ರಿಷಿ ಸುನಾಕ್ 200 ವರ್ಷದಲ್ಲೇ ಬ್ರಿಟನ್‍ನ ಅತ್ಯಂತ ಕಿರಿಯ ಪ್ರಧಾನಿ

Update: 2022-10-25 02:24 GMT
ರಿಷಿ ಸುನಾಕ್

ಲಂಡನ್: ಬ್ರಿಟನ್‍ನ ಪ್ರಧಾನಿಯಾಗಿ ಕನ್ಸರ್ವೇಟಿವ್ ಪಾರ್ಟಿ(Conservative Party)ಯಿಂದ ನಿಯೋಜಿತರಾಗಿರುವ ರಿಷಿ ಸುನಾಕ್ (Rishi Sunak)  ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.

ಪ್ರಪ್ರಥಮ ಭಾರತೀಯ ಮೂಲದ ಪ್ರಧಾನಿ, ಮೊದಲ ಹಿಂದೂ, ಮೊದಲ ಬಿಳಿಯೇತರ ವರ್ಣದ ಪ್ರಧಾನಿ ಎಂಬ ಹೆಗ್ಗಳಿಕೆಗಳ ಜತೆಗೆ 200 ವರ್ಷಗಳಲ್ಲೇ ದೇಶದ ಅತ್ಯಂತ ಕಿರಿಯ ಪ್ರಧಾನಿ ಎನಿಸಿಕೊಂಡಿದ್ದಾರೆ ಎಂದು timesofindia.com ವರದಿ ಮಾಡಿದೆ.

ಪಕ್ಷದ ನಾಯಕತ್ವ ಚುನಾವಣೆಯಲ್ಲಿ ಸೋಲು ಅನುಭವಿಸಿದ ಎರಡೇ ತಿಂಗಳಲ್ಲಿ ಒಲಿಸಿಕೊಂಡಿರುವ ಸುನಾಕ್, 100ಕ್ಕಿಂತ ಅಧಿಕ ಸಂಸದರ ಬೆಂಬಲ ಹೊಂದಿದ ಏಕೈಕ ನಾಯಕ ಎನಿಸಿಕೊಂಡಿದ್ದಾರೆ. ನಾಮಪತ್ರ ಸಲ್ಲಿಕೆಗೆ ಅಂತಿಮ ಗಡುವು ಆಗಿದ್ದ ಸಂಜೆ 6.30ರವರೆಗೂ 100 ಸಂಸದರ ಬೆಂಬಲಕ್ಕಿಂತ ಅಲ್ಪ ಕಡಿಮೆ ಬೆಂಬಲ ತಮಗೆ ಇದೆ ಎಂದು ಪೆನ್ನಿ ಮಾಡ್ರೆಂಟ್ ಬಣ ಹೇಳುತ್ತಾ ಬಂದಿದ್ದು ಕುತೂಹಲಕ್ಕೆ ಕಾರಣವಾಗಿತ್ತು.

1812ರ ಬಳಿಕ ಬ್ರಿಟನ್‍ನ ಅತ್ಯಂತ ಕಿರಿಯ ಪ್ರಧಾನಿ ಎಂಬ ಹೆಗ್ಗಳಿಕೆಗೂ ಸುನಾಕ್ ಪಾತ್ರರಾದರು. 42 ವರ್ಷ ವಯಸ್ಸಿನ ಸುನಾಕ್ ಕನ್ಸರ್ವೇಟಿವ್ ಪಕ್ಷದ ಮುಖಂಡರಾಗಿಯೂ ಕಾರ್ಯ ನಿರ್ವಹಿಸಲಿದ್ದಾರೆ. ರಾಜನಿಂದ ಸರ್ಕಾರ ರಚಿಸಲು ಆಹ್ವಾನ ಬಂದ ಬಳಿಕ ಅವರು ಬ್ರಿಟನ್‍ನ ಮುಂದಿನ ಪ್ರಧಾನಿಯಾಗಲಿದ್ದು, ನಂ.10 ನಿವಾಸದಲ್ಲಿ ಪತ್ನಿ ಅಕ್ಷತಾ ಮೂರ್ತಿ ಹಾಗೂ ಇಬ್ಬರು ಮಕ್ಕಳ ಜತೆ ವಾಸಿಸಲಿದ್ದಾರೆ.

ಅಕ್ಷತಾ ಮೂರ್ತಿ, ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿಯವರ ಮಗಳು. ಸುನಾಕ್ ಸಂಸದರಾಗಿ ಮೊದಲ ಬಾರಿ ಆಯ್ಕೆಯಾದ ಬಳಿಕ ಕೇವಲ ಏಳೇ ವರ್ಷಗಳಲ್ಲಿ ದೇಶದ ಅತ್ಯುನ್ನತ ಹುದ್ದೆಗೇರಿದ್ದಾರೆ. ಮಂಗಳವಾರ ಬ್ರಿಟನ್ ರಾಜ, ಬಕಿಂಗ್‍ಹ್ಯಾಂ ಪ್ಯಾಲೇಸ್‍ಗೆ ಸುನಾಕ್ ಅವರನ್ನು ಆಹ್ವಾನಿಸುವ ನಿರೀಕ್ಷೆ ಇದೆ.

1812ರಲ್ಲಿ ರಾಬರ್ಟ್ ಜೆನ್ಕಿನ್ಸನ್ (Robert Jenkinson) ಅವರು ಬ್ರಿಟನ್‍ನ ಅತ್ಯಂತ ಕಿರಿಯ ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ಸುನಾಕ್, ದೇಶದ ಅತ್ಯಂತ ಕಿರಿಯ ಪ್ರಧಾನಿ ಎನಿಸಲಿದ್ದಾರೆ. ರಾಬರ್ಟ್ ಅವರ ತಾಯಿಯ ಅಜ್ಜಿ ಕೂಡಾ ಕೊಲ್ಕತ್ತಾದಲ್ಲಿ ಜನಿಸಿದವರು ಹಾಗೂ ಭಾರತದಲ್ಲಿ ನೆಲೆಸಿದ ಪೋರ್ಚುಗೀಸ್ ಮೂಲದವರು ಎನ್ನುವುದು ವಿಶೇಷ.

ಒಡೆದ ಮನೆಯಾಗಿರುವ ಪಕ್ಷವನ್ನು ಒಗ್ಗೂಡಿಸುವುದು, ಗಂಭೀರ ಆರ್ಥಿಕ ಸಮಸ್ಯೆಯನ್ನು ಬಗೆಹರಿಸುವುದು ಮತ್ತು ಜೀವನ ವೆಚ್ಚ ಸಮಸ್ಯೆ ನಿಭಾಯಿಸುವುದು ಹಾಗೂ ದಾಖಲೆ ಹಣದುಬ್ಬರವನ್ನು ನಿಯಂತ್ರಿಸುವುದು ಹೀಗೆ ಹೊಸ ಹೊಣೆಗಾರಿಕೆಯಲ್ಲಿ ಸುನಾಕ್ ಬೆಟ್ಟದಷ್ಟು ಸವಾಲುಗಳನ್ನು ನಿಭಾಯಿಸಬೇಕಿದೆ ಎಂದು timesofindia.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News