×
Ad

ಬಟ್ಟೆ ವ್ಯಾಪಾರಿಗಳ ಮೇಲೆ ಹಲ್ಲೆಗೆ ಖಂಡನೆ: ಮುಸ್ಲಿಂ ಗುರಿಯಾಗಿರಿಸಿ ಹಲ್ಲೆ ಪ್ರಜಾಪ್ರಭುತ್ವಕ್ಕೆ ಮಾರಕ- ರಫೀಯುದ್ದೀನ್

Update: 2022-10-28 20:37 IST

ಪುತ್ತೂರು: ಮುಸ್ಲಿಮ್ ಸಮುದಾಯವನ್ನು ಗುರಿಯಾಗಿರಿಸಿ ಕಾಣಿಯೂರಿನಲ್ಲಿ ಬಟ್ಟೆ ವ್ಯಾಪಾರಿಗಳ ಮೇಲೆ ಹಲ್ಲೆ ನಡೆಸಲಾಗಿದ್ದು, ಈ ರೀತಿ ಸಮುದಾಯವನ್ನು ಗುರಿಯಾಗಿರಿಸಿ ಇಂತಹ ಭೀಕರ ಕೃತ್ಯಗಳನ್ನು ಮಾಡುತ್ತಿರುವುದು ಪ್ರಜಾಭುತ್ವ ದೇಶಕ್ಕೆ ಮಾರಕವಾಗಿದೆ. ಈ ಘಟನೆಯ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮಕೈಗೊಳ್ಳ ಬೇಕು ಎಂದು ರಫೀಯುದ್ದಿನ್ ಕುದ್ರೋಳಿ ಆಗ್ರಹಿಸಿದರು.

ಅವರು ಕಾಣಿಯೂರಿನಲ್ಲಿ ಇತ್ತೀಚೆಗೆ ಬಟ್ಟೆ ವ್ಯಾಪಾರಿಗಳ ಮೇಲೆ ನಡೆದ ಹಲ್ಲೆ, ಹತ್ಯಾ ಯತ್ನ ಖಂಡಿಸಿ ದ.ಕ.ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಪುತ್ತೂರು ವತಿಯಿಂದ ಶುಕ್ರವಾರ ಸಂಜೆ ಪುತ್ತೂರಿನ ಎನ್.ಎಸ್.ಕಿಲ್ಲೆ ಮೈದಾನದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ಕೋವಿಡ್ ಸಮಯಲ್ಲಿ ಮುಸ್ಲಿಮ್ ಸಮುದಾಯದ ಹಲವು ಸಂಘಟನೆಗಳು ಧರ್ಮ, ಜಾತಿಗಳನ್ನು ನೋಡದೆ ಶವಸಂಸ್ಕಾರ, ಚಿಕಿತ್ಸೆ ಕಾರ್ಯಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದದ್ದನ್ನು ಎಂದಿಗೂ ಮರೆಯಬಾರದು ಎಂದು ಅವರು ತಿಳಿಸಿದರು.

ರಾಜ್ಯ ಎಸ್‍ಕೆಎಸ್‍ಎಸ್‍ಎಫ್ ಪ್ರಧಾನ ಕಾರ್ಯದರ್ಶಿ ಅನೀಸ್ ಕೌಸರಿ ಮಾತನಾಡಿ, ಪ್ರಸ್ತುತ ನಡೆಯುವ ದುಷ್ಕೃತ್ಯಗಳು, ಪ್ರತಿಭಟನೆಗಳ ಕುರಿತು ಸರಕಾರ ಮೌನ ವಹಿಸಿದೆ. ಮುಖ್ಯಮಂತ್ರಿ ಜಿಲ್ಲೆಗೆ ಆಗಮಿಸಿದ ಬಳಿಕ ಕೊಲೆ, ಅತ್ಯಾಚಾರಗಳಂತಹ ಪ್ರಕರಣ ಜಾಸ್ತಿಯಾಗಿವೆ. ಮೈಕ್ ಕಟ್ಟಿಕೊಂಡು ಕೋಮು ಪ್ರಚೋದನಕಾರಿ ಭಾಷಣಗಳಿಂದ ದುಷ್ಕೃತ್ಯಗಳಿಗೆ ಪ್ರೇರಣೆ ನೀಡಲಾಗುತ್ತಿದೆ. ಕೋಮುದ್ವೇಷ ಭಾಷಣಗೈಯುವವರ ಮಕ್ಕಳು ವಿದೇಶದಲ್ಲಿ ಮಜಾ ಮಾಡುತ್ತಿದ್ದರೆ ಯಾವುದೇ ತಪ್ಪು ಮಾಡದ ಬಡಪಾಯಿಗಳನ್ನು ಜೈಲಿಗಟ್ಟಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಯಾಕೂಬ್ ಸಅದಿ ನಾವೂರು ಮಾತನಾಡಿ, ಕುವೆಂಪು ಅವರ ಆಶಯದ ಸರ್ವ ಜನಾಂಗದ ಶಾಂತಿಯ ತೋಟವಾಗಿ ಕರ್ನಾಟಕ ರಾಜ್ಯ ಇರಬೇಕೆಂಬುದು ನಮ್ಮೆಲ್ಲರ ಆಶಯವಾಗಿದೆ. ಉತ್ತರ ಪ್ರದೇಶ ಮಾಡೆಲ್ ಅನ್ನು ನಮ್ಮ ರಾಜ್ಯದಲ್ಲಿ ಅನುಷ್ಠಾನಗೊಳಿಸುವುದು ಬೇಕಾಗಿಲ್ಲ. ಕರ್ನಾಟಕಕ್ಕೆ ಕುವೆಂಪು ತೋರಿಸಿದ ಇಲ್ಲಿನದ್ದೇ ಮಾಡಲ್ ಇದೆ. ಅದನ್ನು ಉಳಿಸಿಕೊಳ್ಳವು ಕೆಲಸವಾಗಬೇಕು ಎಂದು ಹೇಳಿದರು.

ಪ್ರಾಸ್ತಾವಿಕ ಮಾತನಾಡಿದ ಜಿಪಂ ಮಾಜಿ ಸದಸ್ಯ ಎಂ.ಎಸ್.ಮಹಮ್ಮದ್ ಜಾತ್ಯಾತೀತವಾದ ನಮ್ಮ ದೇಶದಲ್ಲಿ ಖಂಡನಾ ವ್ಯಕ್ತಪಡಿಸುವ ಪರಿಸ್ಥಿತಿ ಬಂದಿರುವುದು ಖೇದಕರ. ಹಲ್ಲೆ ಪ್ರಕರಣದಲ್ಲಿ ಭಾಗಿಯಾದ ಕೋಮುವಾದಿ ಸಂಘ ಪರಿವಾರದ ಕಾರ್ಯಕರ್ತರು ಮಾನವೀಯ ಮೌಲ್ಯ ಇಲ್ಲದವರು. ಅವರನ್ನು ಮನುಷ್ಯರೆಂದು ಒಪ್ಪಿಕೊಳ್ಳಲು ನಾವು ತಯಾರಿಲ್ಲ ಎಂದ ಅವರು, ರಾಜ್ಯ ಹಾಗೂ ಕೇಂದ್ರ ಸರಕಾರ ಕೋಮುವಾದಿಗಳನ್ನು ಬೆಳೆಸುತ್ತಿದ್ದು, ದೇಶ, ರಾಜ್ಯವನ್ನಾಳುವ ಸಂಪೂರ್ಣ ನೈತಿಕತೆಯನ್ನು ಕಳೆದುಕೊಂಡಿದೆ ಎಂದು ಆರೋಪಿಸಿದರು.

ಪುತ್ತೂರು ತಾಲೂಕು ಮುಸ್ಲಿಂ ಯುವಜನ ಪರಿಷತ್ ಅಧ್ಯಕ್ಷ ಅಶ್ರಫ್ ಕಲ್ಲೇಗ ಅಧ್ಯಕ್ಷತೆ ವಹಿಸಿದ್ದರು. 

ಸುಹೈಲ್ ಕಂದಕ್, ನ್ಯಾಯವಾದಿ ಹನೀಫ್ ಮಂಗಳೂರು, ಇಕ್ಬಾಲ್ ಎಲಿಮಲೆ, ಯು,ಕೆ. ಇಬ್ರಾಹಿಂ ಅಡ್ಡೂರು, ಬಿ.ಎ. ಶಕೂರ್ ಹಾಜಿ, ಶುಕೂರ್ ಹಾಜಿ, ಅರಿಯಡ್ಕ ಅಬ್ದುಲ್ ರಹಿಮಾನ್, ಎಲ್.ಟಿ. ರಝಾಕ್ ಹಾಜಿ, ಅಬ್ದುಲ್ ಖಾದರ್ ಹಾಜಿ ಸುರೈಯಾ  ಮುಸ್ಲಿಂ ಯುವಜನ ಪರಿಷತ್ ಮುಖಂಡರಾದ ಖಾಸಿಂ ಹಾಜಿ ಮಿತ್ತೂರು, ಅಶ್ರಫ್ ಬಾವು, ಮೂಸಾ ಕರೀಂ, ಅಬ್ದುಲ್ ಹಮೀದ್ ಸಾಲ್ಮರ, ಮೂಸಾ ಕರೀಂ ಮಾಣಿ, ಶರೀಫ್ ಸಾಲ್ಮರ, ಹಮೀದ್ ಸೋಂಪಾಡಿ, ಅಲ್ತಾಫ್ ಬೆಟ್ಟಂಪಾಡಿ, ಬಶೀರ್ ಪರ್ಲಡ್ಕ, ಅಶ್ರಫ್ ಮುಕ್ವೆ, ರಶೀದ್ ಮುರ  ಸೇರಿದಂತೆ ಹಲವಾರು ಧಾರ್ಮಿಕ ಮತ್ತು ಸಾಮಾಜಿಕ ಮುಖಂಡರು ಉಪಸ್ಥಿತರಿದ್ದರು.  

ಮುಸ್ಲಿಂ ಯುವಜನ ಪರಿಷತ್‍ನ ಉಪಾಧ್ಯಕ್ಷ ಇಬ್ರಾಹಿಂ ಹಾಜಿ ಸಾಗರ್ ಸ್ವಾಗತಿಸಿದರು. ಸಂಚಾಲಕ ನ್ಯಾಯವಾದಿ ನೂರುದ್ದೀನ್ ಸಾಲ್ಮರ ನಿರೂಪಿಸಿದರು.

Similar News