ಭಾರತ್ ಜೋಡೊ ಯಾತ್ರೆಯನ್ನು ಶ್ಲಾಘಿಸಿದ ಬಾಲಿವುಡ್ ನಟಿ ಸ್ವರ ಭಾಸ್ಕರ್
ಮುಂಬೈ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರ ಭಾರತ್ ಜೋಡೊ ಯಾತ್ರೆಯನ್ನು ಬಾಲಿವುಡ್ ನಟಿ ಸ್ವರ ಭಾಸ್ಕರ್ ಶ್ಲಾಘಿಸಿದ್ದಾರೆ. ದೇಶದ ಪ್ರಸ್ತುತ ಪರಿಸ್ಥಿತಿಯಲ್ಲಿ ಈ ಯಾತ್ರೆ ಪ್ರಶಂಸನೀಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಯಾತ್ರೆಯ ಟೆಲಿವಿಷನ್ ದೃಶ್ಯ ತುಣುಕು ಶೇರ್ ಮಾಡಿರುವ ಅವರು, ನಿರಂತರ ವೈಯಕ್ತಿಕ ದಾಳಿಗಳ ಹೊರತಾಗಿಯೂ ರಾಹುಲ್ ಗಾಂಧಿ, ಭಾವನಾತ್ಮಕ ರಾಜಕಾರಣವನ್ನು ಆಯ್ಕೆ ಮಾಡಿಕೊಂಡಿಲ್ಲ ಎಂದು ಗುಣಗಾನ ಮಾಡಿದ್ದಾರೆ.
ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಕೂಡಾ ಸ್ವರ ಭಾಸ್ಕರ್ ಅವರ ಶ್ಲಾಘನೆಯನ್ನು ಬೆಂಬಲಿಸಿದ್ದು, ಸ್ವರ ಭಾಸ್ಕರ್ ಅವರ ಟ್ವೀಟನ್ನು ಶೇರ್ ಮಾಡಿ "ಅಂತಿಮವಾಗಿ" ಎಂದು ಉದ್ಗರಿಸಿದ್ದಾರೆ.
"ಶ್ಲಾಘನೆ ಬಾಕಿ ಇದೆ.. ಚುನಾವಣಾ ಸೋಲುಗಳು, ಟ್ರೋಲಿಂಗ್, ವೈಯಕ್ತಿಕ ದಾಳಿ ಮತ್ತು ಪರಿಣಾಮಕಾರಿ ನಾಯಕ ಅಲ್ಲ ಎಂಬ ನಿರಂತರ ಟೀಕೆಗಳ ನಡುವೆಯೂ, ರಾಹುಲ್ ಕೋಮು ದ್ವೇಷದ ಮಾತಿಗೆ ಅಥವಾ ಭಾವನಾತ್ಮಕ ರಾಜಕೀಯಕ್ಕೆ ಬಲಿ ಬೀಳಲಿಲ್ಲ. ದೇಶದ ಇಂದಿನ ಪರಿಸ್ಥಿತಿಯಲ್ಲಿ, ಭಾರತ್ ಜೋಡೋದಂಥ ಪ್ರಯತ್ನ ಪ್ರಶಂಸನೀಯ" ಎಂದು ಸ್ವರ ಭಾಸ್ಕರ್ ಟ್ವೀಟ್ ಮಾಡಿದ್ದಾರೆ. ಇದು ಭಾರತ್ ಜೋಡೊ ಯಾತ್ರೆಗೆ ಪ್ರಚಾರ ಅಲ್ಲ ಎಂದು ಅವರು ಮತ್ತೊಂದು ಟ್ವೀಟ್‍ನಲ್ಲಿ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ hindustantimes.com ವರದಿ ಮಾಡಿದೆ.
Credit where due.. Despite electoral defeats, trolling, personal attacks & constant critique abt being ineffective, @RahulGandhi has neither succumbed to communal rhetoric nor sensationalist politics. Given the situation of this country effort like @bharatjodo is commendable! pic.twitter.com/hncg1UuiCj
— Swara Bhasker (@ReallySwara) October 28, 2022