×
Ad

ಅ.31-ನ.13: ಉಡುಪಿ ಜಿಲ್ಲಾದ್ಯಂತ ಕಾನೂನು ಕುರಿತ ಜಾಗೃತಿ ಅಭಿಯಾನ

Update: 2022-10-30 16:12 IST

ಉಡುಪಿ, ಅ.30 : ರಾಷ್ಟ್ರೀಯ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ನೆನಪಿಗಾಗಿ ರಾಷ್ಟ್ರ, ರಾಜ್ಯ, ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ, ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಅ.31ರಿಂದ ನ.13ರವರೆಗೆ ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕಾನೂನು ಅರಿವು ಮತ್ತು ಪ್ರಚಾರ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

2 ವಾರಗಳ ಈ ಅಭಿಯಾನದಲ್ಲಿ ಪ್ರತಿ ಗ್ರಾಪಂಗಳನ್ನು ತಲುಪುವ ಮತ್ತು ಪ್ರತಿಯೊಂದು ಉಪವಿಭಾಗದಲ್ಲಿ ಒಮ್ಮೆಯಾದರೂ ಕನಿಷ್ಠ ಒಂದು ಕಾರ್ಯ ಕ್ರಮವನ್ನು ವಕೀಲರು, ಅರೆಕಾಲಿಕ ಕಾನೂನು ಸ್ವಯಂಸೇವಕರು, ಕಾನೂನು ವಿದ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ತೆಯರು, ಪೋಲಿಸರು, ಶಿಕ್ಷಕರು ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಾಂತರ ಜಿಲ್ಲೆಯ ಗ್ರಾಮೀಣ, ಬುಡಕಟ್ಟು ಮತ್ತು ದೂರದ ಪ್ರದೇಶಗಳಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯನ್ನು ತಲುಪುವ ಬಗ್ಗೆ ಜಾಗೃತಿ ಹಾಗೂ ಪ್ರಚಾರದ ಚಟುವಟಿಕೆಗಳನ್ನು ಆಯೋಜಿಸುವ ಗುರಿಯನ್ನು ಹೊಂದಲಾಗಿದೆ.

ಅ.31ರಂದು ಉಡುಪಿ ನ್ಯಾಯಾಲಯದ ಆವರಣ ದಲ್ಲಿ ಆಯೋಜಿಸಿರುವ ಜಾಗೃತಿ ಅರಿವು ಸಪ್ತಾಹ ಮತ್ತು ಮಾನವ ಕಳ್ಳ ಸಾಗಣೆಯ ವಿರುದ್ಧ ಜನ ಜಾಗೃತಿ ಅಭಿಯಾನದ ಸಂಬಂಧ ಬೋರ್ಡ್ ಹೈಸ್ಕೂಲ್‌ನಿಂದ ಬೈಕ್ ರ್‍ಯಾಲಿ ನಡೆಸುವ ಮೂಲಕ ಈ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಪ್ರಕಟನೆ ತಿಳಿಸಿದೆ.

Similar News