ಗುಜರಾತ್ ನಲ್ಲಿ 22,000 ಕೋ.ರೂ. ಟಾಟಾ-ಏರ್‌ಬಸ್ ಯೋಜನೆ: ಶಿಂಧೆ ಸರಕಾರದ ವಿರುದ್ದ ಆದಿತ್ಯ ಠಾಕ್ರೆ ವಾಗ್ದಾಳಿ

ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಸರಕಾರ ವಿಫಲವಾಗಿದೆ

Update: 2022-10-28 04:59 GMT

ಪುಣೆ/ಮುಂಬೈ: ಗುಜರಾತ್‌ನಲ್ಲಿ ಟಾಟಾ-ಏರ್‌ಬಸ್ ಸಿ-295 ಸಾರಿಗೆ ವಿಮಾನ ಯೋಜನೆ ಘೋಷಣೆಯಾಗುತ್ತಿದ್ದಂತೆ ಮಹಾರಾಷ್ಟ್ರದ ಮಾಜಿ ಸಚಿವ ಆದಿತ್ಯ ಠಾಕ್ರೆ ಗುರುವಾರ ಏಕನಾಥ್ ಶಿಂಧೆ ನೇತೃತ್ವದ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಮಹಾರಾಷ್ಟ್ರದಲ್ಲಿ ಬರಬೇಕಿದ್ದ ಯೋಜನೆ  ಪಕ್ಕದ ರಾಜ್ಯಕ್ಕೆ ಏಕೆ ಹೋಗಿದೆ ಎಂದು ಕೇಳಿದ್ದಾರೆ.

ಶಿಂಧೆ ಸರಕಾರ ರಾಜ್ಯದ ಪ್ರಗತಿಯ ಬಗ್ಗೆ ಗಂಭೀರವಾಗಿಲ್ಲ ಎಂದು ಆರೋಪಿಸಿದ ಅವರು, ‘ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಅದು ವಿಫಲವಾಗಿದೆ’ ಎಂದು ಟೀಕಿಸಿದರು.

ಏರ್‌ಬಸ್ ಮತ್ತು ಟಾಟಾ ಸಮೂಹದ ಒಕ್ಕೂಟವು ಗುಜರಾತ್‌ನ ವಡೋದರಾದಲ್ಲಿ ಭಾರತೀಯ ವಾಯುಪಡೆಗೆ (ಐಎಎಫ್) ಸಿ-295 ಸಾರಿಗೆ ವಿಮಾನವನ್ನು ತಯಾರಿಸಲಿದೆ ಎಂದು ರಕ್ಷಣಾ ಸಚಿವಾಲಯ ಗುರುವಾರ ತಿಳಿಸಿದೆ. ಖಾಸಗಿ ಕಂಪನಿಯಿಂದ ಮೊದಲ ಬಾರಿಗೆ ಭಾರತದಲ್ಲಿ ಮಿಲಿಟರಿ ವಿಮಾನವನ್ನು ಉತ್ಪಾದಿಸುವ  22,000 ಕೋಟಿ ಯೋಜನೆಯನ್ನು ಪ್ರಕಟಿಸಿದೆ. 

ಈ ವರ್ಷದ ಸೆಪ್ಟೆಂಬರ್‌ನಲ್ಲಿ ಪ್ರಸ್ತುತ ಕೈಗಾರಿಕಾ ಸಚಿವರಾಗಿರುವ ಮುಖ್ಯಮಂತ್ರಿ ಶಿಂಧೆ ಅವರ ನಿಷ್ಠಾವಂತ ಉದಯ್ ಸಾಮಂತ್ ಅವರು ಟಾಟಾ-ಏರ್‌ಬಸ್ ವಿಮಾನ ತಯಾರಿಕಾ ಯೋಜನೆಯು ಮಹಾರಾಷ್ಟ್ರದ ವಿದರ್ಭ ಪ್ರದೇಶದ ನಾಗ್ಪುರ ಬಳಿ ತಲೆ ಎತ್ತಲಿದೆ ಎಂದು ಹೇಳಿದ್ದರು.

ಪುಣೆ ಜಿಲ್ಲೆಯ ಶಿರೂರು ತಹಸಿಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಠಾಕ್ರೆ, “ಈ ಯೋಜನೆಗಳು ಏಕೆ ಹೊರಗೆ ಹೋಗುತ್ತಿವೆ ಎಂಬುದಕ್ಕೆ ರಾಜ್ಯ ಸರಕಾರ ಉತ್ತರ ನೀಡುತ್ತದೆಯೇ? ದೇಶದ್ರೋಹಿ ಸರಕಾರ ಅಧಿಕಾರಕ್ಕೆ ಬಂದ ನಂತರ ಮಹಾರಾಷ್ಟ್ರ ಕೈತಪ್ಪಿರುವ ನಾಲ್ಕನೇ ಯೋಜನೆ ಇದಾಗಿದೆ. ಅವರು ಯಾವಾಗಲೂ ತಮ್ಮದು ಡಬಲ್ ಇಂಜಿನ್ ಸರಕಾರ ಎಂದು ಹೆಮ್ಮೆಪಡುತ್ತಾರೆ, ಆದರೆ ಕೇಂದ್ರ ಸರಕಾರದ ಒಂದು ಎಂಜಿನ್ ಕೆಲಸ ಮಾಡುತ್ತಿದ್ದರೂ, ರಾಜ್ಯ ಸರಕಾರದ ಎಂಜಿನ್ ವಿಫಲವಾಗಿದೆ’’ ಎಂದರು.

''ಸಿಎಂ ಶಿಂಧೆ ನಿತ್ಯವೂ ದಿಲ್ಲಿಗೆ ಹೋಗುತ್ತಾರೆ.ಆದರೆ ಅವರು ಅಲ್ಲಿಗೆ ಹೋಗುವುದು ತಮಗಾಗಿಯೇ ಹೊರತು ಮಹಾರಾಷ್ಟ್ರಕ್ಕಲ್ಲ.ಟಾಟಾ-ಏರ್‌ಬಸ್ ಯೋಜನೆ ಮಹಾರಾಷ್ಟ್ರಕ್ಕೆ ಬರಬೇಕು ಎಂದು ಅವರು ಹೇಳಿದ್ದು ನಾನು ಕೇಳಿಲ್ಲ.ವೇದಾಂತ ಫಾಕ್ಸ್‌ಕಾನ್, ಬಲ್ಕ್ ಡ್ರಗ್ ಪಾರ್ಕ್, ವೈದ್ಯಕೀಯ ಸಾಧನ ಪಾರ್ಕ್ ಸೇರಿದಂತೆ ಈಗ ಟಾಟಾ ಏರ್‌ಬಸ್ ಯೋಜನೆಗಳು ಗುಜರಾತ್‌ ಪಾಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

Similar News