ಅರಣ್ಯಭೂಮಿ ಕಬಳಿಕೆ ಆರೋಪ : ಉತ್ತರಾಖಂಡ ನಿವೃತ್ತ ಡಿಜಿಪಿ ವಿರುದ್ಧ ಪ್ರಕರಣ ದಾಖಲು

Update: 2022-10-26 01:53 GMT
BS Sidhu (File photo) 

ಡೆಹ್ರಾಡೂನ್: ಉತ್ತರಾಖಂಡದ ರಾಜಪುರ ವಲಯದ ಬಿರ್ಗಿರ್‍ವಾಲಿ ಪ್ರದೇಶದಲ್ಲಿ 2012ರಲ್ಲಿ ಅಕ್ರಮವಾಗಿ ಅರಣ್ಯ ಭೂಮಿಯನ್ನು ಕಬಳಿಕೆ ಮಾಡಿದ ಆರೋಪದಲ್ಲಿ ಉತ್ತರಾಖಂಡದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಬಿ.ಎಸ್. ಸಿಧು (Uttarakhand ex-DGP BS Sidhu) ಹಾಗೂ ಇತರ ಏಳು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಈ ವೇಳೆ ಡೆಹ್ರಾಡೂನ್‍ನ ಹೆಚ್ಚುವರಿ ತಹಶೀಲ್ದಾರರಾಗಿದ್ದ ಸುಜಾ ಉದ್ದೀನ್ ಮತ್ತು ಮೀರಠ್ ಮೂಲದ ವಕಳಿರಾದ ದೀಪಕ್ ಶರ್ಮಾ ಹಾಗೂ ಸ್ಮಿತಾ ದೀಕ್ಷಿತ್ ಕೂಡಾ ಆರೋಪಿಗಳಲ್ಲಿ ಸೇರಿದ್ದಾರೆ.

ಮಸ್ಸೂರಿ ವಿಭಾಗೀಯ ಅರಣ್ಯಾಧಿಕಾರಿ (ಡಿಎಫ್‍ಓ) ಅಶುತೋಷ್ ಸಿಂಗ್ ನೀಡಿದ ದೂರಿನ ಮೇರೆಗೆ ಎಫ್‍ಐಆರ್ ದಾಖಲಿಸಲಾಗಿದೆ. ಆರೋಪಿಗಳು ನಕಲಿ ಐಡಿಗಳನ್ನು ಹಾಗೂ ಬಹಳಷ್ಟು ಹಿಂದೆಯೇ ಅಂದರೆ 1983ರಲ್ಲಿ ಮೃತಪಟ್ಟ ಭೂ ಮಾಲಕರ ಐಡಿಯನ್ನು ಕಂದಾಯ ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ ಎಂದೂ ಆಪಾದಿಸಲಾಗಿದೆ.

ಸಿಧು 2012ರಲ್ಲಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡು 25 ಸಾಲ್ ಮರಗಳನ್ನು 2013ರಲ್ಲಿ ಕಡಿದಿದ್ದಾರೆ. 2012ರಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿದ್ದ ಅವಧಿಯಲ್ಲಿ ಈ ಅಕ್ರಮ ನಡೆದಿದೆ ಎಂದು ಸಿಂಗ್ ದೂರು ನೀಡಿದ್ದಾರೆ.

ಅರಣ್ಯಾಧಿಕಾರಿಗಳು ಒಂದು ತಿಂಗಳ ಹಿಂದೆಯೇ ಸಂಧು ವಿರುದ್ಧ ಎಫ್‍ಐಆರ್ ದಾಖಲಿಸುವ ಪ್ರಸ್ತಾವವನ್ನು ಸಲ್ಲಿಸಿದ್ದಾರೆ. ವಿವರಗಳನ್ನು ಪರಿಶೀಲಿಸಿದ ಬಳಿಕ ಇದೀಗ ಅನುಮತಿ ಮಂಜೂರು ಮಾಡಲಾಗಿದೆ ಎಂದು ಅರಣ್ಯ ಕಾರ್ಯದರ್ಶಿ ವಿಜಯಕುಮಾರ್ ಯಾದವ್ ವಿವರಿಸಿದ್ದಾರೆ. ಈ ಬಗ್ಗೆ timesofindia.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News