×
Ad

ಮಲ್ಪೆ ಬೀಚ್‌ನಲ್ಲಿ ಹಲವು ಮಂದಿಯಿಂದ ಸೂರ್ಯಗ್ರಹಣ ವೀಕ್ಷಣೆ

Update: 2022-10-25 20:29 IST

ಉಡುಪಿ, ಅ.25: ಉಡುಪಿ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕ ಸಂಘದ ನೇತೃತ್ವದಲ್ಲಿ ಮಲ್ಪೆಅಭಿವೃದ್ಧಿ ಸಮಿತಿ ಮತ್ತು ಪೂರ್ಣಪ್ರಜ್ಞ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಸಹಯೋಗದೊಂದಿಗೆ ಇಂದು ಮಲ್ಪೆ ಬೀಚ್‌ನಲ್ಲಿ ಸಹಸ್ರಾರು ಮಂದಿ ಸೂರ್ಯಗ್ರಹಣವನ್ನು ವೀಕ್ಷಿಸಿದರು.

ಉಡುಪಿಯಲ್ಲಿ ಸಂಜೆ 5:08ಕ್ಕೆ ಗ್ರಹಣ ಆರಂಭವಾಗಿದ್ದು 5.50ಕ್ಕೆ ಗರಿಷ್ಟ ಗ್ರಹಣವಾಗಿದೆ. ಸಂಜೆ 6.30ಕ್ಕೆ ಗ್ರಹಣ ಮುಗಿದಿದ್ದು, 6.06ಕ್ಕೆ ಸೂರ್ಯಾಸ್ತಮದ ವೇಳೆ ಕೊನೆಯ ಬಾರಿ ಸೂರ್ಯನನ್ನು ನೋಡಲಾಯಿತು. ಚಂದ್ರ ಸೂರ್ಯನಿಗೆ ಅಡ್ಡ ಬಂದಾಗ ಶೇ.10ರಷ್ಟು ಸೂರ್ಯಗ್ರಹಣವಾಗಿರುವುದು ಕಂಡುಬಂತು ಎಂದು ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕ ಸಂಘದ ಸಂಯೋಜಕ ಅತುಲ್ ಭಟ್ ತಿಳಿಸಿದರು.

ಸಂಘದಿಂದ ಬೀಚ್‌ನಲ್ಲಿ 3 ಇಂಚಿನ ಟೆಲಿಸ್ಕೋಪ್ ಮೂಲಕ ಎಲ್‌ಇಡಿ ಹಾಗೂ ಯೂಟ್ಯೂಬ್ ಮೂಲಕ ನೇರ ಪ್ರಸಾರ ಮಾಡಲಾಯಿತು. ಅಲ್ಲದೇ  ಎಂಟು ಇಂಚಿನ ಅಟೋಮೆಟಿಕ್ ಟೆಲಿಸ್ಕೋಪ್ ಹಾಗೂ ಎರಡು ಸಣ್ಣ ಟೆಲಿ ಸ್ಕೋಪ್‌ನಲ್ಲಿಯೂ ಸಾರ್ವಜನಿಕರು, ವಿದ್ಯಾರ್ಥಿಗಳು ಸೂರ್ಯಗ್ರಹಣವನ್ನು  ವೀಕ್ಷಿಸಿದರು ಎಂದು ಅವರು ಮಾಹಿತಿ ನೀಡಿದರು.

ಅಲ್ಲದೆ ಪಿನ್‌ಹೋಲ್ ಪ್ರಾಜೆಕ್ಟರ್, ಪಿನ್‌ಹೋಲ್ ಬಾಕ್ಸ್, 500 ಕನ್ನಡಕಗಳ ಮೂಲಕ ಸೂರ್ಯಗ್ರಹಣವನ್ನು ನೋಡಿದರು. ಕೊನೆಯ ನಾಲ್ಕು ನಿಮಿಷಗಳ ಕಾಲ ಅಪಾಯಕಾರಿಯಲ್ಲದ ಹಿನ್ನೆಲೆಯಲ್ಲಿ ಎಲ್ಲರು ಬರೀ ಕಣ್ಣಿನಲ್ಲಿ ಸೂರ್ಯ ನನ್ನು ವೀಕ್ಷಿಸಿದರು. ಸೂರ್ಯಾಸ್ತಮಾದ ವೇಳೆ ಕೆಂಪು ವರ್ಣದ ಸೂರ್ಯ ತುಂಬಾ ಆಕಷರ್ಣೀಯವಾಗಿತ್ತು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೂರ್ಮಾರಾವ್, ಉಡುಪಿ ಶಾಸಕ ಕೆ.ರಘುಪತಿ ಭಟ್, ದ.ಕ. ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ ಸೇರಿದಂತೆ ಹಲವು ಮಂದಿ ಗಣ್ಯರು ಸೂರ್ಯಗ್ರಹಣವನ್ನು ಟೆಲಿಸ್ಕೋಪ್ ಮೂಲಕ ವೀಕ್ಷಿಸಿದರು.

ಐಎಎಸ್ ಅಧಿಕಾರಿ ಎಂ.ಟಿ.ರೇಜು, ಶ್ರೀನಿವಾಸ ವಿವಿಯ ಉಪಕುಲಪತಿ ಡಾ.ಪಿ.ಶ್ರೀರಮಣ ಐತಾಳ್, ಖಗೋಳ ತಜ್ಞ ಡಾ.ಎ.ಪಿ.ಭಟ್, ಮಲ್ಪೆ ಅಭಿವೃದ್ಧಿ ಸಮಿತಿಯ ಸುದೇಶ್ ಶೆಟ್ಟಿ, ಪಿಪಿಸಿ ಕಾಲೇಜಿನ ಪ್ರಾಂಶುಪಾಲ ಡಾ.ರಾಘವೇಂದ್ರ ಎ., ಎಕ್ಯೂಎಸಿ ಸಂಯೋಜಕ ಡಾ.ವಿನಯ ಕುಮಾರ್, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರತಿಭಾ ಆಚಾರ್ಯ ಉಪಸ್ಥಿತರಿದ್ದರು. ಹಳೆ ವಿದ್ಯಾರ್ಥಿಗಳಾದ ದಿನೇಶ್ ಹೆಬ್ಬಾರ್ ಹಾಗೂ ಶುಭ್ರಶ್ರೀ ಶೆಣೈ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News