ಬಂಗಾಳಕ್ಕೆ ನಿಕಟವಾಗುತ್ತಿರುವ ಸಿತ್ರಾಂಗ್ ಚಂಡಮಾರುತ: ಅತ್ಯಂತ ಹೆಚ್ಚಿನ ಅಪಾಯದ ಭೀತಿಯಲ್ಲಿ ಸುಂದರಬನ್ಸ್

Update: 2022-10-24 17:41 GMT

ಕೋಲ್ಕತಾ,ಅ.24: ಸಿತ್ರಾಂಗ್ ಚಂಡಮಾರುತ(Cyclone Sitrang)ವು ಪ.ಬಂಗಾಳವನ್ನು ಸಮೀಪಿಸುತ್ತಿದ್ದು,ದಕ್ಷಿಣ 24 ಪರಗಣಗಳ ಮತ್ತು ಉತ್ತರ 24 ಪರಗಣಗಳ ಜಿಲ್ಲೆಗಳ ಕರಾವಳಿ ಪ್ರದೇಶದಲ್ಲಿರುವ ಸುಂದರಬನ್ಸ್ (Sundarbans)ವಿನಾಶಕ್ಕೆ ತುತ್ತಾಗುವ ಅತ್ಯಂತ ಹೆಚ್ಚಿನ ಅಪಾಯದಲ್ಲಿದೆ ಎಂದು ಗುರುತಿಸಲಾಗಿದೆ.

ಮೇ 2009ರ ಐಲಾ,ಮೇ 2020ರ ಅಂಫಾನ್,ಮೇ 2021ರ ಯಾಸ್ ಚಂಡಮಾರುತಗಳ ಸಂದರ್ಭಗಳಲ್ಲಿಯೂ ಸುಂದರಬನ್ಸ್ ಅತ್ಯಂತ ಹೆಚ್ಚಿನ ವಿನಾಶಕ್ಕೆ ಗುರಿಯಾಗಿತ್ತು. ಕೋಲ್ಕತಾದಲ್ಲಿರುವ ಭಾರತೀಯ ಹವಾಮಾನ ಇಲಾಖೆಯ ಕಚೇರಿಯು ತಿಳಿಸಿರುವಂತೆ ಸಿತ್ರಾಂಗ್ ಚಂಡಮಾರುತ ಈಗ ಗಂಗಾ ನದಿಯು ಬಂಗಾಳ ಕೊಲ್ಲಿಯನ್ನು ಸೇರುವ ಸಾಗರ ದ್ವೀಪದಿಂದ 380 ಕಿ.ಮೀ.ದೂರದಲ್ಲಿದೆ.

ಚಂಡಮಾರುತವು ಮಂಗಳವಾರ ನಸುಕಿನ ವೇಳೆಗೆ ಸುಂದರಬನ್ಸ್ನ ತಿನ್ಕೋನಾ ದ್ವೀಪ ಮತ್ತು ಬಾಂಗ್ಲಾದೇಶದ ಸ್ಯಾಂಡ್ವಿಪ್ ನಡುವೆ ಅಪ್ಪಳಿಸುವ ನಿರೀಕ್ಷೆಯಿದೆ. ಕರಾವಳಿ ಪ್ರದೇಶಗಳಲ್ಲಿ ಭಾರೀ ಗಾಳಿ ಮತ್ತು ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ 24 ಪರಗಣಗಳ,ಉತ್ತರ 24 ಪರಗಣಗಳ ಮತ್ತು ಪೂರ್ವ ಮಿಡ್ನಾಪುರ ಜಿಲ್ಲೆಗಳಲ್ಲಿ ಗಂಟೆಗೆ 70ರಿಂದ 80 ಕಿ.ಮೀ.ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ತನ್ನ ನಿವಾಸದಲ್ಲಿ ವಾರ್ಷಿಕ ಕಾಳಿ ಪೂಜಾದ ಹಿನ್ನೆಲೆಯಲ್ಲಿ ಅಲ್ಲಿಂದಲೇ ಪರಿಸ್ಥಿತಿಯ ಮೇಲೆ ನಿಗಾಯಿರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂಭಾವ್ಯ ಪರಿಸ್ಥಿತಿಯನ್ನೆದುರಿಸಲು ಅಧಿಕಾರಿಗಳು ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಭಾರತೀಯ ವಾಯುಪಡೆ ಮತ್ತು ಎನ್ಡಿಆರ್ಎಫ್ ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News