ಬಂಧನ ಹಿಂಪಡೆಯುವಂತೆ ಕೋರಿದ್ದ ಅಮಾನತುಗೊಂಡ ಬಿಜೆಪಿ ಶಾಸಕ ರಾಜಾ ಸಿಂಗ್ ಮನವಿ ತಿರಸ್ಕರಿಸಿದ ಸರಕಾರ
ಹೈದರಾಬಾದ್: ಜೈಲಿನಲ್ಲಿರುವ ಶಾಸಕ ಟಿ .ರಾಜಾ ಸಿಂಗ್ ಬಂಧನ ಆದೇಶವನ್ನು ಹಿಂಪಡೆಯಲು ಮಾಡಿದ ಮನವಿಯನ್ನು ತೆಲಂಗಾಣ ಸರ್ಕಾರ ಬುಧವಾರ ತಿರಸ್ಕರಿಸಿದೆ ಎಂದು Thenewsminute ವರದಿ ಮಾಡಿದೆ.
"ಸರ್ಕಾರವು ಪ್ರಾತಿನಿಧ್ಯವನ್ನು ಎಚ್ಚರಿಕೆಯಿಂದ ಪರಿಶೀಲಿಸಿದ ನಂತರ, ಬಂಧನ ಆದೇಶಗಳನ್ನು ರದ್ದುಗೊಳಿಸಲು/ಹಿಂತೆಗೆದುಕೊಳ್ಳಲು ಯಾವುದೇ ಮಾನ್ಯ ಆಧಾರಗಳು ಮತ್ತು ಕಾರಣಗಳಿಲ್ಲ ಎಂದು ಗಮನಿಸಿದೆ" ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಸಿಂಗ್ ಪರ ವಕೀಲ ಕೆ. ಕರುಣಾ ಸಾಗರ್ ಅವರು, ನಿರಾಕರಣೆಯ ಆದೇಶ ಅಂತಿಮವಲ್ಲ ಮತ್ತು ಈ ಕುರಿತು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು ಎಂದು ಹೇಳಿದರು. "ಈ ಆದೇಶವು ಬಾಕಿ ಉಳಿದಿರುವ ರಿಟ್ ಅರ್ಜಿಯ ಮೇಲೆ ಪರಿಣಾಮ ಬೀರುವುದಿಲ್ಲ" ಎಂದು ಅವರು ಹೇಳಿದರು.
ಪ್ರವಾದಿ ಮುಹಮ್ಮದ್ ರವರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಸಿಂಗ್ ನನ್ನು ಆಗಸ್ಟ್ 25 ರಂದು ಬಂಧಿಸಲಾಗಿತ್ತು. ಇದು ಹೈದರಾಬಾದ್‌ನಲ್ಲಿ ದೊಡ್ಡ ಪ್ರಮಾಣದ ಪ್ರತಿಭಟನೆಗೆ ಕಾರಣವಾಗಿತ್ತು. ಆತನನ್ನು ಪಕ್ಷದಿಂದ ಅಮಾನತು ಕೂಡ ಮಾಡಲಾಗಿತ್ತು. ಆಗಸ್ಟ್ 20 ರಂದು ಹೈದರಾಬಾದ್‌ನಲ್ಲಿ ನಡೆದ ಹಾಸ್ಯನಟ ಮುನವರ್ ಫಾರುಕಿ ಅವರ ಕಾರ್ಯಕ್ರಮಕ್ಕೆ ಪ್ರತಿಕ್ರಿಯೆಯಾಗಿ ಪೋಸ್ಟ್ ಮಾಡಿದ್ದ ವೀಡಿಯೋದ ಭಾಗದಲ್ಲಿ ಸಿಂಗ್ ಹೇಳಿಕೆ ವಿವಾದಕ್ಕೀಡಾಗಿತ್ತು.
ಸೆಪ್ಟೆಂಬರ್ 29 ರಂದು, ಸಿಂಗ್ ಪತ್ನಿ ಉಷಾ ಬಾಯಿ ಅವರು ಬಂಧನ ಆದೇಶವನ್ನು ಹಿಂಪಡೆಯಲು ಮನವಿ ಮಾಡಿದ್ದರು ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಅಕ್ಟೋಬರ್ 20 ರಂದು, ರಾಜಾ ಸಿಂಗ್‌ನನ್ನು ಬಿಡುಗಡೆ ಮಾಡಬೇಕೆಂದು ಅವರು ತೆಲಂಗಾಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು ಎಂದು ದಿ ಹಿಂದೂ ವರದಿ ಮಾಡಿದೆ. ನ್ಯಾಯಮೂರ್ತಿಗಳಾದ ಎ ಅಭಿಷೇಕ್ ರೆಡ್ಡಿ ಮತ್ತು ಜುವ್ವಾದಿ ಶ್ರೀದೇವಿ ಅವರನ್ನೊಳಗೊಂಡ ಪೀಠವು ಅಕ್ಟೋಬರ್ 28 ರೊಳಗೆ ಪ್ರತಿ ಅಫಿಡವಿಟ್ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿದೆ.
ಈ ನಡುವೆ, 2004 ರಿಂದ ರಾಜಾ ಸಿಂಗ್ ವಿರುದ್ಧ 101 ಕ್ರಿಮಿನಲ್ ಪ್ರಕರಣಗಳಿವೆ, ಅವುಗಳಲ್ಲಿ 18 ಕೋಮು ಅಪರಾಧಗಳಾಗಿವೆ ಎಂದು ಉಷಾ ಬಾಯಿ ಅವರ ಮನವಿಯನ್ನು ಹೈದರಾಬಾದ್ ಪೊಲೀಸರು ಬುಧವಾರ ವಿರೋಧಿಸಿದ್ದಾರೆ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.