×
Ad

ಮೂಡುಬಿದಿರೆ: ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಆರೋಪ; ಅಂಗಿ ಕಳಚಿ ಪ್ರತಿಭಟಿಸಿದ ಪುರಸಭೆ ಸದಸ್ಯ

Update: 2022-10-31 23:22 IST

ಮೂಡುಬಿದಿರೆ: ಹುಡ್ಕೊ ಕಾಲನಿಯ ಪರಿಶಿಷ್ಟ  ಜಾತಿ ಮೀಸಲು ಕ್ಷೇತ್ರಕ್ಕೆ ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಪುರಸಭೆ ಸದಸ್ಯ ಕೊರಗಪ್ಪ ಕಲಾಪದ ಮಧ್ಯೆ ಅಂಗಿ ಕಳಚಿ ಪ್ರತಿಭಟನೆ ನಡೆಸಿದರು.

ಪುರಸಭೆ ಅಧ್ಯಕ್ಷ ಪ್ರಸಾದ್ ಕುಮಾರ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಕೊರಗಪ್ಪ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ನಿಮ್ಮ ಮೌಖಿಕ ಮನವಿಯ ಮೇರೆಗೆ ನಾನು ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ ಅವರು ಸ್ಥಳಕ್ಕೆ ಹೋಗಿ ಆಗಬೇಕಾದ ಕಾಮಗಾರಿಯ ಬಗ್ಗೆ ಚರ್ಚಿಸಿ ಕ್ರಮಜರಗಿಸಲು ಸೂಚಿಸಿರುವುದಾಗಿಯೂ ಯಾವುದೇ ಅನುದಾನ ಕೊರಗಪ್ಪ ಅವರ ವಾರ್ಡ್‍ಗೆ ಸಲ್ಲುವಲ್ಲಿ ಬಾಕಿಯಾಗಿಲ್ಲ. ನೀವು ಕೊಟ್ಟ ಅರ್ಜಿ ನನ್ನ ಗಮನಕ್ಕೆ ಕಾರಣಾಂತರಗಳಿಂದ ನನ್ನ ಗಮನಕ್ಕೆ ಬಂದಿಲ್ಲವಾದರೂ ಈ ಕಾಮಗಾರಿಯ ಬಗ್ಗೆ ಅಂದಾಜು ಪಟ್ಟಿ ತಯಾರಿಸಲು ಎಂಜಿನಿಯರ್ ಅವರಿಗೆ ಸೂಚಿಸಿರುತ್ತೇನೆ. ಅಜೆಂಡಾದಲ್ಲಿ ಬಂದಿಲ್ಲ ಎಂಬ ಒಂದೇ ಕಾರಣ ಇರಿಸಿಕೊಂಡು ನೀವು ಈ ರೀತಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಅಧ್ಯಕ್ಷರು ಸ್ಪಷ್ಟಪಡಿಸಿದರು. 

ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ. ಮಹಿಳಾ ಸದಸ್ಯರು ಕೂಡ ಇರುವ ಈ ಸಭೆಯಲ್ಲಿ ನೀವು ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದು ಸರಿ ಅಲ್ಲ ಎಂದು ಉಪಾಧ್ಯಕ್ಷೆ ಸುಜಾತ ಶಶಿಧರ್ ಹೇಳಿದರು. ಕೊರಗಪ್ಪ ಅವರು ಪ್ರತಿಭಟಿಸಿದ ರೀತಿಯನ್ನು ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ್ ಪೂಜಾರಿ ಸೇರಿಂತೆ ಬಿಜೆಪಿಯ ಬಹುತೇಕ ಸದಸ್ಯರು ಆಕ್ಷೇಪಿಸಿದರು. ಚರ್ಚೆಯ ಮಧ್ಯೆ ಗಾಂಧಿನಗರ ಎಸ್.ಟಿ ಕ್ಷೇತ್ರದ ಬಿಜೆಪಿ ಸದಸ್ಯೆ ದಿವ್ಯಾ ಅವರ ವಾರ್ಡ್‍ಗೆ ಅನುದಾನ ಕೊಟ್ಟಿದ್ದೀರಿ ಎಂದು ಕೊರಗಪ್ಪ ಆರೋಪಿಸಿದಾಗ ನಾನು ಅರ್ಜಿ ಮಾತ್ರ ಕೊಟ್ಟಿದು ಅನುದಾನ ಬಂದಿಲ್ಲ ಎಂದರು.

ಕೃಷ್ಣಕಟ್ಟೆ ಎದುರು ಇಂಟರ್‍ಲಾಕ್, ಹಳೆ ಪೊಲೀಸ್ ಠಾಣೆ ಬಳಿ ರಸ್ತೆ ವಿಸ್ತರಣೆ ಕಾಮಗಾರಿಯ ಟೆಂಡರ್ ವಿಷಯದಲ್ಲಿ ತಾಂತ್ರಿಕ ಅನರ್ಹತೆ ಕುರಿತಾದ ಚರ್ಚೆ ತಾರಕಕ್ಕೇರಿ ಕೊರಗಪ್ಪ ತೀವ್ರವಾಗಿ ಆಕ್ಷೇಪ ದಾಖಲಿಸಿ, ಕೊನೆಗೂ ಈ ಟೆಂಡರು ವಿಷಯವನ್ನು ಪೆಂಡಿಂಗ್ ಇರಿಸಲಾಯಿತು. ಈ ವಿಷಯದಲ್ಲಿರುವ ತಾಂತ್ರಿಕ ತೊಂದರೆಗಳ ಬಗ್ಗೆ ಇಂಜಿನಿಯರ್ ಪದ್ಮನಾಭ್ ಅವರು ಸವಿವರ ಮಾಹಿತಿ ನೀಡಿದರು.

ಕೋಳಿ ಮಾಂಸ ನಗರದ ಸರಹದ್ದಿನ ಹೌದಾಲ್‍ನಲ್ಲಿ ಕೆ.ಜಿಗೆ 170 ರೂ. ಇದ್ದರೆ ಮೂಡುಬಿದಿರೆಯಲ್ಲಿ 220 ರೂ. ಹೀಗೇಕೆ ಎಂದು ಸದಸ್ಯ ಸುರೇಶ್ ಕೋಟ್ಯಾನ್ ಪ್ರಸ್ತಾಪಿಸಿದರು. ಮಾರ್ಪಾಡಿ ಗ್ರಾಮದ ನಿಧಿ ಪ್ಯಾಲೇಸ್‍ನಲ್ಲಿ ಬೆಂಗಳೂರು ಮೂಲದ ವ್ಯಾಪಾರಿಯ ಎಮ್ಮೆ ಮಾಂಸ ಮಾರಾಟ ಮಳಿಗೆ ಸ್ಥಾಪನೆಗೆ ಪರವಾನಿಗೆ ನೀಡದಿರಲು ನಿರ್ಧರಿಸಿದ ಸಂದರ್ಭ  ಕೋಳಿ ಮಾಂಸ ಮಾರಾಟಕ್ಕೆ ಏಕವ್ಯಕ್ತಿಗೆ ಪರವಾನಿಗೆ ನೀಡಿರುವ ಕ್ರಮ ಬದಲಾಯಿಸಿ ಬಹುಮಂದಿಗೆ ನೀಡಿದರೆ ದರದಲ್ಲಿ ಸ್ಪರ್ಧೆ ಏರ್ಪಟ್ಟು ಗ್ರಾಹಕರಿಗೂ ಪುರಸಭೆಗೂ ಲಾಭವಾಗಬಹುದಲ್ಲವೇ ಸುರೇಶ್ ಕೋಟ್ಯಾನ್ ಪ್ರಶ್ನಿಸಿದರು. 

ಡಿಸೆಂಬರ್ ನಲ್ಲಿ ನಡೆಯಲಿರುವ ಸ್ಕೌಟ್ಸ್ ಗೈಡ್ಸ್  ವಿಶ್ವ ಸಾಂಸ್ಕೃತಿಕ ಜಾಂಬೂರಿಯ ಸಂದರ್ಭ ಮೂಡುಬಿದಿರೆಯ ಮನೆ ಮನೆಗೆ ತೆರಳಿ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸುವ  ಸ್ಕೌಟ್ಸ್ ಗೈಡ್ಸ್ ಸ್ವಯಂಸೇವಕರ ಕಾರ್ಯದಲ್ಲಿ ಪುರಸಭೆ ವಾರ್ಡ್ ನಕಾಶೆ ಸಹಿತ ಪೂರಕವಾಗಿ ಸಹಕರಿಸಬೇಕು ಎಂದು ಸ್ಕೌಟ್ಸ್ ಗೈಡ್ಸ್ ನ ಪರವಾಗಿ ಪ್ರಭಾಕರ ಭಟ್ ಮನವಿ ಮಾಡಿದರು. 

ಸ್ವರಾಜ್ಯ ಮೈದಾನದ ಪಶ್ಚಿಮಭಾಗದಲ್ಲಿ ನಿರ್ಮಿಸಲಾಗಿರುವ ಪುಟ್ಟ ಪಾರ್ಕ್‍ಗೆ ಧಾರ್ಮಿಕ, ಸಾಮಾಜಿಕ ಸೇವೆಗಾಗಿ ಹೆಸರಾಗಿದ್ದ  ಗುರುಸ್ವಾಮಿ ರಮೇಶ ಶಾಂತಿಯವರ ಹೆಸರಿಡಲು ಕೊರಗಪ್ಪ ಮನವಿ ಸಲ್ಲಿಸಿದರು. 

ಸ್ವರಾಜ್ಯ ಮೈದಾನದಲ್ಲಿ ವಾಹನ ಪಾರ್ಕಿಂಗ್‍ಗೆ ಅವಕಾಶ ಕೊಟ್ಟಿರುವದರಿಂದ ಸಾರ್ವಜನಿಕರಿಗೆ ಕ್ರಿಕೆಟ್ ಆಡಲು ಮೈದಾನ ಇಲ್ಲದಂತಾಗಿದೆ. ಇಲ್ಲಿ ವಾಹನ ಪಾರ್ಕಿಂಗ್ ನಿಷೇಧಿಸಿ ಕ್ರಿಕೆಟ್‍ಗೆ ಮಾತ್ರ ಅವಕಾಶ ಕಲ್ಪಿಸಬೇಕು ಎಂದು ಪುರಂದರ ದೇವಾಡಿಗ ಮತ್ತು ಸುರೇಶ್ ಪ್ರಭು, ಇಕ್ಬಾಲ್ ಕರೀಂ ಪ್ರಸ್ತಾಪಕ್ಕೆ ಪುರಸಭೆಯ ಬಹುತೇಕ ಸದಸ್ಯರು ಸಹಮತ ವ್ಯಕ್ತಪಡಿಸಿದರು. ಈ ಬಗ್ಗೆ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಪತ್ರ ಬರೆಯುವುದೆಂದು ಪುರಸಭೆ ತೀರ್ಮಾನಿಸಿತು. 

ಪುರಸಭೆ ಮುಖ್ಯಾಧಿಕಾರಿ ಇಂದು, ಪರಿಸರ ಇಂಜಿನಿಯರ್ ಶಿಲ್ಪಾ ಉಪಸ್ಥಿತರಿದ್ದರು.

Similar News