ಕಾಣಿಯೂರುನಲ್ಲಿ ಹಲ್ಲೆ ಪ್ರಕರಣ: ಮುಸ್ಲಿಂ ಸೆಂಟ್ರಲ್ ಕಮಿಟಿ ನಿಯೋಗ, ಡಿವೈಎಫ್‌ಐ ಭೇಟಿ

Update: 2022-10-22 16:08 GMT

ಮಂಗಳೂರು, ಅ.22: ಕಾಣಿಯೂರು ಪ್ರಕರಣದಲ್ಲಿ ಬರ್ಬರ ಹಲ್ಲೆಗೊಳಗಾಗಿ ಗಂಭೀರ ಸ್ಥಿತಿಯಲ್ಲಿರುವ ಬೆಡ್‌ಶೀಟ್ ವ್ಯಾಪಾರಿಗಳಾದ ಅಡ್ಡೂರಿನ ಮುಹಮ್ಮದ್ ರಫೀಕ್ ಮತ್ತು ರಮೀಝುದ್ದೀನ್ ಅವರನ್ನು ಮುಸ್ಲಿಂ ಸೆಂಟ್ರಲ್ ಕಮಿಟಿಯ ನಿಯೋಗವು ಶನಿವಾರ ಆಸ್ಪತ್ರೆಯಲ್ಲಿ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿತು.

ಈ ಕೃತ್ಯ ಖಂಡನೀಯ. ಗಾಯಾಳುಗಳ ಹೇಳಿಕೆಯಂತೆ ಅವರ ಕಾರನ್ನು ಜಖಂಗೊಳಿಸಿ ಕಾರಿನಲ್ಲಿದ್ದ ಬೆಡ್‌ಶೀಟನ್ನು ಹಾನಿಗೊಳಿಸಿ ಸುಮಾರು 2 ಲಕ್ಷ ರೂ.ಗಳ ನಷ್ಟವನ್ನುಂಟು ಮಾಡಿರುವ ಬಗ್ಗೆ ದ.ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ  ಅಲ್ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್‌ರ ನಿರ್ದೇಶನದಂತೆ ಮುಖ್ಯಮಂತ್ರಿ, ಗೃಹಸಚಿವರು, ಎಡಿಜಿಪಿ, ಐಜಿಪಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದೆ.

ಕಮಿಟಿಯ ಉಪಾಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್, ಕಾರ್ಯದರ್ಶಿಗಳಾದ ಅಹ್ಮದ್ ಬಾವ ಬಜಾಲ್, ಅಹ್ಮದ್ ಬಾವಾ ಪಡೀಲ್, ಡಿ.ಎಂ. ಅಸ್ಲಂ, ಮೊಯಿದಿನ್ ಮೋನು, ಎಂ.ಎ. ಅಶ್ರಫ್, ಮುಹಮ್ಮದ್ ಬಪ್ಪಳಿಗೆ, ಸಿ.ಎಂ. ಹನೀಫ್, ಹಾಜಿ ರಿಯಾಝುದ್ದೀನ್, ಎನ್.ಕೆ. ಅಬೂಬಕ್ಕರ್ ನಿಯೋಗದಲ್ಲಿದ್ದರು

ಮುಸ್ಲಿಮ್ ಸಂಘಟನೆಗಳ ಮುಖಂಡರಿಂದ ಸಂತ್ರಸ್ತರ ಭೇಟಿ

ಕಾಣಿಯೂರು ಗ್ರಾಮದಲ್ಲಿ ಬೆಡ್‌ಶೀಟ್ ವ್ಯಾಪಾರಿಗಳ ಮೇಲೆ ನಡೆದ ಅಮಾನುಷ ಹಲ್ಲೆಯನ್ನು ವಿವಿಧ ಮುಸ್ಲಿಂ ಸಂಘಟನೆಗಳ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.

ವ್ಯಾಪಾರಿಗಳು ಮುಸ್ಲಿಮರೆಂಬ ಕಾರಣಕ್ಕೆ ಬಜರಂಗದಳ ಮತ್ತು ಸಂಘಪರಿವಾರ ಕಾರ್ಯಕರ್ತರು ಮಾರಣಾಂತಿಕ ಗುಂಪು ಹಲ್ಲೆ ನಡೆಸಿ ನಂತರ ಸುಳ್ಳು ಕತೆ ಸೃಷ್ಟಿಸಿ ಹಲ್ಲೆಗೊಳಗಾದವರ ವಿರುದ್ಧ ಪ್ರಕರಣ ದಾಖಲಾಗುವಂತೆ ಮಾಡಿದ್ದಾರೆ. ಆರೋಪಿಗಳನ್ನು ಸುರಕ್ಷಿತರಾಗಿ ಬಿಟ್ಟು, ಹಲ್ಲೆಗೊಳಗಾದವರ ಮೇಲೆಯೇ ಪ್ರಕರಣ ದಾಖಲಿಸಿರುವುದು ಖಂಡನೀಯ. ಆದುದರಿಂದ ಪೊಲೀಸ್ ಇಲಾಖೆಯು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ದುಷ್ಕರ್ಮಿಗಳ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಒತ್ತಾಯಿಸಿದರು.

ಮಾಜಿ ಮೇಯರ್ ಕೆ.ಅಶ್ರಫ್, ಮಾಜಿ ಶಾಸಕ ಮೊಯ್ದಿನ್ ಬಾವ, ಸಾಲಿಹ್ ಬಜ್ಪೆ, ಶರೀಫ್ ನಾಟಿಕಲ್, ಸಿ.ಎಂ.ಮುಸ್ತಫಾ ಮತ್ತಿತರರು ನಿಯೋಗದಲ್ಲಿದ್ದರು.

ದ.ಕ.ಜಿಲ್ಲಾ ಮುಸ್ಲಿಂ ಲೀಗ್ ಖಂಡನೆ

ಕಾಣಿಯೂರು ಗ್ರಾಮದಲ್ಲಿ ನಡೆದ ಅಮಾನುಷ ಕೃತ್ಯವನ್ನು ಖಂಡಿಸಿರುವ ದ.ಕ.ಜಿಲ್ಲಾ ಮುಸ್ಲಿಂ ಲೀಗ್ ಅಧ್ಯಕ್ಷ ಕೆ.ಎಂ. ಫಯಾಝ್, ತಕ್ಷಣ ದುಷ್ಕರ್ಮಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಹೊಟ್ಟೆಪಾಡಿಗಾಗಿ ಬೆಡ್‌ಶೀಟ್ ಮಾರಾಟ ಮಾಡಲು ಹೋದ ಇಬ್ಬರು ಮುಸ್ಲಿಂ ಯುವಕರಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ಆದರೆ ಸಂತ್ರಸ್ತರ ವಿರುದ್ಧವೇ ಪ್ರಕರಣ ದಾಖಲಿಸಿರುವುದು ಸರಿಯಲ್ಲ. ಉತ್ತರ ಭಾರತದ ರಾಜ್ಯಗಳಲ್ಲಿ ಕೇಳಿಬರುತ್ತಿದ್ದ ಮುಸ್ಲಿಮರ ಮೇಲಿನ ಗುಂಪುಹಲ್ಲೆಗಳು ಈಗ ದ.ಕ.ಜಿಲ್ಲೆಯಲ್ಲೂ ವರದಿಯಾಗುತ್ತಿರು ವುದು ಕಳವಳಕಾರಿಯಾಗಿದೆ. ಮುಸ್ಲಿಮರನ್ನು ಗುರಿಯಾಗಿಸಿ ವಿನಾಕಾರಣ ನಡೆಯುವ ಇಂತಹ ಗುಂಪುಹಲ್ಲೆ ಗಳಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದ್ದರೂ ಆಡಳಿತ ವರ್ಗ ಹಾಗೂ ಪೊಲೀಸ್ ಇಲಾಖೆ ಮೂಕಪ್ರೇಕ್ಷಕರಂತೆ ವರ್ತಿಸುತ್ತಿರುವುದು ವಿಪರ್ಯಾಸ ಎಂದು ಮುಸ್ಲಿಂ ಲೀಗ್ ಪ್ರಕಟನೆಯಲ್ಲಿ ತಿಳಿಸಿದೆ.

ಕಾಣಿಯೂರು ಕೃತ್ಯವನ್ನು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಕಾರ್ಯದರ್ಶಿಗಳಾದ ಮುಹಮ್ಮದ್ ಇಸ್ಮಾಯೀಲ್ ಮತ್ತು ರಿಯಾಝ್ ಹರೇಕಳ ಖಂಡಿಸಿದ್ದು, ತಪ್ಪಿತಸ್ಥರ ವಿರುದ್ಧ ಪೊಲೀಸರು ಸೂಕ್ತ ಕ್ರಮ ಜರಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಯುನಿವೆಫ್ ಕರ್ನಾಟಕ ಖಂಡನೆ

ಕಡಬ ತಾಲೂಕಿನ ಕಾಣಿಯೂರು ಗ್ರಾಮದ ಬೆದ್ರಾಜೆ ಎಂಬಲ್ಲಿ ಬಟ್ಟೆ ವ್ಯಾಪಾರಿಗಳಿಗೆ ಧರ್ಮದ ಆಧಾರದಲ್ಲಿ ನಡೆದ ಗುಂಪು ಹಲ್ಲೆಗೆ ಯುನಿವೆಫ್ ಕರ್ನಾಟಕ ಖಂಡಿಸಿದೆ.

ಅಲ್ಪಸಂಖ್ಯಾತರನ್ನು ಬೆದರಿಸಲು ಕ್ಷುಲ್ಲಕ ಕಾರಣಗಳನ್ನು ನೆಪವಾಗಿಸಿ ನಡೆಯುವ ಇಂತಹ ಹಲ್ಲೆಗಳು ಜನ ಸಾಮಾನ್ಯರ ಬದುಕುವ ಹಕ್ಕನ್ನು ಕಸಿದುಕೊಳ್ಳುತ್ತವೆ. ಪೊಲೀಸ್ ಇಲಾಖೆ ಇಂತಹ ಸಮಾಜಘಾತುಕರ ಮೇಲೆ ಕಟ್ಟುನಿಟ್ಟಿನ ಕ್ರಮಕೈಗೊಂಡು ಸಮಾಜದಲ್ಲಿ ನಿರ್ಭೀತ ವಾತಾವರಣವನ್ನು ನಿರ್ಮಿಸುವಂತೆ ಯುನಿವೆಫ್ ಕರ್ನಾಟಕ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಆಗ್ರಹಿಸಿದ್ದಾರೆ.

ಕೊಲೆಯತ್ನ ಪ್ರಕರಣದಡಿ ಬಂಧಿಸಲು ಸಿಪಿಎಂ ಒತ್ತಾಯ

ಕಾಣಿಯೂರುವಿನಲ್ಲಿ ಬೆಡ್‌ಶೀಟ್ ಮಾರಾಟ ಮಾಡಲು ತೆರಳಿದ್ದ ಅಡ್ಡೂರಿನ ವ್ಯಾಪಾರಸ್ಥರಾದ ರಫೀಕ್ ಮತ್ತು ರಮೀಝುದ್ದೀನ್‌ರ ಮೇಲೆ ಬಿಜೆಪಿ ಸಂಘಟಿತ ಗುಂಪು ನಡೆಸಿದ ಮಾರಣಾಂತಿಕ ಹಲ್ಲೆಯನ್ನು ಸಿಪಿಎಂ ದ.ಕ.ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸಿದೆ.

ಹಲ್ಲೆ ನಡೆಸಿದ ತಪ್ಪಿತಸ್ಥರ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿ ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸಬೇಕು ಎಂದು ಪಕ್ಷದ ಕಾರ್ಯದರ್ಶಿ ಕೆ. ಯಾದವ ಶೆಟ್ಟಿ ಆಗ್ರಹಿಸಿದ್ದಾರೆ.

ದ.ಕ.ಜಿಲ್ಲಾ ಡಿವೈಎಫ್‌ಐ ನಿಯೋಗ ಭೇಟಿ

ಕಾಣಿಯೂರು ಹಲ್ಲೆ ಪ್ರಕರಣದ ಆರೋಪಿಗಳನ್ನು ಕೊಲೆಯತ್ನ ಪ್ರಕರಣದಡಿ ಕೂಡಲೇ ಬಂಧಿಸಬೇಕು. ಸಂತ್ರಸ್ತರಿಗೆ ಸೂಕ್ತ ನಷ್ಟ ಪರಿಹಾರ ಒದಗಿಸಬೇಕು. ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಡಿವೈಎಫ್‌ಐ ದ.ಕ ಜಿಲ್ಲಾ ಸಮಿತಿಯ ನಿಯೋಗ ಶನಿವಾರ ಮನವಿ ಸಲ್ಲಿಸಿದೆ.

ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಝ್, ಕಾರ್ಯದರ್ಶಿ ಸಂತೋಷ್ ಬಜಾಲ್, ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ರೇವಂತ್ ಕದ್ರಿ, ಡಿವೈಎಫ್‌ಐ ಜಿಲ್ಲಾ ಮುಖಂಡರಾದ ರಫೀಕ್ ಹರೇಕಳ, ಮುಸ್ತಫಾ ಕಲ್ಲಕಟ್ಟೆ, ಆಸೀಫ್ ನಿಯೋಗದಲ್ಲಿದ್ದರು.

ದ.ಕ.ಜಿಲ್ಲಾ ಎಸ್ಕೆಎಸೆಸ್ಸೆಫ್ ಖಂಡನೆ

ಕಾಣಿಯೂರು ಗ್ರಾಮದಲ್ಲಿ ಮೊನ್ನೆ ಇಬ್ಬರು ಬಟ್ಟೆ ವ್ಯಾಪಾರಿಗಳ ಮೇಲೆ ನಡೆದ ಮಾರಣಾಂತಿಕ ಹಲ್ಲೆಯನ್ನು ಎಸ್ಕೆಎಸೆಸ್ಸೆಫ್ ದ.ಕ.ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸಿದೆ.

ಆರೋಪಿಗಳನ್ನು ಯುಎಪಿಎ ಕಾಯ್ದೆಯಡಿ ಬಂಧಿಸಿ ಶೀಘ್ರ ಅವರನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕು. ಇಂತಹ ಅಮಾನವೀಯ ಘಟನೆಗಳು ಮತ್ತೆ ಮರುಕಳಿಸದಂತೆ ಜಿಲ್ಲಾಡಳಿತ ಎಚ್ಚರಿಕೆ ವಹಿಸಬೇಕು. ಗಾಯಾಳುಗಳ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಜಿಲ್ಲಾಡಳಿತ ಭರಿಸಬೇಕು ಎಂದು ಎಸ್ಕೆಎಸೆಸ್ಸೆಫ್ ದ.ಕ. ಜಿಲ್ಲಾ ವೆಸ್ಟ್ ಅಧ್ಯಕ್ಷ ಸಯ್ಯದ್ ಅಮೀರ್ ತಂಳ್ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಉತ್ತರ ಭಾರತದ ಕ್ರೂರ ಸಂಸ್ಕೃತಿ, ಶಾಂತಿಪ್ರಿಯ ದ.ಕ.ಜಿಲ್ಲೆಗೆ ಕಾಲಿಟ್ಟಿರುವುದು ಖೇದಕರ. ಗುಂಪು ಹಲ್ಲೆಯ ಮೂಲಕ ಇಲ್ಲಿನ ಜಾತ್ಯತೀತ ವ್ಯವಸ್ಥೆಗೆ ಧಕ್ಕೆ ತರಲು ಪ್ರಯತ್ನಿಸುವ ದೇಶದ್ರೋಹಿ ಶಕ್ತಿಗಳ ವಿರುದ್ಧ ಯಾವುದೇ ಕರುಣೆ ತೋರಿಸದೆ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಸಮಿತಿಯು ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News