ಕೊಯಮತ್ತೂರು ಸ್ಫೋಟ: ಪ್ರಕರಣದ ರೂವಾರಿಯ ಸಂಬಂಧಿಯನ್ನು ಬಂಧಿಸಿದ ಪೊಲೀಸರು
ಕೊಯಂಬತ್ತೂರು: ಕೊಯಂಬತ್ತೂರಿನಲ್ಲಿ ಇತ್ತೀಚೆಗೆ ನಡೆದ ಸ್ಫೋಟದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಗುರುವಾರ ಈ ಪ್ರಕರಣದ ಆರನೇ ಆರೋಪಿಯನ್ನು ಬಂಧಿಸಿದೆ. ಬಂಧಿತ ವ್ಯಕ್ತಿ, 28 ವರ್ಷದ ಅಫ್ಸರ್ ಖಾನ್ ಎಂಬಾತ ಈ ಪ್ರಕರಣದ ಪ್ರಮುಖ ಆರೋಪಿ ಜಮೇಶಾ ಮುಬಿನ್‍ನ ಸಂಬಂಧಿ ಎಂದು ತಿಳಿದು ಬಂದಿದೆ.
ಈ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೊಹಮ್ಮದ್ ತಲ್ಕಾ (25), ಮೊಹಮ್ಮದ್ ಅಸರುದ್ದೀನ್ (25), ಮೊಹಮ್ಮದ್ ರಿಯಾಝ್ (27), ಫೆರೋಝ್ ಇಸ್ಮಾಯಿಲ್ (27) ಮತ್ತು ಮೊಹಮ್ಮದ್ ನವಾಝ್ ಇಸ್ಮಾಯಿಲ್ (27) ಎಂಬವರನ್ನು ಬಂಧಿಸಲಾಗಿದೆ.
ಘಟನೆ ಅಕ್ಟೋಬರ್ 23 ರಂದು ನಗರದ ಸೂಕ್ಷ್ಮ ಪ್ರದೇಶವೆಂದೇ ತಿಳಿಯಲಾಗಿರುವ ಉಕ್ಕಡಂ ಎಂಬಲ್ಲಿನ ದೇವಸ್ಥಾನ ಸಮೀಪ ನಡೆದಿತ್ತು. ಎಲ್‍ಪಿಜಿ ಸಿಲಿಂಡರ್‍ಗಳು, ಮೊಳೆಗಳು ಮತ್ತಿತರ ವಸ್ತುಗಳಿದ್ದ ಕಾರು ಸ್ಫೋಟಗೊಂಡ ಪರಿಣಾಮ ಕಾರಿನಲ್ಲಿದ್ದ ಮುಬೀನ್ ಮೃತಪಟ್ಟಿದ್ದ.
ತನಿಖೆಯ ವೇಳೆ ಪೊಲೀಸರು ಮುಬೀನ್ ಮನೆಯಿಂದ ಸ್ಫೋಟಕ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದರು. ವಶಪಡಿಸಿಕೊಂಡ ವಸ್ತುಗಳಲ್ಲಿ ಪೊಟಾಶಿಯಂ ನೈಟ್ರೇಟ್, ಅಲುಮಿನಿಯಂ ಪೌಡರ್, ಗಂಧಕ ಸೇರಿದ್ದವು.
ಗುರುವಾರ ಬಂಧಿತನಾಗಿರುವ ಖಾನ್‍ನ ನಿವಾಸವನ್ನು ಪೊಲೀಸರು ಶೋಧಿಸಿ ಲ್ಯಾಪ್‍ಟಾಪ್ ವಶಪಡಿಸಿಕೊಂಡಿದ್ದಾರೆ. ಈ ಲ್ಯಾಪ್‍ಟಾಪ್ ಬಳಸಿ ಆತ ಸ್ಫೋಟಕ ವಸ್ತುಗಳಿಗೆ ಆನ್‍ಲೈನ್ ಮೂಲಕ ಆರ್ಡರ್ ಮಾಡಿರಬೇಕೆಂದು ಶಂಕಿಸಲಾಗಿದೆ. ಆರೋಪಿಗಳ ವಿರುದ್ಧ ಈಗಾಗಲೇ ಯುಎಪಿಎ ಹೇರಲಾಗಿದೆ.
ಸ್ಫೋಟಕ ವಸ್ತುಗಳ ಮಿಶ್ರಣಕ್ಕೆ ಖಾನ್ ಮುಖ್ಯ ಆರೋಪಿ ಮುಬೀನ್‍ಗೆ ಸಹಾಯ ಮಾಡಿರಬೇಕೆಂದು ಶಂಕಿಸಲಾಗಿದೆ. ಈ ಸ್ಫೋಟ ಪ್ರಕರಣದ ತನಿಖೆಯನ್ನು ಎನ್‍ಐಎಗೆ ವಹಿಸಲು ಶಿಫಾರಸು ಮಾಡುವುದಾಗಿ ತಮಿಳುನಾಡು ಸರಕಾರ ಹೇಳಿದೆ.