×
Ad

ಸಾಲ ಮರುಪಾವತಿಗೆ ಬಾಲಕಿಯರ ಹರಾಜು ಆರೋಪ: ತನಿಖೆಗೆ ಎನ್‌ಸಿಡಬ್ಲ್ಯು ತಂಡ ರಾಜಸ್ಥಾನಕ್ಕೆ

Update: 2022-10-28 23:34 IST

ಹೊಸದಿಲ್ಲಿ, ಅ. 28: ಸಾಲ ಮರುಪಾವತಿ ಕುರಿತ ವಿವಾದಗಳನ್ನು ಇತ್ಯರ್ಥಪಡಿಸಲು ಸ್ಟಾಂಪ್ ಪೇಪರ್ ಮೂಲಕ ಬಾಲಕಿಯರನ್ನು ಹರಾಜು ಹಾಕಿದ ಆರೋಪದ ಬಗ್ಗೆ ತನಿಖೆ ನಡೆಸಲು ರಾಜಸ್ಥಾನದ ಭಿಲ್ವಾರ ಜಿಲ್ಲೆಗೆ ತಂಡವೊಂದನ್ನು ಕಳುಹಿಸಿ ಕೊಡಲಾಗುತ್ತಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು)ದ ಅಧ್ಯಕ್ಷೆ ರೇಖಾ ಶರ್ಮಾ ಅವರು ಶುಕ್ರವಾರ ಹೇಳಿದ್ದಾರೆ. 

ಕಳೆದ ಕೆಲವು ವರ್ಷಗಳಲ್ಲಿ ಕೂಡ ಇದೇ ರೀತಿಯ ಘಟನೆಗಳು ವರದಿಯಾಗಿತ್ತು. ಆದರೆ, ರಾಜ್ಯ ಸರಕಾರ ಇದುವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಅವರು ಹೇಳಿದ್ದಾರೆ.  ಈ ಪ್ರಕರಣಕ್ಕೆ ಸಂಬಂಧಿಸಿ ಶರ್ಮಾ ಅವರು ರಾಜಸ್ಥಾನದ ಮುಖ್ಯ ಕಾರ್ಯದರ್ಶಿ ಹಾಗೂ  ಬಿಲ್ವಾರದ ಪೊಲೀಸ್ ಅಧೀಕ್ಷಕರನ್ನು ನವೆಂಬರ್ 1ರಂದು ಭೇಟಿಯಾಗಲಿದ್ದಾರೆ. 

‘‘ರಾಜಸ್ಥಾನದ ಬಿಲ್ವಾರ ಜಿಲ್ಲೆಗೆ ಎನ್‌ಸಿಡಬ್ಲ್ಯುನ ತಂಡವೊಂದನ್ನು ಕಳುಹಿಸಿ ಕೊಡಲಾಗುತ್ತಿದೆ. ನಾನು ನವೆಂಬರ್ 1ರಂದು ರಾಜಸ್ಥಾನದ ಮುಖ್ಯ ಕಾರ್ಯದರ್ಶಿ ಹಾಗೂ ಬಿಲ್ವಾರದ ಪೊಲೀಸ್ ಅಧೀಕ್ಷಕ (ಎಸ್‌ಪಿ) ಅವರನ್ನು ಭೇಟಿಯಾಗಲಿದ್ದೇನೆ. ಇದೇ ರೀತಿಯ ಘಟನೆ ರಾಜ್ಯದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಸಂಭವಿಸಿದೆ. ಆದರೆ, ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ’’ ಎಂದು ಅವರು ಹೇಳಿದ್ದಾರೆ. 

ಗಮನಾರ್ಹ ವಿಚಾರವೆಂದರೆ ಈ ಪ್ರಕರಣದ ಕುರಿತು ತನಿಖೆ ನಡೆಸಲು ಆಯೋಗ ಇಬ್ಬರು ಸದಸ್ಯರ ಸತ್ಯಶೋಧನಾ ತಂಡವನ್ನು ರೂಪಿಸಿದೆ. ‘‘ಗ್ರಾಮದ ಹಲವು ಕಡೆಗಳಲ್ಲಿ ಇಂತಹ ಪ್ರಕರಣಗಳು ವರದಿಯಾಗಿವೆ.  ಬಾಲಕಿಯರನ್ನು ವೇಶ್ಯಾವಾಟಿಕೆಗೆ ಸ್ಟ್ಯಾಂಪ್ ಪೇಪರ್ ಮೂಲಕ ಮಾರಾಟ ಮಾಡಲಾಗುತ್ತದೆ’’ಎಂದು ಆಯೋಗ ಹೇಳಿದೆ. 

ಈ ಪ್ರಕರಣದ ಕುರಿತು ತುರ್ತು ಕ್ರಮ ತೆಗೆದುಕೊಳ್ಳುವಂತೆ ಹಾಗೂ ತೆಗೆದುಕೊಂಡ ಕ್ರಮಗಳನ್ನು ಆಯೋಗಕ್ಕೆ ತಿಳಿಸುವಂತೆ ಎನ್‌ಸಿಡಬ್ಲ್ಯು ಅಧ್ಯಕ್ಷೆ ರಾಜ್ಯದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದಾರೆ. ಕೂಡಲೇ ಎಫ್‌ಐಆರ್‌ನಲ್ಲಿ ಸಂಬಂಧಿತ ನಿಯಮಗಳನ್ನು ಸೇರಿಸುವಂತೆ ಹಾಗೂ ಎಲ್ಲ ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸುವಂತೆ ರಾಜಸ್ಥಾನದ ಡಿಜಿಪಿಗೆ ಬರೆದ ಪತ್ರದಲ್ಲಿ ಆಯೋಗ ಆಗ್ರಹಿಸಿದೆ.

Similar News