1991ರಿಂದ ಎಲ್ಲ ಸರಕಾರಿ ಹೂಡಿಕೆ ಹಿಂದೆಗೆತದಲ್ಲಿ ಮೋದಿ ಸರಕಾರದ ಪಾಲು ಶೇ.72

Theprint.in ವಿಶ್ಲೇಷಣಾ ವರದಿ

Update: 2022-10-31 15:11 GMT

 ಹೊಸದಿಲ್ಲಿ,ಅ.31: ಈ ವರ್ಷದ ಫೆಬ್ರವರಿಯಲ್ಲಿ ಕೇಂದ್ರ ಬಜೆಟ್ ಮಂಡನೆಯ ಕೆಲವು ದಿನಗಳ ಬಳಿಕ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿದ್ದ ಪ್ರಧಾನಿ ನರೇಂದ್ರ ಮೋದಿಯವರು, ಉದ್ಯಮಗಳನ್ನು ನಡೆಸುವುದು ಸರಕಾರದ ಕೆಲಸವಲ್ಲ. ಬಡವರು ಮತ್ತು ರೈತರ ಏಳಿಗೆಯ ಬಗ್ಗೆ ಯೋಚಿಸುವುದು,ಅವರಿಗೆ ಮೂಲಸೌಲಭ್ಯಗಳನ್ನು ಒದಗಿಸುವುದು ಸರಕಾರದ ಕೆಲಸವಾಗಿದೆ. ಇದು ತನ್ನ ಆದ್ಯತೆಯಾಗಿದೆ ಎಂದು ಹೇಳಿದ್ದರು.

ಕೆಲಸದ ಮೇಲೆ ಸರಕಾರವು ಗಮನವನ್ನು ಕೇಂದ್ರೀಕರಿಸಬೇಕು ಎಂಬ ಅವರ ಹೇಳಿಕೆಯ ಎರಡನೇ ಭಾಗ ಪ್ರಗತಿಯಲ್ಲಿದ್ದರೆ,ಕಳೆದ ಮೂರು ದಶಕಗಳಲ್ಲಿಯ ಹೂಡಿಕೆ ಹಿಂದೆಗೆತದ ದತ್ತಾಂಶಗಳು ಸರಕಾರದ ಕೆಲಸ ಉದ್ಯಮಗಳನ್ನು ನಡೆಸುವುದಲ್ಲ ಎಂಬ ಅವರ ಬದ್ಧತೆ ಪೊಳ್ಳುಮಾತಲ್ಲ ಎನ್ನುವುದನ್ನು ತೋರಿಸಿವೆ.

ಹೂಡಿಕೆ ಹಿಂದೆಗೆತಕ್ಕೆ ಮೋದಿ ಸರಕಾರವು ಎಷ್ಟು ಒತ್ತು ನೀಡಿದೆಯೆಂದರೆ 1991ರಲ್ಲಿ ಈ ಪ್ರಕ್ರಿಯೆ ಮೊದಲು ಆರಂಭಗೊಂಡಾಗಿನಿಂದ ಈವರೆಗೆ ಹರಿದುಬಂದಿರುವ ಒಟ್ಟು ಆದಾಯದಲ್ಲಿ ಅದರ ಪಾಲು ಶೇ.72 (4.48 ಲ.ಕೋ.ರೂ.)ರಷ್ಟಿದೆ ಎನ್ನುವುದನ್ನು theprint.in ಸುದ್ದಿ ಜಾಲತಾಣ ಪ್ರಕಟಿಸಿರುವ ವಿಶ್ಲೇಷಣಾ ವರದಿಯು ತೋರಿಸಿದೆ.

ವಿಶ್ಲೇಷಣೆಗಾಗಿ 1991 ಮತ್ತು 2022ರ ನಡುವೆ ವಾರ್ಷಿಕ ಹಣದುಬ್ಬರವನ್ನು ಸರಾಸರಿ ಶೇ.6 ಎಂದು ಲೆಕ್ಕಹಾಕಲಾಗಿತ್ತು. ಇದನ್ನು ಪರಿಗಣನೆಗೆ ತೆಗೆದುಕೊಂಡರೂ ಎಲ್ಲ ಹೂಡಿಕೆ ಹಿಂದೆಗೆತ ಆದಾಯಗಳ ಶೇ.57ರಷ್ಟು ಗಣನೀಯ ಪಾಲು 2014ರ ನಂತರವೇ ಬಂದಿದೆ.

1991ರಿಂದ 1999ರ ನಡುವೆ ಸಾರ್ವಜನಿಕ ಕ್ಷೇತ್ರದ ಉದ್ಯಮಗಳಲ್ಲಿಯ ಸರಕಾರದ ಪಾಲು ಬಂಡವಾಳದ ಹಿಂದೆಗೆತದ ಮೊತ್ತ ಕೇವಲ 17,557 ಕೋ.ರೂ. (ಇಂದಿನ ಮೌಲ್ಯ ಸುಮಾರು 91,800 ಕೋ.ರೂ.) ಆಗಿದ್ದರೆ 1999ರಿಂದ 2004ರ ನಡುವೆ ವಾಜಪೇಯಿ ನೇತೃತ್ವದ ಸರಕಾರದ ಅವಧಿಯಲ್ಲಿ 27,599 ಕೋ.ರೂ.(ಇಂದಿನ ಮೌಲ್ಯ ಸುಮಾರು 93,300 ಕೋ.ರೂ.)ಗಳ ಆದಾಯ ಹರಿದುಬಂದಿತ್ತು. 2004ರಿಂದ 2014 ನಡುವೆ ಯುಪಿಎ ಆಡಳಿತದಲ್ಲಿ 1.32 ಲ.ಕೋ.ರೂ.(ಇಂದಿನ ಮೌಲ್ಯ 2.4 ಲ.ಕೋ.ರೂ.)ಗಳ ಬಂಡವಾಳವನ್ನು ಹಿಂದೆಗೆದುಕೊಳ್ಳಲಾಗಿತ್ತು.

ಆದರೆ ಸರಕಾರದ ಹೂಡಿಕೆ ಹಿಂದೆಗೆತ ಅಭಿಯಾನಕ್ಕೆ ನಿಜವಾದ ವೇಗ ಲಭಿಸಿದ್ದು 2014ರಲ್ಲಿ ಮೋದಿ ಪಟ್ಟಕ್ಕೇರಿದ ಬಳಿಕವೇ. ಮೋದಿ ಸರಕಾರದ ಮೊದಲ ಅವಧಿ (2014-2019)ಯಲ್ಲಿ ಹೂಡಿಕೆ ಹಿಂದೆಗೆತಗಳ ಮೂಲಕ 3.2 ಲ.ಕೋ.ರೂ.( ಇಂದಿನ ಮೌಲ್ಯ 4.7 ಲ.ಕೋ.ರೂ.) ಹರಿದುಬಂದಿದ್ದರೆ ಎರಡನೇ ಅವಧಿಯಲ್ಲಿ ಸೆಪ್ಟಂಬರ್ವರೆಗಿನ ಮೂರೂವರೆ ವರ್ಷಗಳಲ್ಲಿ 1.26 ಲ.ಕೋ.ರೂ.(ಇಂದಿನ ಮೌಲ್ಯ 1.48 ಲ.ಕೋ.ರೂ.) ಆದಾಯ ಲಭಿಸಿದೆ. ಈ ಅವಧಿಯಲ್ಲಿ ಹೂಡಿಕೆ ಹಿಂದೆಗೆತ ಅಭಿಯಾನಕ್ಕೆ ಹಿನ್ನಡೆಯನ್ನುಂಟು ಮಾಡಿದ್ದ ಕೋವಿಡ್ ಸಾಂಕ್ರಾಮಿಕದ ಎರಡು ವರ್ಷಗಳು ಸೇರಿವೆ ಎನ್ನುವುದನ್ನು ಗಮನಿಸಬೇಕು.

 ಲಾಕ್ಡೌನ್ ಪೀಡಿತ ಆರ್ಥಿಕತೆಗೆ ಸ್ಥಿರತೆಯನ್ನು ಒದಗಿಸುವ ಉದ್ದೇಶದ ಮೇ 2020ರ ಆತ್ಮನಿರ್ಭರ ಭಾರತ ಪ್ಯಾಕೇಜಿನ ಭಾಗವಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಉದ್ಯಮಗಳಲ್ಲಿ ಸರಕಾರದ ಪಾತ್ರವನ್ನು ಕಡಿಮೆಗೊಳಿಸಲು ಮತ್ತು ಹೆಚ್ಚಿನ ಖಾಸಗಿ ಕ್ಷೇತ್ರದ ಕಂಪನಿಗಳ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲು ಸಾರ್ವಜನಿಕ ಕ್ಷೇತ್ರ ಉದ್ಯಮ ನೀತಿಯನ್ನು ಪ್ರಕಟಿಸಿದ್ದರು. ನಂತರ ಬಜೆಟ್ನಲ್ಲಿ ಈ ಪ್ರಕಟಣೆಯನ್ನು ವಿಸ್ತರಿಸಿದ್ದ ವಿತ್ತ ಸಚಿವೆ ನೀತಿಯ ಬಾಹ್ಯರೇಖೆಗಳನ್ನು ಒದಗಿಸಿದ್ದರು. ನೂತನ ಕಾರ್ಯತಂತ್ರದಂತೆ ಸರಕಾರವು ಅಣುಶಕ್ತಿ,ಬಾಹ್ಯಾಕಾಶ ಮತ್ತು ರಕ್ಷಣೆ,ಸಾರಿಗೆ ಮತ್ತು ದೂರಸಂಪರ್ಕ,ವಿದ್ಯುತ್,ಪೆಟ್ರೋಲಿಯಂ, ಕಲ್ಲಿದ್ದಲು ಮತ್ತು ಇತರ ಖನಿಜಗಳು ಹಾಗೂ ಬ್ಯಾಂಕಿಂಗ್,ವಿಮೆ ಮತ್ತು ಹಣಕಾಸು ಸೇವೆ;ಈ ವ್ಯೆಹಾತ್ಮಕ ಕ್ಷೇತ್ರಗಳಲ್ಲಿ ‘ಕನಿಷ್ಠ’ ಉಪಸ್ಥಿತಿಯನ್ನು ಕಾಯ್ದುಕೊಳ್ಳುತ್ತದೆ. ವ್ಯೆಹಾತ್ಮಕವಲ್ಲದ ಕ್ಷೇತ್ರಗಳಲ್ಲಿ ಸಾರ್ವಜನಿಕ ಕ್ಷೇತ್ರದ ಉದ್ಯಮಗಳನ್ನು ಖಾಸಗೀಕರಿಸಲಾಗುತ್ತದೆ ಅಥವಾ ಮುಚ್ಚಲಾಗುತ್ತದೆ.
 
‘ಉದ್ಯಮಗಳನ್ನು ನಡೆಸುವುದು ಸರಕಾರದ ಕೆಲಸವಲ್ಲ ’ಎಂಬ ಮೋದಿಯವರ ಹೇಳಿಕೆಯೊಂದಿಗೆ ಸರಕಾರದ ಕಾರ್ಯತಂತ್ರವನ್ನು ಅತ್ಯುತ್ತಮವಾಗಿ ವ್ಯಕ್ತಪಡಿಸಲು ಬಹುಶಃ ಇದು ಕಾರಣವಾಗಬಹುದು.
 
ಮೋದಿ ಸರಕಾರದ ಅಡಿ ಹೂಡಿಕೆ ಹಿಂದೆಗೆತಗಳು ಗಮನಾರ್ಹವಾಗಿದ್ದರೂ ಆದಾಯ ತೆರಿಗೆ,ಕಾರ್ಪೊರೇಟ್ ತೆರಿಗೆ ಮತ್ತು ಜಿಎಸ್ಟಿಯಂತಹ ಸರಕಾರದ ಇತರ ಆದಾಯ ಮೂಲಗಳ ಸಣ್ಣಭಾಗವಾಗಿವೆ ಎನ್ನುವುದನ್ನು ದತ್ತಾಂಶಗಳು ತೋರಿಸಿವೆ.
ಹಾಗಾದರೆ ಹೂಡಿಕೆ ಹಿಂದೆಗೆತಕ್ಕೆ ಅಷ್ಟೊಂದು ಭಾರೀ ಪ್ರಾಮುಖ್ಯವನ್ನು ನೀಡಲಾಗುತ್ತಿದೆ? ಈ ಪ್ರಶ್ನೆಗೆ ಎರಡು ಸ್ತರಗಳ ಉತ್ತರವಿದೆ.

ಮೊದಲನೆಯದಾಗಿ ಪಿಡಬ್ಲುಸಿ ಇಂಡಿಯಾದಲ್ಲಿ ಸರಕಾರಿ ವಲಯದ ನಾಯಕ ರಾನೆನ್ ಬ್ಯಾನರ್ಜಿ ಹೇಳುವಂತೆ,ಒಟ್ಟಾರೆ ಬಜೆಟ್ಗೆ ಹೋಲಿಸಿದರೆ ಹೂಡಿಕೆ ಹಿಂದೆಗೆತಗಳಿಂದ ಆದಾಯ ಕಡಿಮೆಯಿದ್ದರೂ ಅದನ್ನು ಕಡೆಗಣಿಸುವಂತಿಲ್ಲ.

ಹಿಂದೆ ಒಟ್ಟು ವಿತ್ತೀಯ ಕೊರತೆಯು 10ರಿಂದ 12 ಲ.ರೂ.ಗಳ ಶ್ರೇಣಿಯಲ್ಲಿದ್ದರೆ ಮತ್ತು ಹೂಡಿಕೆ ಹಿಂದೆಗೆತಕ್ಕಾಗಿ ನಿಮ್ಮ ಬಜೆಟ್ ಸುಮಾರು ಒಂದು ಲ.ಕೋ.ರೂ.ಗಳಿದ್ದರೆ ಆಗಲೂ ಅದು ಒಟ್ಟು ವಿತ್ತೀಯ ಕೊರತೆಯ ಗಮನಾರ್ಹ ಭಾಗವಾಗಿತ್ತು. ಆದ್ದರಿಂದ ಶೇ.4ರ ವಿತ್ತೀಯ ಕೊರತೆಯನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಸಿದ್ಧಪಡಿಸುತ್ತಿದ್ದರೆ ಆಗ 30 ರಿಂದ 40 ಮೂಲಾಂಶಗಳು ಹೂಡಿಕೆ ಹಿಂದೆಗೆತಗಳಿಂದ ಬರಬೇಕಾಗುತ್ತದೆ ಎಂದು ಬ್ಯಾನರ್ಜಿ ವಿವರಿಸಿದರು..
 
ಎರಡನೆಯದಾಗಿ ಖ್ಯಾತ ಅರ್ಥಶಾಸ್ತ್ರಜ್ಞ ರಿಷಿ ಶಾ ಹೇಳುವಂತೆ,ಹೂಡಿಕೆ ಹಿಂದೆಗೆತವು ಕೆಲವು ಕ್ಷೇತ್ರಗಳಲ್ಲಿ ಮಾರುಕಟ್ಟೆಯನ್ನು ಖಾಸಗಿ ಕ್ಷೇತ್ರಗಳಿಗೆ ಮುಕ್ತಗೊಳಿಸಲು ಸಾಧನವಾಗಿದೆ ಮತ್ತು ಸರಕಾರವು ತನ್ನ ಆಸ್ತಿಗಳಿಗೆ ಸರಿಯಾದ ಬೆಲೆಯನ್ನು ಪಡೆಯುವುದನ್ನು ಖಚಿತಪಡಿಸುತ್ತದೆ. ಹೂಡಿಕೆ ಹಿಂದೆಗೆತಗಳನ್ನು ಸುಸ್ಥಿರ ಆದಾಯದ ಮಾರ್ಗಕ್ಕಿಂತ ವ್ಯೂಹಾತ್ಮಕ ದೃಷ್ಟಿಕೋನದಿಂದ ನೋಡುವ ಅಗತ್ಯವಿದೆ.

ಕೃಪೆ: Theprint.in

Similar News