×
Ad

ಕಳವು ಆರೋಪದಲ್ಲಿ ಇಬ್ಬರು ಬಾಲಕರನ್ನು ಟ್ರಕ್‌ಗೆ ಕಟ್ಟಿ ರಸ್ತೆಯಲ್ಲಿ ಎಳೆದೊಯ್ದರು

Update: 2022-10-29 23:14 IST

ಭೋಪಾಲ,ಅ.29: ಹಣವನ್ನು ಕದ್ದ ಆರೋಪದಲ್ಲಿ ಹದಿಹರೆಯದ ಇಬ್ಬರು ಬಾಲಕರನ್ನು ಥಳಿಸಿ,ಕಾಲುಗಳನ್ನು ಟ್ರಕ್‌ನ ಹಿಂಭಾಗಕ್ಕೆ ಕಟ್ಟಿ ಜನನಿಬಿಡ ಮಾರುಕಟ್ಟೆ ರಸ್ತೆಯಲ್ಲಿ ಎಳೆದೊಯ್ದ ಕ್ರೂರ ಘಟನೆ ಮಧ್ಯಪ್ರದೇಶದ ಇಂದೋರನಲ್ಲಿ ಸಂಭವಿಸಿದೆ.

ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಶೇರ್ ಆಗಿದೆ. ಕಳ್ಳತನ ಆರೋಪದಲ್ಲಿ ಬಾಲಕರಿಬ್ಬರ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು,ವೀಡಿಯೊ ಸಾಕ್ಷದ ಆಧಾರದಲ್ಲಿ ಬಾಲಕರ ಮೇಲೆ ಕ್ರೌರ್ಯವೆಸಗಿದವರ ವಿರುದ್ಧವೂ ಪ್ರಕರಣವನ್ನು ದಾಖಲಿಸುವುದಾಗಿ ತಿಳಿಸಿದ್ದಾರೆ.

ಮಾರುಕಟ್ಟೆಯಲ್ಲಿ ತರಕಾರಿಗಳನ್ನು ಇಳಿಸುತ್ತಿದ್ದಾಗ ಬಾಲಕರು ಟ್ರಕ್‌ನಲ್ಲಿಟ್ಟಿದ್ದ ಹಣವನ್ನು ಕಳವು ಮಾಡಿದ್ದಾರೆ ಎಂದು ಚಾಲಕ ಮತ್ತು ಇಬ್ಬರು ವ್ಯಾಪಾರಿಗಳು ಆರೋಪಿಸಿದ್ದಾರೆ. ಬಾಲಕರು ಹಣ ಕಳವು ಮಾಡಿದ್ದನ್ನು ತಾನು ಕಣ್ಣಾರೆ ನೋಡಿರುವುದಾಗಿ ಚಾಲಕ ಹೇಳಿಕೊಂಡಿದ್ದಾನೆ.

ವ್ಯಾಪಾರಿಗಳು ಸೇರಿದಂತೆ ಗುಂಪು ಬಾಲಕರನ್ನು ಥಳಿಸಿದ ಬಳಿಕ ಅವರ ಕಾಲುಗಳನ್ನು ಹಗ್ಗದಿಂದ ಟ್ರಕ್‌ನ ಹಿಂಭಾಗಕ್ಕೆ ಕಟ್ಟಿ ಅವರನ್ನು ಬಲವಂತದಿಂದ ರಸ್ತೆಯಲ್ಲಿ ಅಂಗಾತ ಮಲಗಿಸಿ ಮಾರುಕಟ್ಟೆಯ ಸುತ್ತ ಎಳೆದೊಯ್ದಿದ್ದರು.

ಗಾಯಗೊಂಡಿರುವ ಬಾಲಕರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.

Similar News