×
Ad

ಬಿ.ಜಿ. ಮುಹಮ್ಮದರ ಚಿತ್ರಕಲೆಯು ಯುವಜನರಿಗೆ ಸ್ಫೂರ್ತಿಯಾಗಲಿ: ಮಾಜಿ ಸಿಎಂ ಯಡಿಯೂರಪ್ಪ

Update: 2022-10-28 22:36 IST

ಮಂಗಳೂರು, ಅ.28: ಅಪ್ರತಿಮ ಕಲಾವಿದರಾಗಿದ್ದ ಬಿ.ಜಿ.ಮುಹಮ್ಮದರು ಚಿತ್ರಕಲೆಯನ್ನು ಯುವಜನಾಂಗಕ್ಕೆ ಧಾರೆ ಎರೆದಿದ್ದಾರೆ. ಅಪಾರ ಸಂಖ್ಯೆಯ ಶಿಷ್ಯರನ್ನೂ ನಾಡಿಗೆ ಸಮರ್ಪಿಸಿದ್ದಾರೆ. ವಿದ್ಯಾರ್ಥಿಗಳನ್ನು ಚಿತ್ರಕಲೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಮಾಡಿದ್ದಾರೆ. ಹಾಗಾಗಿ ಅವರ ಚಿತ್ರಕಲೆಯು ಮುಂದೆಯೂ ನಾಡಿನ ಯುವಜನರಿಗೆ ಸ್ಫೂರ್ತಿಯಾಗಲಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಖ್ಯಾತ ಚಿತ್ರಕಲಾವಿದ ಬಿ.ಜಿ. ಮುಹಮ್ಮದ್ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಮೂರು ದಿನಗಳ ಕಾಲ ನಡೆಯುವ ‘ಚಿತ್ರಕಲಾ ಪ್ರದರ್ಶನ-ಸಂಭ್ರಮ’ ಕಾರ್ಯಕ್ರಮ ವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಬುದ್ಧ ಚಿತ್ರಕಲಾವಿದರಾಗಿದ್ದ ಮುಹಮ್ಮದ್ ಶಿಸ್ತುಬದ್ಧವಾಗಿ ಕಲಾ ಶಾಲೆಯನ್ನು ಕಟ್ಟಿ ಬೆಳೆಸಿದ್ದರು. ಇಂದಿಗೂ ಅವರ ಮಕ್ಕಳು ಆ ಶಾಲೆಯನ್ನು ಮುಂದುವರಿಸಿಕೊಂಡಿರುವುದು ಶ್ಲಾಘನೀಯ. ಚಿತ್ರಕಲಾವಿದ ಮಾತ್ರವಲ್ಲ ಛಾಯಾಗ್ರಾಹಕರೂ ಆಗಿದ್ದ ಮುಹಮ್ಮದ್‌ರ ನೆನಪಿನಲ್ಲಿ ಅಂಚೆ ಲಕೋಟೆ ಬಿಡುಗಡೆ ಮಾಡುತ್ತಿರುವುದು ಸರಕಾರ ಅವರಿಗೆ ಸಲ್ಲಿಸುವ ವಿಶೇಷ ಗೌರವವಾಗಿದೆ ಎಂದು ಯಡಿಯೂರಪ್ಪ ಅಭಿಪ್ರಾಯಪಟ್ಟರು.

ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮೇಯರ್ ಜಯಾನಂದ ಅಂಚನ್, ವಿಧಾನ ಪರಿಷತ್ ಸದಸ್ಯರಾದ ಭಾರತಿ ಶೆಟ್ಟಿ, ಪ್ರತಾಪ ಸಿಂಹ ನಾಯಕ್, ಮಂಗಳೂರು ವಿವಿ ಕುಲಪತಿ ಡಾ.ಪಿ.ಎಸ್. ಯಡಪಡಿತ್ತಾಯ, ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್.ರಾಜೇಂದ್ರ ಕುಮಾರ್, ಬಿಜಿಎಂ ಅವರ ಪುತ್ರರಾದ ಶಬ್ಬೀರ್ ಅಲಿ ಮತ್ತು ಶಮೀರ್ ಅಲಿ, ಮಾಜಿ ಮುಖ್ಯ ಸಚೇತಕ ಗಣೇಶ್ ಕಾರ್ಣಿಕ್, ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಕೋಟಿ ಪ್ರಸಾದ್ ಆಳ್ವ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ನೂರರ ನೆನಪಿನ ಸ್ಮರಣ ಸಂಚಿಕೆ ಹಾಗೂ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆಗೊಳಿಸ ಲಾಯಿತು. ಶತಮಾನೋತ್ಸವ ಸಮಿತಿಯ ಕಾರ್ಯದರ್ಶಿ ಗಣೇಶ್ ಸೋಮಯಾಜಿ ಸ್ವಾಗತಿಸಿದರು. ಪ್ರೊ. ಅನಂತ ಪದ್ಮನಾಭ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಿದ್ದರಾಮಯ್ಯರಿಗೆ ಕ್ಷೇತ್ರ ಹುಡುಕುವ ಪರಿಸ್ಥಿತಿ: ಯಡಿಯೂರಪ್ಪ ವ್ಯಂಗ್ಯ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಕ್ಷೇತ್ರ ಹುಡುಕುವ ಪರಿಸ್ಥಿತಿಯಲ್ಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವ್ಯಂಗ್ಯವಾಡಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯರು ಕೋಲಾರದಿಂದ ಸ್ಪರ್ಧಿಸಲು ಚಿಂತನೆ ನಡೆಸುತ್ತಿರುವ ಬಗ್ಗೆ ಮಾಹಿತಿ ಇದೆ. ಮೈಸೂರು, ಬಾದಾಮಿ ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರ ಹುಡುಕುತ್ತಿರುವುದು ವಿಪರ್ಯಾಸ. ಸದ್ಯ ಅವರಿಗೆ ಯಾವ ಕ್ಷೇತ್ರವೂ ಸಿಕ್ಕಿಲ್ಲ. ಕೋಲಾರದಿಂದ ಸಿದ್ದರಾಮಯ್ಯ ನಿಲ್ಲುವುದಾದರೆ ಅಲ್ಲಿದ್ದವರು ಇನ್ನೊಂದು ಕ್ಷೇತ್ರ ಹುಡುಕಬೇಕಾಗುತ್ತೆ ಎಂದರು.

ಬಾದಾಮಿಯಿಂದ ಅವರು ಯಾಕೆ ನಿಲ್ಲುತ್ತಿಲ್ಲ ಎಂದು ಪ್ರಶ್ನಿಸಿದ ಯಡಿಯೂರಪ್ಪ, ಸಿದ್ದರಾಮಯ್ಯರ ಬಗ್ಗೆ ಜನರು ವಿಶ್ವಾಸ ಕಳೆದುಕೊಂಡಿರುವುದು ಅವರ ಕ್ಷೇತ್ರ ಹುಡುಕಾಟಕ್ಕೆ ಸಾಕ್ಷಿಯಾಗಿದೆ ಎಂದರು.

ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಈಗ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಬಗ್ಗೆ ನಾನು ಟೀಕೆ-ಟಿಪ್ಪಣಿ ಮಾಡಲಾರೆ ಎಂದ ಯಡಿಯೂರಪ್ಪ ಈಗ ಎಲ್ಲರೂ ಮೀಸಲಾತಿ ಹೆಚ್ಚಿಸಬೇಕು ಎಂದು ಕೇಳುತ್ತಿದ್ದಾರೆ. ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸುವ ಬಗ್ಗೆ ಮುಖ್ಯಮಂತ್ರಿ ಸಕಾಲದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.

Similar News