ದಲಿತ ದೌರ್ಜನ್ಯ ಪ್ರಕರಣ: ಪೊಲೀಸರಿಂದ ದೂರುದಾರಿಗೆ ಧೈರ್ಯ ತುಂಬುವ ಕೆಲಸವಾಗಲಿ

Update: 2022-10-23 12:14 GMT

ಮಂಗಳೂರು, ಅ.23: ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಪೊಲೀಸರು ದೂರುದಾರರಿಗೆ ಧೈರ್ಯ ತುಂಬಿಸಿ ಅವರಿಗೆ ನ್ಯಾಯ ಸಿಗುವಂತೆ ಮಾಡಬೇಕು ಎಂದು ದಲಿತ ಮುಂದಾಳುಗಳು ಒತ್ತಾಯಿಸಿದ್ದಾರೆ.

ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅಂಶು ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಜರಗಿದ ಪರಿಶಿಷ್ಟ ಜಾತಿ, ಪಂಗಡದವರ ಕುಂದುಕೊರತೆ ಸಭೆಯಲ್ಲಿ ದಲಿತ ಮುಖಂಡ ಎಸ್.ಪಿ. ಆನಂದ ಅವರು ವಿಷಯ ಪ್ರಸ್ತಾಪಿಸಿದರು.

ದಲಿತ ದೌರ್ಜನ್ಯ ಪ್ರಕರಣಗಳು ದಾಖಲಾದಾಗ ದೌರ್ಜನ್ಯ ಮಾಡಿದವರು ದೂರುದಾರರನ್ನು ಹೆದರಿಸುತ್ತಾರೆ. ರಾಜಿ ಮಾಡಿಕೊಳ್ಳುವಂತೆ ಒತ್ತಾಯಿಸುತ್ತಾರೆ. ಕೆಲವು ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್ ಸಲ್ಲಿಸಲಾಗುತ್ತದೆ. ಇದರಿಂದ ದೌರ್ಜನ್ಯಕ್ಕೊಳಗಾದವರಿಗೆ ನ್ಯಾಯ ಸಿಗುವುದಿಲ್ಲ. ಈ ಸಂದರ್ಭ ದೂರುದಾರರಿಗೆ ಪೊಲೀಸರು ಧೈರ್ಯ ತುಂಬಿಸಬೇಕು ಎಂದು ಅವರು ಆಗ್ರಹಿಸಿದರು.  

ಇದಕ್ಕೆ ಪ್ರತಿಕ್ರಿಯಿಸಿದ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ಅವರು, ಈಗಾಗಲೇ ಪೊಲೀಸ್ ಠಾಣೆಗಳಲ್ಲಿ ‘ದೂರುದಾರರ ದಿನ’ದಂದು ದೂರುದಾರರೊಂದಿಗೆ ಚರ್ಚಿಸಿ ಅವರಿಗೆ ಪ್ರಕರಣದ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ನಗರದಲ್ಲಿ ಕೆಲವೆಡೆ ಕೆಲವು ಮದ್ಯದಂಗಡಿ ಬಳಿಯಿಂದ ಮದ್ಯ ಸೇವಿಸಿ ತೀರಾ ನಿರ್ಲಕ್ಷ್ಯದಿಂದ ವಾಹನ ಚಲಾಯಿಸುತ್ತಾರೆ. ಈ ಸಂದರ್ಭ ರಸ್ತೆ ಬದಿ ಪ್ರಯಾಣಿಸುವವರು ಅಪಾಯವನ್ನು ಎದುರಿಸಬೇಕಾಗುತ್ತದೆ. ಇಂತಹ  ಚಾಲಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಮಲಜ್ಯೋತಿ ಅವರು ಒತ್ತಾಯಿಸಿದರು.

ಅಂಬೇಡ್ಕರ್ ನಿಮಗಕ್ಕೆ ಸಾವಿರಾರು ಸಂಖ್ಯೆಯಲ್ಲಿ ಬರುವ ಅರ್ಜಿಗಳನ್ನು ವಿಲೇ ಮಾಡುವ ನಿಟ್ಟಿನಲ್ಲಿ ಫಲಾನುಭವಿ ಗಳ ಆಯ್ಕೆಯನ್ನು ಜಿಲ್ಲಾಧಿಕಾರಿಗಳ ಮೂಲಕ ನಡೆಸಬೇಕು ಎಂದು ಸಭೆಯಲ್ಲಿ ಆಗ್ರಹ ವ್ಯಕ್ತವಾಯಿತು.

ಕ್ರೇನ್ ಅಪರೇಟರ್ ಆಗಿ ದುಡಿಯುತ್ತಿದ್ದ ತನಗೆ ಕ್ರೇನ್ ಮಾಲಕರು ಹಾಗೂ ಕಂಪನಿಯ ಇತರರು ತೊಂದರೆ, ಜೀವ ಬೆದರಿಕೆಯೊಡ್ಡುತ್ತಿದ್ದಾರೆ. ಕಳೆದ ಆರು ತಿಂಗಳಿನಿಂದ ತಾನು ನಿರುದ್ಯೋಗಿಯಾಗಿದ್ದೇನೆ. ಈ ಬಗ್ಗೆ ದೂರು ನೀಡಿದ್ದರೂ ಪ್ರಕರಣ ದಾಖಲಿಸಲಾಗಿಲ್ಲ ಎಂದು ದಲಿತ ಯುವಕ ಪೊಲೀಸ್ ಅಧಿಕಾರಿಗಳೆದುರು ತಮ್ಮ ಅಹವಾಲು ತೋಡಿಕೊಂಡರು.

ದಲಿತ ಮುಖಂಡ ಎಸ್.ಪಿ. ಆನಂದ ಅವರು ಪೂರಕವಾಗಿ ಮಾತನಾಡಿ, ಫಿರ್ಯಾದಿದಾರರ ದೂರನ್ನು ಪೊಲೀಸರು ಸ್ವೀಕರಿಸುತ್ತಿಲ್ಲ. ಯುವಕನ ಮೇಲೆ ಈಗಾಗಲೇ ಪ್ರಾಣಬೆದರಿಕೆಯಿದ್ದು, ಈ ಬಗ್ಗೆ ಗಮನ ಹರಿಸಬೇಕೆಂದು ಆಗ್ರಹಿಸಿದರು.

ಪ್ರಕರಣ ದಾಖಲಿಸಿ ವಿಚಾರಣೆ ನಡೆಸುವಂತೆ ಡಿಸಿಪಿ ಅಂಶುಕುಮಾರ್ ಠಾಣಾಧಿಕಾರಿಗೆ ಸಭೆಯಲ್ಲಿ ಸೂಚನೆ ನೀಡಿದರು.

ಬೆಳುವಾಯಿಯ ದಲಿತ ಮಹಿಳೆಯೋರ್ವರ ಮನೆಗೆ ರಸ್ತೆ ನಿರ್ಮಾಣಕ್ಕೆ ಪೊಲೀಸರು ತಡೆಯೊಡ್ಡಿದ್ದಾರೆ. ಪಟ್ಟಾ ಜಾಗದಲ್ಲಿ ರಸ್ತೆ ನಿರ್ಮಿಸಲಾಗುತ್ತಿದೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆದಿಲ್ಲ. ಆದರೂ  ಪೊಲೀಸರು ಅಡ್ಡಿಯನ್ನುಂಟು ಮಾಡುವುದು ಸರಿಯಲ್ಲ ಎಂದು ಸುನಿಲ್ ಎಂಬವರು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ ದಿನೇಶ್ ಕುಮಾರ್ ಅವರು, ರಸ್ತೆ  ನಿರ್ಮಾಣ ಸಂದರ್ಭ ಆಕ್ಷೇಪವಿದ್ದಾಗ ಅಹಿತಕರ ಘಟನೆ ನಡೆಯುವ ಸಾಧ್ಯತೆ ಇದ್ದರೆ ಪೊಲೀಸರು ತಡೆಯೊಡ್ಡಿರಬಹುದು. ಪ್ರಕರಣದ ಬಗ್ಗೆ  ಪಡೆದು ಕೊಳ್ಳಲಾಗುವುದು ಎಂದರು.

ವಿಶ್ವನಾಥ್ ಚೆಂತಿಮಾರ್, ಪರಮೇಶ್ವರ್ ಮೊದಲಾದವರು ವಿವಿಧ ಅಹವಾಲುಗಳನ್ನು ಸಲ್ಲಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News