×
Ad

ಕರೆನ್ಸಿ ನೋಟುಗಳಲ್ಲಿ ಅಂಬೇಡ್ಕರ್ ಚಿತ್ರ ಹಾಕಬಹುದಲ್ಲವೇ?: ಕೇಜ್ರಿವಾಲ್‌ ಮನವಿಗೆ ಮನೀಶ್ ತಿವಾರಿ ಪ್ರಶ್ನೆ

Update: 2022-10-27 13:20 IST

ಹೊಸದಿಲ್ಲಿ: ಕರೆನ್ಸಿ ನೋಟುಗಳಲ್ಲಿ ಗಣೇಶ ಮತ್ತು ಲಕ್ಷ್ಮೀ ದೇವಿಯ ಚಿತ್ರಗಳನ್ನು ಮುದ್ರಿಸಬೇಕೆಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇತ್ತೀಚೆಗೆ ಪ್ರಧಾನಿಗೆ ಮನವಿ ಮಾಡಿದ್ದರೆ ಅದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ, "ಕರೆನ್ಸಿ ನೋಟುಗಳ ಹೊಸ ಸರಣಿಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿತ್ರಗಳನ್ನು ಹಾಕಬಹುದಲ್ಲವೇ?" ಎಂದು ಪ್ರಶ್ನಿಸಿದ್ದಾರೆ.

"ನೋಟುಗಳ ಒಂದು ಬದಿಯಲ್ಲಿ ಮಹಾತ್ಮ ಗಾಂಧೀಜಿ ಅವರ ಚಿತ್ರ ಹಾಗೂ ಇನ್ನೊಂದು ಬದಿಯಲ್ಲಿ ಡಾ. ಅಂಬೇಡ್ಕರ್ ಅವರ ಚಿತ್ರ ಸೂಕ್ತವಾಗಿದೆ. ಅಹಿಂಸೆ, ಸಾಂವಿಧಾನಿಕತೆ ಮತ್ತು ಸಮಾನವತಾವಾದದ ಸಮ್ಮಿಲನವು ಆಧುನಿಕ ಭಾರತದ ಮೇಧಾವಿಯನ್ನು ಪ್ರತಿಬಿಂಬಿಸುತ್ತದೆ" ಎಂದು ತಿವಾರಿ ಟ್ವೀಟ್ ಮಾಡಿದ್ದಾರೆ.

ರೂಪಾಯಿ ಮೌಲ್ಯ ಕುಸಿಯುತ್ತಿರುವುದರಿಂದ ಭಾರತದ ಅರ್ಥವ್ಯವಸ್ಥೆ ಬಾಧಿತವಾಗಿದೆ. ಹೀಗಿರುವಾಗ ನೋಟುಗಳಲ್ಲಿ ದೇವರ ಚಿತ್ರಗಳಿಂದ ಅವರ ಅನುಗ್ರಹ ದೊರೆಯಬಹುದು ಎಂದು ಕೇಜ್ರಿವಾಲ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಇನ್ನೋರ್ವ ಕಾಂಗ್ರೆಸ್ ನಾಯಕ ಅಭಿಷೇಕ್ ಸಿಂಘ್ವಿ ಕೂಡ ಪ್ರತಿಕ್ರಿಯಿಸಿ ಕೇಜ್ರಿವಾಲ್ ಅವರ ಸಲಹೆ ಅಸೂಕ್ತವಲ್ಲದೇ ಇದ್ದರೂ ಇಂತಹ ಕ್ರಮ ಕೈಗೊಂಡರೆ ಇಂತಹ ಹಲವು ಬೇಡಿಕೆಗಳು ಬರಬಹುದು ಎಂದಿದ್ದಾರೆ.

ಈ ನಡುವೆ ಮಹಾರಾಷ್ಟ್ರದ ಬಿಜೆಪಿ ಶಾಸಕ ನಿತೇಶ್ ರಾಣೆ ಅವರು 200 ರೂಪಾಯಿ ಮುಖಬೆಲೆಯ ಕರೆನ್ಸಿ ನೋಟ್ ಒಂದಕ್ಕೆ ಶಿವಾಜಿ ಚಿತ್ರ ಸೇರಿಸಿ ʼಯೇ ಪರ್ಫೆಕ್ಟ್ ಹೈ' ಎಂದು ಟ್ವೀಟ್ ಮಾಡಿದ್ದಾರೆ.

Similar News