×
Ad

ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ: ವ್ಯಕ್ತಿಯನ್ನು ಥಳಿಸಿ ಹತ್ಯೆ

Update: 2022-10-29 07:49 IST

ಗುರುಗ್ರಾಮ: ಫರೀದಾಬಾದ್ ಗ್ರಾಮದಲ್ಲಿ ಗುರುವಾರ ರಾತ್ರಿ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದ ಎನ್ನಲಾದ ಆರೋಪಿಯನ್ನು ಮಹಿಳೆಯ ಕುಟುಂಬದವರು ಥಳಿಸಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಆರೋಪಿಯ ಸ್ನೇಹಿತನ ಮೇಲೂ ಕಬ್ಬಿಣದ ರಾಡ್ ಮತ್ತು ದೊಣ್ಣೆಯಿಂದ ಹಲ್ಲೆ ಮಾಡಲಾಗಿದ್ದು, ಗಂಭೀರ ಗಾಯಗೊಂಡಿರುವ ಆತ ದೆಹಲಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದಾನೆ.

ಗುರುವಾರ ರಾತ್ರಿ 11 ಗಂಟೆಯ ಸುಮಾರಿಗೆ ಮೋಹಿತ್ ಹಾಗೂ ಆತನ ಸ್ನೇಹಿತ ನವೀನ್ ಎಂಬವರು ಭೂಪಾನಿ ಎಂಬಲ್ಲಿ ಕಾರಿನಲ್ಲಿ ಮದ್ಯಪಾನ ಮಾಡುತ್ತಿದ್ದರು. ಈ ವೇಳೆ 28 ವರ್ಷ ವಯಸ್ಸಿನ ಮಹಿಳೆಯ ಕುಟುಂಬದವರು ಮತ್ತು ಸಂಬಂಧಿಕರು ಸುತ್ತುವರಿದರು. ದೊಣ್ಣೆ, ರಾಡ್ ಮತ್ತು ಮಚ್ಚಿನಿಂದ ದಾಳಿ ಮಾಡಿ, ಕಾರಿನ ಗಾಜು ಮುರಿದು ಇಬ್ಬರನ್ನೂ ಹೊರಕ್ಕೆ ಎಳೆದು ನಿರಂತರವಾಗಿ ಹಲ್ಲೆ ನಡೆಸಿದರು ಎಂದು ಪೊಲೀಸರು ವಿವರಿಸಿದ್ದಾರೆ. ಇಬ್ಬರೂ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನುವುದು ಸಂಬಂಧಿಕರ ಆರೋಪ.

ಪೊಲೀಸ್ ವಾಹನ ಆಗಮಿಸಿ, ಪೊಲೀಸರು ಮಧ್ಯಪ್ರವೇಶಿಸುವವರೆಗೂ ಇಬ್ಬರ ಮೇಲೆ ನಿರಂತರ ಹಲ್ಲೆ ನಡೆದಿದೆ. ಇದಕ್ಕೂ ಒಂದು ಗಂಟೆ ಮೊದಲು ಮೋಹಿತ್ ಹಾಗೂ ನವೀನ್ ವಿರುದ್ಧ ದೂರು ನೀಡಲು ಮಹಿಳೆ ಹಾಗೂ ಕುಟುಂಬದವರು ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿದ್ದರು.

ಪೊಲೀಸರು ದೂರು ದಾಖಲಿಸಿಕೊಳ್ಳುತ್ತಿದ್ದಾಗ, ಇಬ್ಬರೂ ಆರೋಪಿಗಳು ಮಹಿಳೆಯ ಮನೆಗೆ ನುಗ್ಗಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದ್ದಾರೆ ಎಂಬ ಮಾಹಿತಿಯನ್ನು ಸಂಬಂಧಿಕರಲ್ಲಿ ಒಬ್ಬರು ದೂರವಾಣಿ ಮೂಲಕ ತಿಳಿಸಿದ್ದರು.

ತರಾತುರಿಯಲ್ಲಿ ಸಂಬಂಧಿಕರು ಠಾಣೆಯಿಂದ ಹೊರಟಿದ್ದಾರೆ. ಪೊಲೀಸರೂ ಅವರ ಹಿಂದೆಯೇ ತೆರಳಿದ್ದರು. ಆದರೆ ಅವರು ಮನೆಗೆ ತಲುಪುವ ವೇಳೆಗೆ, ಇಬ್ಬರೂ ಪರಾರಿಯಾಗಿದ್ದರ. ಮಹಿಳೆಯನ್ನು ಬಿ.ಕೆ.ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆರೋಪಿಗಳಿಗೆ ಹುಡುಕಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಮೋಹಿತ್ ಅಪರಾಧ ಹಿನ್ನಲೆ ಹೊಂದಿದ್ದ ಎನ್ನಲಾಗಿದ್ದು, ಗುಂಪು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.

Similar News