ಇಮ್ರಾನ್ ಖಾನ್ ರ್‍ಯಾಲಿ ಯಲ್ಲಿ ಪಾಲ್ಗೊಳ್ಳುವವರಿಗೆ ಹೊಟೇಲ್,ಅತಿಥಿಗೃಹಗಳಲ್ಲಿ ವಾಸ್ತವ್ಯಕ್ಕೆ ನಿಷೇಧ

ರ್‍ಯಾಲಿಯ ನೇರ ಪ್ರಸಾರಕ್ಕೆ ಟಿವಿ ವಾಹಿನಿಗಳಿಗೆ ನಿರ್ಬಂಧ

Update: 2022-10-29 16:09 GMT

  ಇಸ್ಲಾಮಾಬಾದ್,ನವೆಂಬರ್ 29: ಸಾರ್ವತ್ರಿಕ ಚುನಾವಣೆಯ ದಿನಾಂಕವನ್ನು ಶೀಘ್ರವೇ ಘೋಷಿಸುವುದಕ್ಕಾಗಿ ಸರಕಾರದ ಮೇಲೆ ಒತ್ತಡಹೇರಲು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan)ನೇತೃತ್ವದಲ್ಲಿ ಆಯೋಜಿಸಲಾಗಿರುವ  ರ್‍ಯಾಲಿ ಯಲ್ಲಿ ಪಾಲ್ಗೊಳ್ಳುವವರಿಗೆ ರಾಜಧಾನಿಯ ಹೊಟೇಲ್‌ಗಳು ಹಾಗೂ ಅತಿಥಿಗೃಹಗಳಲ್ಲಿ ವಾಸ್ತವ್ಯವನ್ನು ಒದಗಿಸುವುದಕ್ಕೆ ಪೊಲೀಸರು ಶನಿವಾರ ನಿಷೇಧ ವಿಧಿಸಿದ್ದಾರೆ.

 ಪಾಕಿಸ್ತಾನ್ ತೆಹ್ರಿಕೆ ಇನ್ಸಾಫ್(Pakistan Tehreek-e-Insaf) (ಪಿಟಿಐ) ಪಕ್ಷದ ನಾಯಕರ ಭಾಷಣಗಳು ಹಾಗೂ ಸುದೀರ್ಘ ಪಾದಯಾತ್ರೆಯನ್ನು ನೇರ ಪ್ರಸಾರ ಮಾಡದಂತೆ ಪಾಕಿಸ್ತಾನದ ಇಲೆಕ್ಟ್ರಾನಿಕ್ ಮಾಧ್ಯಮ ನಿಯಂತ್ರಣ ಪ್ರಾಧಿಕಾರ ( ಪೆಮ್ರಾ) ಟಿವಿ ವಾಹಿನಿಗಳಿಗೆ ಸೂಚನೆ ನೀಡಿದೆ.

     ಸರಕಾರಿ ಸಂಸ್ಥೆಗಳ ವಿರುದ್ಧ ಹೇಳಿಕೆಗಳನ್ನು ನೇರ ಪ್ರಸಾರ ಮಾಡುವುದು ನೀತಿ ಸಂಹಿತೆ ಹಾಗೂ ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗಲಿದೆಯೆಂದು ಗಿ ಪೆಮ್ರಾ ತಿಳಿಸಿದೆ. ತನ್ನ ಆದೇಶಕ್ಕೆ ಬದ್ಧವಾಗಿ ನಡೆದುಕೊಳ್ಳದ ಟಿವಿ ವಾಹಿನಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಅವುಗಳ ಪರವಾನಗಿಯನ್ನು ಅಮಾನತುಗೊಳಿಸಲಾಗುವುದು ಇಲ್ಲವೇ ರದ್ದುಪಡಿಸಲಾಗುವುದು ಎಂದು ಅದು ಎಚ್ಚರಿಕೆ ನೀಡಿದೆ.

  ‘ಹಕೀಕಿ ಆಝಾದ್ ಮಾರ್ಚ್’('Hakeeqi Azad March') ಎಂದು ಬಣ್ಣಿಸಲಾಗಿರುವ ಈ ಪಾದಯಾತ್ರೆಯು ಲಾಹೋರ್ ನಗರದ ಸ್ವಾತಂತ್ರ ಚೌಕದಿಂದ ಶುಕ್ರವಾರ ಮಧ್ಯಾಹ್ನ ಆರಂಭಗೊಂಡಿದೆ. ಲಾಹೋರ್‌ನ ಇಸ್ರಾ, ಮೊಝಾಂಗ್, ದಾಟಾ ಸಾಹೀಬ್ ಹಾಗೂ ಆಝಾದಿ ಚೌಕ ಪ್ರದೇಶಗಳಲ್ಲಿ ಪಿಟಿಐ ಪಕ್ಷವು ತನ್ನ ಬಲ ಪ್ರದರ್ಶನಕ್ಕಾಗಿ ಸಭೆಗಳನ್ನು ಆಯೋಜಿಸಿದ್ದರಿಂದ ಪಾದಯಾತ್ರೆಯು ನಿಧಾನವಾಗಿ ಸಾಗುತ್ತಿದೆ.

     ಶುಕ್ರವಾರ ರಾತ್ರಿ ದಾಟಾ ದರ್ಬಾರ್ ಪ್ರದೇಶದಲ್ಲಿ ಪಾದಯಾತ್ರೆ ಸ್ಥಗಿತಗೊಂಡಿದ್ದು, ಶನಿವಾರ ಬೆಳಗ್ಗೆ ಪುನಾರಂಭಗೊಂಡಿದೆ. ಈ ಪಾದಯಾತ್ರೆಯು ಐತಿಹಾಸಿಕ ಜಿ.ಟಿ.ರೋಡ್ ಮಾರ್ಗವಾಗಿ ಇಸ್ಲಾಮಾಬಾದ್‌ನತ್ತ ಸಾಗಲಿದ್ದು, ನವೆಂಬರ್ 4ರಂದು ಇಸ್ಲಾಮಾಬಾದ್ ತಲುಪಲಿದೆ ಹಾಗೂ ಅಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿಯೊಂದನ್ನು ಆಯೋಜಿಸಲಾಗಿದೆ.

Similar News