×
Ad

ಟ್ರೋಲ್‌ಗೆ ಹೆದರಿ ಟೋಲ್ ಹೋರಾಟ ನಿಲ್ಲದು: ಪ್ರತಿಭಾ ಕುಳಾಯಿ

Update: 2022-10-21 17:44 IST
ಪ್ರತಿಭಾ ಕುಳಾಯಿ

ಮಂಗಳೂರು, ಅ. 21: ಟೋಲ್ ವಿರುದ್ಧದ ಹೋರಾಟದ ಸಂದರ್ಭದ ವೀಡಿಯೊ, ಫೋಟೊ ಮೂಲಕ ಟ್ರೋಲ್ ಮಾಡಿ ಹೋರಾಟದಿಂದ ಹಿಂದೆ ಸರಿಸಲಾಗದು. ಇಂತಹ ಟ್ರೋಲ್‌ಗಳಿಗೆ ಹೆದರುವವಳಲ್ಲ ಎಂದು ಕಾಂಗ್ರೆಸ್ ನಾಯಕಿ, ಸುರತ್ಕಲ್ ಟೋಲ್ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪ್ರತಿಭಾ ಕುಳಾಯಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಪ್ರತಿಭಟನೆಯ ಸಂದರ್ಭ ನನ್ನ ಫೋಟೊ, ವೀಡಿಯೊ ಜತೆ ಅಶ್ಲೀಲ ಪದಗಳ ಮೂಲಕ ನನ್ನನ್ನು ಟ್ರೋಲ್ ಮಾಡುತ್ತಿರುವವರ ವಿರುದ್ಧ ದೂರು ನೀಡಲಿದ್ದೇನೆ ಎಂದರು.

ಪ್ರತಿಭಟನೆಯ ತಳ್ಳಾಟದಲ್ಲಿ ನನ್ನ ಸೀರೆ ಸೆರಗು ಜಾರಿತ್ತು. ನನ್ನನ್ನು ಬಂಧಿಸಲು ಮುಂದಾದಾಗ ಸೀರೆಗೆ ಕೈ ಹಾಕಬೇಡಿ ಎಂದು ಬೊಬ್ಬೆ ಹಾಕಿದ್ದೇನೆ. ಇದು ಮಾಧ್ಯಮ ಮಿತ್ರರ ಸಮ್ಮಖದಲ್ಲಿ ನಡೆದಿದ್ದು, ವೀಡಿಯೊ ಸಾಕ್ಷಿ ಇದೆ.  ಹೆಣ್ಣಿನ ಅಸಹಾಯಕ ಪರಿಸ್ಥಿತಿಯ ವೀಡಿಯೊವನ್ನು ಎಡಿಟ್ ಮಾಡಿ ಅದಕ್ಕೆ ಸಿನೆಮಾ ಟೈಟಲ್ ಕೊಡುವುದು ಅಸಹ್ಯ ಕಮೆಂಟ್ಸ್ ಪೋಸ್ಟ್ ಮಾಡುವುದು ಬಿಜೆಪಿ ನಾಯಕರ ನೈತಿಕತೆಯೇ ಎಂದು ಪ್ರತಿಭಾ ಕುಳಾಯಿ ಪ್ರಶ್ನಿಸಿದ್ದಾರೆ.

ಮಹಿಳೆಯ ಬಗ್ಗೆ ಈ ರೀತಿ ಅತ್ಯಂತ ಕೆಟ್ಟದಾಗಿ ಟ್ರೋಲ್ ಮಾಡಿದವರು ಮಾನಸಿಕ ಅಸ್ವಸ್ಥರಾಗಿರಬಹುದೆಂಬ ಅನುಮಾನವಿದೆ. ಬಿಜೆಪಿಯಲ್ಲಿ ಗುರುತಿಸಿಕೊಂಡವರಿಂದಲೇ ಇಂತಹ ಕೃತ್ಯ ನಡೆದಿದ್ದು, ಧರ್ಮ ಸಂಸ್ಕೃತಿ ಎಂದೆಲ್ಲಾ ಹೇಳುವವರು ಹೆಣ್ಣು ಮಕ್ಕಳ ಬಗ್ಗೆ ಅವರ ಪೋಸ್ಟ್‌ಗಳು ಅವರ ಸಂಸ್ಕೃತಿಯನ್ನು ಬಿಂಬಿಸಿದೆ. ಅವರನ್ನೆಲ್ಲಾ ಕಾನೂನಾತ್ಮಕವಾಗಿ ಹೇಗೆ ಎದುರಿಸಬೇಕೆಂದು ನನಗೆ ತಿಳಿದಿದೆ ಎಂದರು.

ಜನಪರ  ಹೋರಾಟ ಮಾಡಿದ ನನ್ನನ್ನು ಕುಗ್ಗಿಸುವ ಈ ತಂತ್ರ ನಡೆಯದು. ನಾನು ಯಾರಿಂದಲೂ ಲಂಚ ಪಡೆದಿಲ್ಲ. ಶಾಸಕರು ಹಾಗೂ ಸಂಸದರ ವಸೂಲಿ ಕೇಂದ್ರವಾಗಿರುವ ಟೋಲ್ ವಿರುದ್ಧ ಹೋರಾಟ ಮಾಡಿದ್ದೇನೆ. ನನ್ನ ಹೋರಾಟದ ವೀಡಿಯೊ ಫೋಟೊ ಬಳಸಿ ಕಾಂತಾರ 2 ಎಂದು ಪೋಸ್ಟ್ ಮಾಡಲಾಗಿದೆ. ಕಾಂತಾರ 2 ಮಾತ್ರವಲ್ಲ, 3,4 ಕೂಡಾ ಏನೆಂದು ತೋರಿಸುವೆ. ಜತೆಗೆ ನಾಗವಲ್ಲಿ ಎಂದು ಪೋಸ್ಟ್ ಮಾಡಲಾಗಿದೆ. ಈ ಹಿಂದೆಯೂ ನನ್ನನ್ನು ಛೇಡಿಸಿದವರಿಗೆ  ನೈಜ ನಾಗವಲ್ಲಿಯ ರೂಪ ತೋರಿಸಿದ್ದೇನೆ. ಅದನ್ನು ಮುಂದೆಯೂ ಮಾಡಲು ಹಿಂಜರಿಯಲಾರೆ ಎಂದು ಪ್ರತಿಭಾ ಕುಳಾಯಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News