ರಾಜಸ್ಥಾನದಲ್ಲಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡ 200ಕ್ಕೂ ಅಧಿಕ ದಲಿತ ಕುಟುಂಬಗಳು

Update: 2022-10-22 18:24 GMT
ಸಾಂದರ್ಭಿಕ ಚಿತ್ರ: (sabrangindia.in)

ಜೈಪುರ: ರಾಜಸ್ಥಾನದ ಬರಾನ್ ಜಿಲ್ಲೆಯ ಛಾಬ್ರಾದಲ್ಲಿರುವ ಭುಲೋನ್ ಗ್ರಾಮದಲ್ಲಿ ಪ್ರಬಲ ಜಾತಿಯ ದೌರ್ಜನ್ಯದಿಂದ ಬೇಸತ್ತು 200ಕ್ಕೂ ಅಧಿಕ ದಲಿತ ಕುಟುಂಬಗಳು ಬೌದ್ಧ ಧರ್ಮಕ್ಕೆ ಸೇರಿವೆ.

ಈ ಕುಟುಂಬಗಳು ಪೊಲೀಸರು ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ. 15 ದಿನಗಳ ಹಿಂದೆ ದುರ್ಗಾ ದೇವಿಗೆ ಆರತಿ ಬೆಳಗಿರುವುದಕ್ಕಾಗಿ ಪ್ರಬಲ ಜಾತಿಯ ಜನರು ದಲಿತ ಯುವಕರ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಈ ಕುಟುಂಬಗಳು ಆರೋಪಿಸಿವೆ.

ಅವರು ಪ್ರತಿಭಟನೆ ನಡೆಸಿದ್ದಾರೆ ಹಾಗೂ ದೇವರು ಹಾಗೂ ದೇವತೆಗಳ ವಿಗ್ರಹಗಳನ್ನು ಬೈತಾಲಿ ನದಿಯಲ್ಲಿ ಶುಕ್ರವಾರ ವಿಸರ್ಜನೆ ಮಾಡಿದ್ದಾರೆ.

ಭುಲೋನ್ ಗ್ರಾಮದಲ್ಲಿ ದಲಿತ ಸಮುದಾಯಕ್ಕೆ ಸೇರಿದ ರಾಮ್ಹೇಟ್ ಐರ್ವಾಲ್ ಹಾಗೂ ರಾಜೇಂದ್ರ ಎಂಬವರು ಅಕ್ಟೋಬರ್ 5ರಂದು ದುರ್ಗಾದೇವಿಗೆ ಆರತಿ ಬೆಳಗಿದ್ದರು. ಈ ಸಂದರ್ಭ ಅಲ್ಲಿದ್ದ ಸರಪಂಚರ ಸಹವರ್ತಿಗಳಾದ ರಾಹುಲ್ ಶರ್ಮಾ ಹಾಗೂ ಲಾಲ್‌ಚಂದ್ ಲೋಧಾ ಅವರಿಬ್ಬರ ಮೇಲೆ ಹಲ್ಲೆ ನಡೆಸಿದ್ದರು. ಈ ಘಟನೆಯ ಬಳಿಕ ನಾವು ಜಿಲ್ಲಾಡಳಿತ ಹಾಗೂ ಪೊಲೀಸರಲ್ಲಿ ದೂರು ದಾಖಲಿಸಿದೆವು. ಆದರೆ, ಯಾವುದೇ ಪ್ರಯೋಜನ ಆಗಲಿಲ್ಲ ಎಂದು ಬರಾನ್ ಜಿಲ್ಲೆಯ ಬೈರವ ಮಹಾಸಭಾ ಯುವ ಮೋರ್ಚಾದ ಅಧ್ಯಕ್ಷ ಬಾಲಮುಕುಂದ್ ಭೈರವ ಅವರು ಹೇಳಿದ್ದಾರೆ.

ನ್ಯಾಯಕ್ಕಾಗಿ ನಾವು ಪೊಲೀಸರು, ಮುಖ್ಯಮಂತ್ರಿ, ಪ್ರಧಾನಿ, ರಾಷ್ಟ್ರಪತಿ ಅವರಿಗೆ ಮನವಿ ಮಾಡಿದೆವು. ಆದರೆ ಅವರು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಆದುದರಿಂದ ನಾವು ಸಾಮೂಹಿಕವಾಗಿ ಧರ್ಮ ಮತಾಂತರಗೊಳ್ಳುವ ನಿರ್ಧಾರ ತೆಗೆದುಕೊಂಡೆವು.  ಗ್ರಾಮದಲ್ಲಿ ಶುಕ್ರವಾರ ‘ಆಕ್ರೋಶ್ ರ್ಯಾಲಿ’ ನಡೆಸಲಾಯಿತು. ಅನಂತರ ದೇವರುಗಳ ವಿಗ್ರಹ ಹಾಗೂ ಚಿತ್ರಗಳನ್ನು ನದಿ ನೀರಿನಲ್ಲಿ ವಿಸರ್ಜಿಸಲಾಯಿತು ಎಂದು ದಲಿತ ಸಮುದಾಯಕ್ಕೆ ಸೇರಿದ ಜನರು ಹೇಳಿದ್ದಾರೆ.

ಪ್ರತಿಭಟನೆ ನಡೆದ ಸಂದರ್ಭ ಪ್ರತಿಭಟನಕಾರರು ಆಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿದರು. ಅನಂತರ ಬಿ.ಆರ್. ಅಂಬೇಡ್ಕರ್ ಅವರ ಪ್ರತಿಜ್ಞೆ ಸ್ವೀಕರಿಸಿದರು. ‘‘ದಲಿತ ಕುಟುಂಬಗಳು ಈಗಲೂ ಬೆದರಿಕೆ ಎದುರಿಸುತ್ತಿದೆ. ಗ್ರಾಮ ತ್ಯಜಿಸುವಂತೆ ಅವರು ಎಚ್ಚರಿಸಿದ್ದಾರೆ’’ ಎಂದು ಬಾಲಮುಕುಂದ್ ಬೈರವ ಅವರು ಹೇಳಿದ್ದಾರೆ.

ಇನ್ನೊಂದೆಡೆ ಡಿಎಸ್‌ಪಿ ಪೂಜಾ ನಗರ್ ಅವರು, ಘಟನೆಯನ್ನು ಕೆಲವರು ರಾಜಕೀಯವಾಗಿ ತಿರುಚಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಸಂಬಂಧಿತ ಪೊಲೀಸ್ ಠಾಣೆಯಲ್ಲಿ ದಲಿತರು ದೂರು ದಾಖಲಿಸಿದ್ದಾರೆ.   ಆದರೆ, ಸರಪಂಚರ ಸಹವರ್ತಿಗಳ ಹೆಸರು ಉಲ್ಲೇಖಿಸಿಲ್ಲ. ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News