ತೆಲಂಗಾಣ ಆಪರೇಷನ್‌ ಕಮಲ ಪ್ರಕರಣ: ಆಡಿಯೋ ಕ್ಲಿಪ್‍ನಲ್ಲಿ ʼಶಾಹ್ ಜೀʼ ಉಲ್ಲೇಖ ಕುರಿತು ಪ್ರಶ್ನಿಸಿದ ಸಿಸೋಡಿಯಾ

Update: 2022-10-29 10:58 GMT

 ಹೊಸದಿಲ್ಲಿ: ತೆಲಂಗಾಣ ರಾಷ್ಟ್ರ ಸಮಿತಿಯ (ಟಿಆರ್‍ಎಸ್) ಕೆಲ ಶಾಸಕರಿಗೆ ಲಂಚದ ಆಮಿಷವೊಡ್ಡಿ ಅವರಿಗೆ ಬಿಜೆಪಿ ಸೇರಲು ಮಾಡಲಾಗಿದೆ ಎಂಬ ಪ್ರಯತ್ನಗಳ ಕುರಿತಂತೆ ಇಂದು ಬಿಜೆಪಿ ನಾಯಕತ್ವದ ವಿರುದ್ಧ ಕಿಡಿ ಕಾರಿದ ದಿಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಬಿಜೆಪಿಯೇತರ ಸರಕಾರಗಳಿರುವ ರಾಜ್ಯಗಳಲ್ಲಿ ನಡೆಯುವ `ಆಪರೇಷನ್ ಕಮಲ' ದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಶಾಮೀಲಾತಿ ಇದೆಯೆಂದಾದಲ್ಲಿ ಅವರನ್ನು ಬಂಧಿಸಬೇಕು ಎಂದು ಹೇಳಿದರು.

ಬಿಜೆಪಿ ಸೇರಲು ಕೆಲ ಟಿಆರ್‍ಎಸ್ ಶಾಸಕರುಗಳಿಗೆ ಮೂವರು  ಲಂಚದ ಆಮಿಷವೊಡ್ಡಿ ನಡೆಸುತ್ತಿರುವ ಸಂಭಾಷಣೆಯ ಆಡಿಯೋ ಕ್ಲಿಪ್‍ನಲ್ಲಿ `ಶಾಹ್ ಜೀ' ಎಂಬ ಉಲ್ಲೇಖವಿರುವ ಬಗ್ಗೆ ಮಾತನಾಡಿದ ಸಿಸೋಡಿಯಾ "ಈ ʼಶಾಹ್ ಜೀʼ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಆಗಿದ್ದರೆ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು" ಎಂದರು.

"ದಲ್ಲಾಳಿಯೊಬ್ಬ ಶಾಸಕನೊಬ್ಬನನ್ನು ಖರೀದಿಸುವ ಯತ್ನದಲ್ಲಿ ಸಿಕ್ಕಿ ಬಿದ್ದಾಗ ಹಾಗೂ ಈ ಸಂದರ್ಭದಲ್ಲಿ ಗೃಹ ಸಚಿವರ ಹೆಸರು ಕೂಡ ಕೇಳಿ ಬಂದರೆ ಇದು ದೇಶಕ್ಕೆ ಅಪಾಯಕಾರಿ" ಎಂದು ಸಿಸೋಡಿಯಾ ಹೇಳಿದರು.

ತೆಲಂಗಾಣದಲ್ಲಿ ಬಿಜೆಪಿ ನಡೆಸಿದೆಯೆನ್ನಲಾದ ಆಪರೇಷನ್ ಕಮಲ ಉಲ್ಲೇಖಿಸಿದ ಸಿಸೋಡಿಯಾ, "ಸೈಬರಾಬಾದ್‍ನಲ್ಲಿ ದಾಳಿ ನಡೆದು ರೂ 100 ಕೋಟಿಯೊಂದಿಗೆ ಮೂವರು ಸಿಕ್ಕಿಬಿದ್ದರೆಂದು ಅಕ್ಟೋಬರ್ 27 ರಂದು ವರದಿಯಾಗಿತ್ತು. ಈ ದಲ್ಲಾಳಿಗಳ ಫೋಟೋಗಳೂ ಇವೆ. ಅವರು ಬಿಜೆಪಿಯ ಆಪರೇಷನ್ ಕಮಲ ನಡೆಸುತ್ತಿದ್ದರು. ಈ ದಲ್ಲಾಳಿಗಳ ಹೆಸರು ರಾಮಚಂದ್ರ ಭಾರತಿ, ಸಿಮಯ್ಯ ಮತ್ತು ನಂದ ಕುಮಾರ್" ಎಂದು ಅವರು ಹೇಳಿದರು.

"ಇಂದು ಇನ್ನೊಂದು ಆಡಿಯೋ ಹೊರಬಿದ್ದಿದೆ. ಇದರಲ್ಲಿ ತೆಲಂಗಾಣ ಶಾಸಕರು ಹಾಗೂ ದಲ್ಲಾಳಿಗಳ ನಡುವಿನ ಮಾತುಕತೆಯಿದೆ. ದಿಲ್ಲಿಯಲ್ಲಿಯೂ ಪ್ರಯತ್ನಿಸಿದ್ದಾಗಿಯೂ ದಲ್ಲಾಳಿಯೊಬ್ಬ ಹೇಳುತ್ತಿರುವುದು ಕೇಳಿಸುತ್ತದೆ. ದಿಲ್ಲಿಯಲ್ಲಿ ಆಪ್‍ನ 43 ಶಾಸಕರನ್ನು ಬಿಜೆಪಿಗೆ ತರಲು ಪ್ರಯತ್ನಿಸಿದ್ದಾಗಿಯೂ ಅವರಲ್ಲೊಬ್ಬ ಹೇಳುವುದು ಕೇಳಿಸುತ್ತದೆ,'' ಎಂದು ಸಿಸೋಡಿಯಾ ಹೇಳಿದರು.

Similar News