ನೋಟುಗಳನ್ನು ಯಾರು ವಿನ್ಯಾಸಗೊಳಿಸುತ್ತಾರೆ ಗೊತ್ತೆ?
ಇತ್ತೀಚೆಗೆ ದೇಶದ ನೋಟುಗಳಲ್ಲಿ ಕೆಲವೊಂದು ಚಿತ್ರಗಳನ್ನು ಅಚ್ಚುಮಾಡುವ ಬಗ್ಗೆ ರಾಜಕೀಯ ನಾಯಕರು ಸಲಹೆ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನೋಟುಗಳ ವಿನ್ಯಾಸ ಮತ್ತು ರೂಪದಲ್ಲಿ ಬದಲಾವಣೆ ಪ್ರಕ್ರಿಯೆಯು ಹೇಗೆ ನಡೆಯುತ್ತದೆ ಎನ್ನುವುದನ್ನು ತಿಳಿದುಕೊಳ್ಳುವುದು ಆಸಕ್ತಿಪೂರ್ಣವಾಗಿದೆ.
ನೋಟುಗಳು ಮತ್ತು ನಾಣ್ಯಗಳ ರೂಪ ಮತ್ತು ವಿನ್ಯಾಸದಲ್ಲಿ ಬದಲಾವಣೆಯನ್ನು ಆರ್‌ಬಿಐ ಮತ್ತು ಕೇಂದ್ರ ಸರಕಾರ ನಿರ್ಧರಿಸುತ್ತವೆ. ಕರೆನ್ಸಿ ನೋಟಿನ ವಿನ್ಯಾಸದಲ್ಲಿ ಯಾವುದೇ ಬದಲಾವಣೆಯನ್ನು ಆರ್‌ಬಿಐನ ಕೇಂದ್ರ ಮಂಡಳಿ ಮತ್ತು ಕೇಂದ್ರ ಸರಕಾರ ಅನುಮೋದಿಸಬೇಕಾಗುತ್ತದೆ. ನಾಣ್ಯಗಳ ವಿನ್ಯಾಸದಲ್ಲಿ ಬದಲಾವಣೆ ಕೇಂದ್ರ ಸರಕಾರದ ಪರಮಾಧಿಕಾರವಾಗಿದೆ.
ನೋಟುಗಳ ವಿತರಣೆಯಲ್ಲಿ ಆರ್‌ಬಿಐ ಪಾತ್ರವೇನು?
ಆರ್‌ಬಿಐ ಆಂತರಿಕವಾಗಿ ವಿನ್ಯಾಸವನ್ನು ರೂಪಿಸುತ್ತದೆ ಮತ್ತು ಅದನ್ನು ಆರ್‌ಬಿಐನ ಸೆಂಟ್ರಲ್ ಬೋರ್ಡ್‌ನ ಮುಂದಿರಿಸಲಾಗುತ್ತದೆ. ಆರ್‌ಬಿಐ ಕಾಯ್ದೆಯ ಕಲಂ ೨೨ ನೋಟುಗಳನ್ನು ವಿತರಿಸುವ ಸಂಪೂರ್ಣ ಹಕ್ಕನ್ನು ಆರ್‌ಬಿಐಗೆ ನೀಡಿದೆ. ಆರ್‌ಬಿಐ ಸೆಂಟ್ರಲ್ ಬೋರ್ಡ್‌ನ ಶಿಫಾರಸುಗಳನ್ನು ಪರಿಗಣಿಸಿ ಕೇಂದ್ರ ಸರಕಾರವು ನೋಟುಗಳ ವಿನ್ಯಾಸ ಮತ್ತು ರೂಪಗಳನ್ನು ಅನುಮೋದಿಸಬಹುದು ಎಂದು ಕಲಂ ೨೫ ಹೇಳುತ್ತದೆ.
ಆರ್‌ಬಿಐನ ಕರೆನ್ಸಿ ನಿರ್ವಹಣೆ ವಿಭಾಗವು ಕರೆನ್ಸಿ ನಿರ್ವಹಣೆಯ ಮುಖ್ಯ ಕಾರ್ಯವನ್ನು ನೋಡಿಕೊಳ್ಳುವ ಹೊಣೆಗಾರಿಕೆಯನ್ನು ಹೊಂದಿದೆ.
ಕರೆನ್ಸಿ ನೋಟಿನ ವಿನ್ಯಾಸದಲ್ಲಿ ಬದಲಾವಣೆಯಾಗಬೇಕಿದ್ದರೆ ಈ ವಿಭಾಗವು ವಿನ್ಯಾಸವನ್ನು ರೂಪಿಸಿ ಆರ್‌ಬಿಐಗೆ ಸಲ್ಲಿಸುತ್ತದೆ. ಬಳಿಕ ಆರ್‌ಬಿಐ ಅದನ್ನು ಕೇಂದ್ರಕ್ಕೆ ಶಿಫಾರಸು ಮಾಡುತ್ತದೆ ಮತ್ತು ಸರಕಾರವು ಅಂತಿಮ ಒಪ್ಪಿಗೆಯನ್ನು ನೀಡುತ್ತದೆ.
ನಾಣ್ಯಗಳ ಟಂಕಿಸುವಿಕೆಯನ್ನು ಯಾರು ನಿರ್ಧರಿಸುತ್ತಾರೆ?
2011ರ ನಾಣ್ಯಗಳ ಕಾಯ್ದೆಯು ವಿವಿಧ ಮುಖಬೆಲೆಗಳಲ್ಲಿ ನಾಣ್ಯಗಳನ್ನು ವಿನ್ಯಾಸಗೊಳಿಸುವ ಮತ್ತು ಟಂಕಿಸುವ ಅಧಿಕಾರವನ್ನು ಕೇಂದ್ರ ಸರಕಾರಕ್ಕೆ ನೀಡಿದೆ. ನಾಣ್ಯಗಳಿಗೆ ಸಂಬಂಧಿಸಿದಂತೆ ಆರ್‌ಬಿಐನ ಪಾತ್ರವು ಕೇಂದ್ರ ಸರಕಾರವು ತನಗೆ ಪೂರೈಸಿದ ನಾಣ್ಯಗಳ ವಿತರಣೆಗಷ್ಟೇ ಸೀಮಿತವಾಗಿದೆ.
ವಾರ್ಷಿಕವಾಗಿ ಆರ್‌ಬಿಐನಿಂದ ಸ್ವೀಕರಿಸಲಾದ ಬೇಡಿಕೆಗಳ ಆಧಾರದಲ್ಲಿ ಟಂಕಿಸಬೇಕಾದ ನಾಣ್ಯಗಳ ಪ್ರಮಾಣವನ್ನು ಸರಕಾರವು ನಿರ್ಧರಿಸುತ್ತದೆ. ಮುಂಬೈ, ಹೈದರಾಬಾದ್, ಕೋಲ್ಕತಾ ಮತ್ತು ನೊಯ್ಡಾಗಳಲ್ಲಿರುವ ಭಾರತ ಸರಕಾರದ ಒಡೆತನದ ಟಂಕಸಾಲೆಗಳಲ್ಲಿ ನಾಣ್ಯಗಳನ್ನು ಟಂಕಿಸಲಾಗುತ್ತದೆ.
ಆರ್‌ಬಿಐನ ಕರೆನ್ಸಿ ನಿರ್ವಹಣೆ ಹೇಗೆ ಕೆಲಸ ಮಾಡುತ್ತದೆ?
ಆರ್‌ಬಿಐ ಕೇಂದ್ರ ಸರಕಾರ ಮತ್ತು ಇತರ ಪಾಲುದಾರರೊಂದಿಗೆ ಸಮಾಲೋಚಿಸಿದ ಬಳಿಕ ವರ್ಷವೊಂದರಲ್ಲಿ ಮುಖಬೆಲೆವಾರು ಅಗತ್ಯವಾಗಬಹುದಾದ ಬ್ಯಾಂಕ್ ನೋಟುಗಳ ಪ್ರಮಾಣವನ್ನು ಅಂದಾಜಿಸುತ್ತದೆ ಮತ್ತು ಅವುಗಳ ಪೂರೈಕೆಗಾಗಿ ವಿವಿಧ ಕರೆನ್ಸಿ ಪ್ರಿಂಟಿಂಗ್ ಪ್ರೆಸ್‌ಗಳಿಗೆ ಬೇಡಿಕೆಗಳನ್ನು ಸಲ್ಲಿಸುತ್ತದೆ.
ತನ್ನ ಕ್ಲೀನ್ ನೋಟ್ ನೀತಿಗನುಗುಣವಾಗಿ ಆರ್‌ಬಿಐ ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ನೋಟುಗಳನ್ನು ಒದಗಿಸುತ್ತದೆ. ಚಲಾವಣೆಯಿಂದ ವಾಪಸಾದ ನೋಟುಗಳನ್ನು ಪರಿಶೀಲಿಸಿ ಚಲಾವಣೆಗೆ ಅರ್ಹವಾದ ನೋಟುಗಳನ್ನು ಮರುವಿತರಿಸಲಾಗುತ್ತದೆ ಮತ್ತು ಮಣ್ಣಾದ ಹಾಗೂ ಹರಿದ ನೋಟುಗಳನ್ನು ನಾಶ ಮಾಡಲಾಗುತ್ತದೆ.
ನಾಸಿಕ್ ಮತ್ತು ದೇವಾಸ್‌ನಲ್ಲಿರುವ ಕರೆನ್ಸಿ ನೋಟ್ ಮುದ್ರಣಾಲಯಗಳು ಭಾರತ ಸರಕಾರದ ಒಡೆತನಕ್ಕೆ ಸೇರಿದ್ದರೆ ಆರ್‌ಬಿಐ ತನ್ನ ಅಂಗಸಂಸ್ಥೆ ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ ಲಿ.ಮೂಲಕ ಮೈಸೂರು ಮತ್ತು ಪ.ಬಂಗಾಳದ ಸಾಲಬನಿಯಲ್ಲಿರುವ ಮುದ್ರಣಾಲಯಗಳ ಒಡೆತನವನ್ನು ಹೊಂದಿದೆ.
ಪ್ರಸಕ್ತ 10,20,50,100,200,500 ಮತ್ತು 2,000 ರೂ.ಮುಖಬೆಲೆಗಳ ನೋಟುಗಳನ್ನು ವಿತರಿಸಲಾಗುತ್ತಿದೆ. ಎರಡು ಮತ್ತು ಐದು ರೂ.ಗಳನ್ನು ವಿತರಿಸಲಾಗುತ್ತಿಲ್ಲ,ಆದಾಗ್ಯೂ ಈ ಮುಖಬೆಲೆಗಳ ಹಳೆಯ ನೋಟುಗಳು ಈಗಲೂ ಚಲಾವಣೆಯಲ್ಲಿದ್ದರೆ ಅವು ಕಾನೂನುಬದ್ಧವಾಗಿವೆ. ಇದು ಒಂದು ರೂ.ನೋಟಿಗೂ ಅನ್ವಯಿಸುತ್ತದೆ.
ಈವರೆಗೆ ಯಾವ ವಿಧದ ನೋಟುಗಳನ್ನು ವಿತರಿಸಲಾಗಿದೆ?
ಅಶೋಕ ಸ್ತಂಭ, ಮಹಾತ್ಮಾ ಗಾಂಧಿ ಸರಣಿ 1996, ಮಹಾತ್ಮಾ ಗಾಂಧಿ ಸರಣಿ 2005 ಮತ್ತು ಮಹಾತ್ಮಾ ಗಾಂಧಿ (ಹೊಸ) ಸರಣಿ, 2016 ನೋಟುಗಳನ್ನು ಈವರೆಗೆ ವಿತರಿಸಲಾಗಿದೆ.
ನೂತನ ಸರಣಿಯಿಂದ 2,000 ರೂ.ಮುಖಬೆಲೆಯ ನೋಟುಗಳನ್ನು ಮಂಗಳಯಾನದ ಚಿತ್ರದೊಂದಿಗೆ 2016, ನ.8ರಂದು ಬಿಡುಗಡೆಗೊಳಿಸಲಾಗಿತ್ತು. ನಂತರ ಈ ಸರಣಿಯಿಂದ 500, 200, 100, 50, 20 ಮತ್ತು 10 ರೂ.ಮುಖಬೆಲೆಗಳ ನೋಟುಗಳನ್ನು ಬಿಡುಗಡೆಗೊಳಿಸಲಾಗಿತ್ತು.