ರಸ್ತೆ ಗುಂಡಿ ಮುಚ್ಚಲೂ ಸರಕಾರದ ಬಳಿ ಹಣವಿಲ್ಲ: ಶಾಸಕ ಯು.ಟಿ. ಖಾದರ್

Update: 2022-10-31 15:33 GMT

ಬಂಟ್ವಾಳ (Bantwal): ರಸ್ತೆ ಗುಂಡಿಗಳಿಂದ ರಾಜ್ಯದಲ್ಲಿ ದಿನನಿತ್ಯ ಹಲವು ಅಪಘಾತಗಳು ಸಂಭವಿಸಿ ಸಾವು, ನೋವುಗಳು ನಡೆಯುತ್ತಿದ್ದರೂ ರಸ್ತೆ ಗುಂಡಿಗಳನ್ನು ಮುಚ್ಚಲು ರಾಜ್ಯ ಸರಕಾರದ ಬಳಿ ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶಾಸಕ ಯು.ಟಿ.ಖಾದರ್ (UT Khader) ಹೇಳಿದರು. 

ಬಂಟ್ವಾಳ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇವಲ ರಸ್ತೆ ಗುಂಡಿಗಳನ್ನು ಮುಚ್ಚಲು ಸರಕಾರದ ಬಳಿ ಹಣವಿಲ್ಲ ಎಂದಾದರೆ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. 

ಬಿಜೆಪಿ ಸರಕಾರ ತನ್ನ ಅವಧಿಯಲ್ಲಿ ಶಿಕ್ಷಣ, ಆರೋಗ್ಯ, ಉದ್ಯೋಗಕ್ಕೆ ಸಂಬಂಧಿಸಿದ ಯಾವುದಾದರೂ ಒಂದು ಮಹತ್ವದ ಯೋಜನೆಯನ್ನು ಜಾರಿಗೆ ತಂದಿದೆಯೇ ಎಂದು ಪ್ರಶ್ನಿಸಿದ ಅವರು, ಪಡಿತರ ಚೀಟಿ, ನಿವೇಶನ, ವಸತಿ, ಶಿಕ್ಷಣ, ಆರೋಗ್ಯ ಸಹಿತ ಬಡವರಿಗೆ ನೀಡಲಾಗುತ್ತಿದ್ದ ಎಲ್ಲಾ ಯೋಜನೆಗಳನ್ನು ರಾಜ್ಯ ಸರಕಾರ ನಿಲ್ಲಿಸಿದೆ. ಅಂತ್ಯಸಂಸ್ಕಾರಕ್ಕೆ ನೀಡುತ್ತಿದ್ದ ಐದು ಸಾವಿರ ರೂ. ಅನ್ನು ಕೂಡಾ ರದ್ದು ಮಾಡಿದೆ. ಸರಕಾರಿ ನೌಕರಿಗೆ ಸಂಬಳ ಕೂಡಾ ಸಿಗುತ್ತಿಲ್ಲ ಎಂದು ಹೇಳಿದರು. 

ಪ್ರಾಮಾಣಿಕವಾಗಿ ದುಡಿಯುತ್ತಿದ್ದ ಅಧಿಕಾರಿಗಳನ್ನು ಕೂಡಾ ಭ್ರಷ್ಟರನ್ನಾಗಿ ಸರಕಾರ ಮಾಡಿದೆ. ಸಿದ್ದರಾಮಯ್ಯ ಸರಕಾರ ಹಲವಾರು ಜನಪರ ಯೋಜನೆಗಳನ್ನು, ರಾಜ್ಯದಲ್ಲಿ ಹಿಂದೆಂದೂ ಕಾಣದಷ್ಟು ಅಭಿವೃದ್ಧಿ ಕೆಲಸಗಳು ನಡೆಸಿದರೂ ಜನರು ಮತ್ತೆ ಕಾಂಗ್ರೆಸ್ ಗೆ ಅಧಿಕಾರ ನೀಡಿಲ್ಲ. ಬಿಜೆಪಿಯ ಸುಳ್ಳನ್ನು ನಂಬಿ ಅಧಿಕಾರ ನೀಡಿದ ಜನರು ಈಗ ಪ್ರಶ್ಚಾತ್ತಾಪ ಪಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಜನರು ಅಧಿಕಾರ ನೀಡಲಿದ್ದಾರೆ ಎಂದು ಹೇಳಿದರು. 

ಇದನ್ನೂ ಓದಿ: ಮಂಗಳೂರು: ಕೊಲೆ ಪ್ರಕರಣದ ಆರೋಪಿಗೆ ಜೀವಾವಧಿ ಶಿಕ್ಷೆ

ಬಂಟ್ವಾಳ ತಾಲೂಕಿಗೆ ಒಳಪಡುವ ತನ್ನ ಕ್ಷೇತ್ರದ ಗ್ರಾಮಗಳಿಗೆ ದಿನದ 24 ಗಂಟೆಯೂ ಕುಡಿಯುವ ನೀರಿನ ಮಹತ್ವದ ಯೋಜನೆಗೆ ಚಾಲನೆ ದೊರೆಯಲಿದ್ದು ಜನತೆಯ ಬಹುಕಾಲದ ಬೇಡಿಕೆ ಈಡೇರಲಿದೆ. ಪುದು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮಾದರಿ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸುವ ಕೆಲಸ ಶೀರ್ಘದಲ್ಲೇ ನಡೆಯಲಿದೆ. ತುಂಬೆ - ಸಜಿಪನಡು ನೇತ್ರಾವತಿ ನದಿಗೆ ಸೇತುವೆ ನಿರ್ಮಾಣ ಕಾರ್ಯ ಕೂಡಾ ಶೀರ್ಘದಲ್ಲೇ ಅನುಷ್ಠಾನಗೊಳ್ಳಲಿದೆ ಎಂದು ಅವರು ಹೇಳಿದರು. 

ಅಡ್ಯಾರ್ - ಪಾವೂರ್ ಡ್ಯಾಂ ಹಾಗೂ ಸೇತುವೆ ಕಾಮಗಾರಿ ಮುಕ್ತಾಯಗೊಂಡಿದ್ದು ಜನರ ಸೇವೆಗೆ ಲಭ್ಯವಾಗಲಿದೆ. ಉಳ್ಳಾಲ ತಾಲೂಕಿಗೆ ಪ್ರತ್ಯೇಕ ಮಿನಿ ವಿಧಾನ ಸೌಧ, ನ್ಯಾಯಲಯ ಸಹಿತ ವಿವಿಧ ಸರಕಾರಿ ಕಚೇರಿಗಳನ್ನು ಜನರಿಗೆ ಅನುಕೂಲ ಆಗುವಂತೆ ಬೇರೆ ಬೇರೆ ಸ್ಥಳಗಳಲ್ಲಿ ನಿರ್ಮಾಣವಾಗಲಿದೆ. ಕ್ಷೇತ್ರದಲ್ಲಿ 5 ಎಕ್ಕರೆ ಜಾಗವನ್ನು ಗುರುತಿಸಲಾಗಿದ್ದು ಈ ಜಾಗವನ್ನು ತುಳು ಗ್ರಾಮವಾಗಿ ರೂಪಿಸಲಾಗುವುದು. ಇಲ್ಲಿ ಕಂಬಳ, ತುಳು ನಾಡಿನ ಇತಿಹಾಸ, ಸಂಸ್ಕೃತಿ, ತುಳು ನಾಡಿದ ವೀರ ಪುರುಷರ ಚರಿತ್ರೆ, ಭಾಷೆ, ಜಾತಿ, ಜನಾಂಗದ ಇತಿಹಾಸವನ್ನು ತಿಳಿಸುವ ಯುವ ಪೀಳಿಗೆಗೆ ಹಾಗೂ ಪ್ರವಾಸಿಗರಿಗೆ ತಿಳಿಸುವ ಕಾರ್ಯ ವಿಧಾನ ಈ ತುಳು ಗ್ರಾಮದಲ್ಲಿ ಇರಲಿದೆ ಎಂದರು. 

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಮಮತಾ ಗಟ್ಟಿ, ಉಮರ್ ಫಾರೂಕ್ ಫರಂಗಿಪೇಟೆ, ತಾಪಂ ಮಾಜಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಇರಾ ಗ್ರಾಪಂ ಮಾಜಿ ಅಧ್ಯಕ್ಷ ರಝಾಕ್ ಕುಕ್ಕಾಜೆ ಮೊದಲಾದವರು ಉಪಸ್ಥಿತರಿದ್ದರು.

Similar News