಂಧದ ತಳಹದಿಯಾಗಿದೆ’ ಎಂದರು.

ಪುಲಿಟ್ಝರ್ ಪ್ರಶಸ್ತಿಯನ್ನು ಸ್ವೀಕರಿಸಲು ಅಮೆರಿಕಕ್ಕೆ ಪ್ರಯಾಣಿಸಲೆಂದು ಅ.18ರಂದು ದಿಲ್ಲಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿದ್ದಾಗ ತನ್ನನ್ನು ದೇಶದಿಂದ ಹೊರಕ್ಕೆ ಹೋಗದಂತೆ ತಡೆಹಿಡಿಯಲಾಗಿತ್ತು ಎಂದು ಮಟ್ಟೂ ಆರೋಪಿಸಿದ್ದಾರೆ. ಮಟ್ಟೂ ಅವರ ವಿದೇಶ ಪ್ರಯಾಣವನ್ನು ನಿರ್ಬಂಧಿಸಿರುವುದು ಇದು ಎರಡನೇ ಬಾರಿಯಾಗಿದೆ.

ಸೆರೆಂಡಿಪಿಟಿ ಆರ್ಲೆಸ್ ಅನುದಾನ 2020ರ ಹತ್ತು ವಿಜೇತರಲ್ಲಿ ಓರ್ವಳಾಗಿ ತಾನು ಪುಸ್ತಕ ಬಿಡುಗಡೆ ಮತ್ತು ಛಾಯಾಚಿತ್ರ ಪ್ರದರ್ಶನಕ್ಕಾಗಿ ಪ್ಯಾರಿಸ್‌ಗಾಗಿ ಪ್ರಯಾಣಿಸಲಿದ್ದಾಗ ತನ್ನನ್ನು ತಡೆಹಿಡಿಯಲಾಗಿತ್ತು ಎಂದು ಮಟ್ಟೂ ಜುಲೈನಲ್ಲಿ ಟ್ವೀಟಿಸಿದ್ದರು.

ತನ್ನನ್ನು ತಡೆಹಿಡಿಯಲು ವಲಸೆ ಅಧಿಕಾರಿಗಳು ಯಾವುದೇ ನಿರ್ದಿಷ್ಟ ಕಾರಣವನ್ನು ನೀಡಿರಲಿಲ್ಲ. ಕಾಶ್ಮೀರ ಪೊಲೀಸರು ತಮಗೆ ಮಾಹಿತಿಯನ್ನು ನೀಡಿದ್ದಾರೆ ಎಂದಷ್ಟೇ ಅವರು ತಿಳಿಸಿದ್ದರು. ತನ್ನ ವಿರುದ್ಧ ಎಫ್‌ಐಆರ್‌ಗಳು ಬಾಕಿಯಿವೆಯೇ ಅಥವಾ ತನ್ನ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಳ್ಳಲಾಗಿದೆಯೇ ಎನ್ನುವುದು ತನಗೆ ತಿಳಿದಿಲ್ಲ ಎಂದೂ ಮಟ್ಟೂ ಆಗ ತಿಳಿಸಿದ್ದರು.

ಸ್ವತಂತ್ರ ಫೋಟೊ ಜರ್ನಲಿಸ್ಟ್ ಆಗಿರುವ ಮಟ್ಟೂ ಭಾರತದಲ್ಲಿ ಕೋವಿಡ್ ಸಾಂಕ್ರಾಮಿಕದ ವರದಿಗಾರಿಕೆಗಾಗಿ ಪುಲಿಟ್ಝರ್ ಪ್ರಶಸ್ತಿಯನ್ನು ಗೆದ್ದ ರಾಯ್ಟರ್ಸ್ ತಂಡದ ಸದಸ್ಯೆಯಾಗಿದ್ದರು.

ಪುಲಿಟ್ಝರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳಲು ಮಟ್ಟೂ ಅಮೆರಿಕಕ್ಕೆ ಪ್ರಯಾಣಿಸಲು ಅವಕಾಶ ನೀಡುವಂತೆ ಹೇಳಿಕೆಯೊಂದರಲ್ಲಿ ಭಾರತೀಯ ಅಧಿಕಾರಿಗಳನ್ನು ಆಗ್ರಹಿಸಿರುವ ಸಿಪಿಜೆಯ ಏಶ್ಯಾ ಕಾರ್ಯಕ್ರಮ ನಿರ್ದೇಶಕಿ ಬೆಹ್ ಲಿ ಯಿ ಅವರು,ಎಲ್ಲ ಸೂಕ್ತ ಪ್ರಯಾಣ ದಾಖಲೆಗಳನ್ನು ಹೊಂದಿದ್ದ ಪುಲಿಟ್ಝರ್ ಪ್ರಶಸ್ತಿ ವಿಜೇತೆ ಮಟ್ಟೂ ಅವರು ವಿದೇಶಕ್ಕೆ ಪ್ರಯಾಣಿಸುವುದನ್ನು ನಿರ್ಬಂಧಿಸಲು ಕಾರಣವೇ ಇಲ್ಲ. ಈ ಕ್ರಮವು ನಿರಂಕುಶ ಮತ್ತು ವಿಪರೀತದ್ದಾಗಿದೆ. ಕಾಶ್ಮೀರದಲ್ಲಿನ ಸ್ಥಿತಿಯ ಕುರಿತು ವರದಿ ಮಾಡುತ್ತಿರುವ ಪತ್ರಕರ್ತರಿಗೆ ಎಲ್ಲ ರೀತಿಗಳ ಕಿರುಕುಳಗಳನ್ನು ಮತ್ತು ಬೆದರಿಕೆಗಳನ್ನು ಭಾರತೀಯ ಅಧಿಕಾರಿಗಳು ತಕ್ಷಣ ನಿಲ್ಲಿಸಬೇಕು ಎಂದು ಹೇಳಿದ್ದಾರೆ.

2019,ಆಗಸ್ಟ್‌ನಲ್ಲಿ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದಾಗಿನಿಂದ ತಾವು ವಿದೇಶಕ್ಕೆ ಪ್ರಯಾಣಿಸುವುದನ್ನು ನಿರ್ಬಂಧಿಸಲಾಗಿದೆ ಎಂದು ಕಾಶ್ಮೀರಿ ಪತ್ರಕರ್ತರು ಸಿಪಿಜೆಗೆ ದೂರಿಕೊಂಡಿದ್ದಾರೆ ಎಂದು ಹೇಳಿಕೆಯು ಬೆಟ್ಟು ಮಾಡಿದೆ.

2022ರಲ್ಲಿ ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ ಪ್ರಕಟಿಸಿದ ಪತ್ರಿಕಾ ಸ್ವಾತಂತ್ರ ಸೂಚಿಯಲ್ಲಿ ಭಾರತವು 180 ದೇಶಗಳ ಪೈಕಿ 150ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: ಬಿಲ್ಕಿಸ್ ಪ್ರಕರಣದ ಅಪರಾಧಿಗಳ ಬಿಡುಗಡೆಗೆ ಕೇಂದ್ರ ಸಮ್ಮತಿಸಿತ್ತು ಎಂದು ತಿಳಿದು ಆಘಾತವಾಗಿದೆ ಎಂದ ಬಿಜೆಪಿ ನಾಯಕ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News