ತನ್ನ ಹೊಟೇಲ್ ಕೊಠಡಿಯ ವೀಡಿಯೊವನ್ನು ಹರಿಯಬಿಟ್ಟ ಅಭಿಮಾನಿಯ ವಿರುದ್ಧ ವಿರಾಟ್ ಕೊಹ್ಲಿ ಆಕ್ರೋಶ

"ದಯವಿಟ್ಟು ಜನರ ಖಾಸಗಿತನವನ್ನು ಗೌರವಿಸಿ , ಅವರನ್ನು ಮನರಂಜನೆಯ ಸರಕು ಎಂದು ಪರಿಗಣಿಸಬೇಡಿ''

Update: 2022-10-31 15:07 GMT

ಪರ್ತ್, ಅ.31: ಅಭಿಮಾನಿಯೊಬ್ಬ ತಾನಿಲ್ಲದ ವೇಳೆ ತನ್ನ ಹೊಟೇಲ್ ಕೊಠಡಿಯ ವೀಡಿಯೊವನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿರುವ ಘಟನೆಯನ್ನು ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ತೀವ್ರವಾಗಿ ಖಂಡಿಸಿದ್ದಾರೆ.

 ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವೀಡಿಯೊವನ್ನು ಕೊಹ್ಲಿ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸಂದೇಶದೊಂದಿಗೆ ಮರು ಶೇರ್ ಮಾಡಿದ್ದಾರೆ. ಈ ರೀತಿಯ ಅಂದಾಭಿಮಾನ ನನಗೆ ಇಷ್ಟವಾಗುವುದಿಲ್ಲ ಎಂದು ಹೇಳಿದ್ದಾರೆ.

 "ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರನ್ನು ನೋಡಿ ಸಂತೋಷಪಡುತ್ತಾರೆ, ಅವರನ್ನು ಭೇಟಿ ಮಾಡಲು ಉತ್ಸುಕರಾಗುತ್ತಾರೆ ಎಂಬುದನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಅದನ್ನು ನಾನು ಯಾವಾಗಲೂ ಪ್ರಶಂಸುತ್ತೇನೆ. ಆದರೆ ಈ ವೀಡಿಯೊ ಆಘಾತಕಾರಿ. ಇದು ನನ್ನ ಗೌಪ್ಯತೆಯನ್ನು ಚಿಂತಿಸುವಂತೆ ಮಾಡಿದೆ. ನಾನು ತಂಗಿರುವ ಹೊಟೇಲ್ ಕೋಣೆಯಲ್ಲಿ ಖಾಸಗಿತನ ಕಾಯ್ದುಕೊಳ್ಳಲು ಸಾಧ್ಯವಾಗದಿದ್ದರೆ ಇನ್ನೆಲ್ಲಿ ಇದನ್ನ್ನು ನಿರೀಕ್ಷಿಸಬಹುದು. ಇಂತಹ ಅಂದಾಭಿಮಾನ ಹಾಗೂ ಖಾಸಗಿತನ ಮೇಲಿನ ದಾಳಿಯನ್ನು ನಾನು ಇಷ್ಟಪಡುವುದಿಲ್ಲ. ದಯವಿಟ್ಟು ಜನರ ಖಾಸಗಿತನವನ್ನು ಗೌರವಿಸಿ ಹಾಗೂ ಅವರನ್ನು ಮನರಂಜನೆಯ ಸರಕು ಎಂದು ಪರಿಗಣಿಸಬೇಡಿ'' ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಕೊಹ್ಲಿ ಬರೆದಿದ್ದಾರೆ.

‘ಕಿಂಗ್ ಕೊಹ್ಲಿಯ ಹೊಟೇಲ್ ರೂಮ್’ಎಂಬ ಶೀರ್ಷಿಕೆಯ ವೀಡಿಯೊದಲ್ಲಿ ವ್ಯಕ್ತಿಯೊಬ್ಬ ಕೊಹ್ಲಿಯ ಕೊಠಡಿಯ ತುಂಬೆಲ್ಲಾ ಓಡಾಡಿದ್ದಾನೆ. ಕೊಹ್ಲಿಯ ವೈಯಕ್ತಿಕ ವಸ್ತುಗಳಾದ ಪೂರಕ ಆಹಾರಗಳು, ಶೂಗಳ ಸಂಗ್ರಹ,ತೆರೆದ ಶೂಟ್‌ಕೇಸ್‌ನಲ್ಲಿದ್ದ ಭಾರತದ ಜೆರ್ಸಿಗಳು, ಕ್ಯಾಪ್‌ಗಳು ಹಾಗೂ ಒಂದು ಜೋಡಿ ಕನ್ನಡಕ ವೀಡಿಯೊದಲ್ಲಿ ಕಂಡುಬಂದಿದೆ. ವೀಡಿಯೊವನ್ನು ಚಿತ್ರೀಕರಿಸುವಾಗ ಒಬ್ಬರಿಗಿಂತ ಹೆಚ್ಚು ಜನರಿದ್ದಂತೆ ಕಂಡುಬಂದಿದ್ದು, ಪ್ರಾಯಶಃ ಹೊಟೇಲ್ ಸಿಬ್ಬಂದಿ ಸದಸ್ಯರು ಕೋಣೆಯೊಳಗೆ ಇದ್ದಂತೆ ತೋರುತ್ತಿದೆ.

ಆಸ್ಟ್ರೇಲಿಯದ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಈ ಘಟನೆಯ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ಹಾಸ್ಯಾಸ್ಪದ, ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಎಂದು ವಾರ್ನರ್ ಟ್ವೀಟಿಸಿದ್ದಾರೆ.

ಕೊಹ್ಲಿ ಅವರ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ಜನರ ಖಾಸಗಿತನವನ್ನು ಅಗೌರವಿಸುವ ಜನರ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.

 "ನಾನು ಕೆಲವು ಘಟನೆಯನ್ನು ಎದುರಿಸಿದ್ದೇನೆ. ಅಲ್ಲಿ ಅಭಿಮಾನಿಗಳು ಯಾವುದೇ ಸಹಾನುಭೂತಿ ತೋರಿಸಲಿಲ್ಲ. ಆದರೆ ಇದು ನಿಜವಾಗಿಯೂ ಕೆಟ್ಟ ವಿಷಯವಾಗಿದೆ. ಇದು ವ್ಯಕ್ತಿಯ ಖಾಸಗಿತನದ ಉಲ್ಲಂಘನೆಯಾಗಿದೆ. ನೀವು ಕೂಡ ಸಮಸ್ಯೆಯ ಭಾಗವಾಗಿದ್ದೀರಿ ಎಂದು ತಿಳಿದಿರಬೇಕು'' ಎಂದು ಅನುಷ್ಕಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದಿದ್ದಾರೆ.

ಈ ವರ್ಷದ ಜನವರಿಯಲ್ಲಿ ಭಾರತದ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಪ್ರಸಾರಕರು ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ದಂಪತಿಯ ಪುತ್ರಿಯ ಚಿತ್ರವನ್ನು  ಬಿತ್ತರಿಸಿದ ನಂತರ ತಮ್ಮ ಮಗಳು ವಾಮಿಕಾಳ ಚಿತ್ರವನ್ನು ಪ್ರಕಟಿಸದಂತೆ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಮಾಧ್ಯಮಗಳಿಗೆ ವಿನಂತಿಸಿದ್ದರು.
 

Similar News