ಪಾಕ್‌ ವಿರುದ್ಧದ ಆಟ ತನ್ನ ವೃತ್ತಿ ಜೀವನದ ಅತ್ಯುತ್ತಮ ಇನಿಂಗ್ಸ್‌: ವಿರಾಟ್‌ ಕೊಹ್ಲಿ

Update: 2022-10-23 16:18 GMT

ಮೆಲ್ಬರ್ನ್‌: ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಭಾರತದ ಗೆಲುವಿಗೆ ಕಾರಣೀಕರ್ತರಾದ ವಿರಾಟ್‌ ಕೊಹ್ಲಿ, ಈ ಪಂದ್ಯದ ಬಗ್ಗೆ ಹೇಳಲು ಪದಗಳೇ ಸಾಲುತ್ತಿಲ್ಲ ಎಂದು ಹೇಳಿದ್ದಾರೆ.

ಪಂದ್ಯದ ಬಳಿಕ ಮಾತನಾಡಿರುವ ಮಾಜಿ ಕ್ಯಾಪ್ಟನ್‌ ವಿರಾಟ್‌, “ಪ್ರಾಮಾಣಿಕವಾಗಿ ಹೇಳಬೇಕಾದರೆ ನನ್ನಲ್ಲಿ ಮಾತುಗಳೇ ಇಲ್ಲ. ಇದೆಲ್ಲ ಹೇಗಾಯಿತು ಎಂದೂ ಗೊತ್ತಾಗುತ್ತಿಲ್ಲ. ಜೊತೆಯಾಟದ ವೇಳೆ ಹಾರ್ದಿಕ್‌ ಪಾಂಡ್ಯ, ಕೊನೆವರೆಗೂ ನಾವು ಆಡುತ್ತೇವೆ ಎಂಬ ನಂಬಿಕೆ ಇರಲಿ ಎಂದು ಭರವಸೆ ನೀಡುತ್ತಲೇ ಇದ್ದ” ಎಂದು ಹೇಳಿದ್ದಾರೆ.

ರನ್‌ ಗತಿ ಹೆಚ್ಚಿಸಲು ನಿರ್ಧರಿಸಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ʼಶಾಹೀನ್ ಅಫ್ರಿದಿ (17ನೇ ಓವರ್‌) ಬೌಲಿಂಗ್‌ ಮಾಡಲು ಬಂದಾಗ ಮೇಲುಗೈ ಸಾಧಿಸಬೇಕು ಎಂದು ಪಾಂಡ್ಯಗೆ ಹೇಳಿದೆ. ನಮ್ಮದು ಸರಳ ಲೆಕ್ಕಾಚಾರವಾಗಿತ್ತು.  ಮಹಮ್ಮದ್‌ ನವಾಝ್‌ ಗೆ ಒಂದು ಓವರ್‌ ಬಾಕಿ ಇದೆ. ಹಾಗಾಗಿ, ಹಾರಿಸ್‌ ರವೂಫ್‌ ಓವರ್‌ನಲ್ಲಿಕ ರನ್‌ ಗಳಿಸಿಕೊಂಡರೆ, ಅವರು ಗೊಂದಲಕ್ಕೀಡಾಗುತ್ತಾರೆ ಎಂದು ಮಾತನಾಡಿಕೊಂಡೆವು. ಅದರಂತೆಯೇ ಆಡಿದೆವು. ಎಂಟು ಎಸೆತಗಳಲ್ಲಿ 28 ರನ್‌ ಬೇಕಿದ್ದಾಗ ಎರಡು ಸಿಕ್ಸ್ ಬಾರಿಸಿದೆ. ಕೊನೆಯ ಆರು ಎಸೆತಗಳಲ್ಲಿ 16 ರನ್‌ ಬೇಕಾಯಿತು. ಇದನ್ನೆಲ್ಲ ವಿವರಿಸಲು ನನ್ನ ಬಳಿ ಪದಗಳೇ ಇಲ್ಲʼ ಎಂದು ಹೇಳಿದ್ದಾರೆ.

ಪಾಕ್‌ ವಿರುದ್ಧದ ಆಟ ತನ್ನ ವೃತ್ತಿ ಜೀವನದ ಅತ್ಯುತ್ತಮ ಇನಿಂಗ್ಸ್‌

'(2016ರಲ್ಲಿ ಆಸ್ಟ್ರೇಲಿಯಾ ವಿರುದ್ಧ) ಮೊಹಾಲಿಯಲ್ಲಿ ಆಡಿದ್ದ ಇನಿಂಗ್ಸ್‌ ಇದುವರೆಗೆ ನನ್ನ ಅತ್ಯುತ್ತಮ 20-20 ಇನಿಂಗ್ಸ್‌ ಎಂದು ಭಾವಿಸಿದ್ದೆ. ಆ ಪಂದ್ಯದಲ್ಲಿ 51 ಎಸೆತಗಳಲ್ಲಿ 82 ರನ್ ಬಾರಿಸಿದ್ದೆ. ಇಂದು 53 ಬೌಲ್‌ಗಳಲ್ಲಿ 82 ರನ್ ಬಾರಿಸಿದ್ದೇನೆ. ಈ ಎರಡೂ ಇನಿಂಗ್ಸ್‌ಗಳು ವಿಶೇಷವಾದವು. ಪಂದ್ಯದ ಸಂದರ್ಭ ಮತ್ತು ನಾವಿದ್ದ ಪರಿಸ್ಥಿತಿಯನ್ನು ಪರಿಗಣಿಸಿದರೆ ಇಂದಿನ ಇನಿಂಗ್ಸ್‌ ಅತ್ಯುತ್ತಮವಾದದ್ದು ಎಂದು ಅಂದುಕೊಳ್ಳುತ್ತೇನೆʼ ಎಂದು ಕೊಹ್ಲಿ ಹೇಳಿದ್ದಾರೆ.,  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News