ವಿಚ್ಛೇದಿತ ಮುಸ್ಲಿಂ ಮಹಿಳೆ ಮರು ವಿವಾಹವರೆಗೆ ನಿರ್ವಹಣಾ ವೆಚ್ಚಕ್ಕೆ ಅರ್ಹಳು: ಕೋರ್ಟ್

Update: 2022-10-28 03:10 GMT

ಹೊಸದಿಲ್ಲಿ: ವಿಚ್ಛೇದಿತ ಮುಸ್ಲಿಂ ಮಹಿಳೆ ಮರು ವಿವಾಹ ಆಗುವವರೆಗೆ ನಿರ್ವಹಣಾ ವೆಚ್ಚಕ್ಕೆ ಅರ್ಹಳು ಎಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯ (magistrate’s court) ತೀರ್ಪು ನೀಡಿದೆ.

40 ವರ್ಷ ವಯಸ್ಸಿನ ಗುಜರಿ ವ್ಯಾಪಾರಿಯೊಬ್ಬರು ತಮ್ಮ ಮಾಜಿ ಪತ್ನಿಗೆ ಡಯಾಲಿಸಿಸ್‍ಗಾಗಿ 50 ಸಾವಿರ ರೂ. ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ.

ಮಾಜಿ ಪತ್ನಿಗೆ ಈ ಮೊದಲೇ ವಿಚ್ಛೇದನ ನೀಡಿದ್ದರಿಂದ, ಚಿಕಿತ್ಸೆಗೆ ಹಣ ನೀಡುವಂತೆ ಮಹಿಳೆ ಮಾಡಿದ್ದ ಮನವಿಯನ್ನು ವ್ಯಾಪಾರಿ ತಿರಸ್ಕರಿಸಿದ್ದ. "ತಕ್ಷಣಕ್ಕೆ ಅರ್ಜಿದಾರರಾದ ಪತ್ನಿಯೇ ಗಂಡನಿಂದ ವಿಚ್ಛೇದನ ಪಡೆದಿದ್ದಾರೆ ಎನ್ನುವುದಕ್ಕೆ ಯಾವುದೇ ಪುರಾವೆ ಇಲ್ಲ. ವಿಚ್ಛೇದನ ನೀಡಿದಂತೆ ವ್ಯಕ್ತಿ ನೀಡಿದ ಹೇಳಿಕೆ ಗೊಂದಲಮಯವಾಗಿದೆ" ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಮಹಿಳೆ 2018ರಲ್ಲಿ ಮನೆಯಲ್ಲಿ ಹಿಂಸೆ ನೀಡುತ್ತಿದ್ದ ಬಗ್ಗೆ ದೂರು ಸಲ್ಲಿಸಿದ್ದರು. 2004ರ ಮೇ 17ರಂದು ಈ ವ್ಯಕ್ತಿಯನ್ನು ವಿವಾಹವಾಗಿದ್ದಾಗಿ ಅವರು ನ್ಯಾಯಾಲಯದಲ್ಲಿ ತಿಳಿಸಿದ್ದರು. ಪತಿ ಮತ್ತು ಆತನ ಮನೆಯವರು ಕಿರುಕುಳ ನೀಡುತ್ತಿದ್ದುದಾಗಿ ಹೇಳಿದ್ದರು. ವಿವಾಹದ ಬಳಿಕ 2 ಲಕ್ಷ ರೂಪಾಯಿ ವರದಕ್ಷಿಣೆ ನೀಡುವಂತೆ ಪೋಷಕರಿಗೆ ಒತ್ತಡ ತರಲಾಗಿತ್ತು ಎಂದೂ ಬಹಿರಂಗಪಡಿಸಿದ್ದರು. ಮಹಿಳೆಗೆ ಮೂತ್ರಪಿಂಡ ಸಮಸ್ಯೆ ಕಾಣಿಸಿಕೊಂಡಿದ್ದು, ಆದಾಯ ಇಲ್ಲದ ಕಾರಣ ಡಯಾಲಿಸಿಸ್‍ಗೆ ವೆಚ್ಚ ಮಾಡುವುದು ಸಾಧ್ಯವಿರಲಿಲ್ಲ. ವೈದ್ಯಕೀಯ ವೆಚ್ಚಕ್ಕಾಗಿ ಪ್ರತಿ ತಿಂಗಳು 1.5 ಲಕ್ಷ ರೂಪಾಯಿಯನ್ನು ಪತಿ ಪಾವತಿಸಬೇಕು ಎಂದು ಕೋರಿದ್ದರು. ಮೇಲ್ನೋಟಕ್ಕೆ ಇದು ಗೃಹ ಹಿಂಸೆಯ ಪ್ರಕರಣ ಎಂದು ನ್ಯಾಯಾಲಯ ಹೇಳಿದೆ. ಈ ಬಗ್ಗೆ timesofindia.com ವರದಿ ಮಾಡಿದೆ.

Similar News