ಕಯ್ಯಾರ ಕಿಞ್ಞಣ್ಣ ರೈ ಸ್ಮಾರಕಕ್ಕೆ 50 ಲಕ್ಷ ರೂ. ಬಿಡುಗಡೆ: ಸಚಿವ ಸುನಿಲ್ ಕುಮಾರ್

Update: 2022-11-01 05:40 GMT

ಮಂಗಳೂರು, ನ.1: ಗಡಿನಾಡ ಕವಿ ಎಂದೇ ಖ್ಯಾತಿಯಾಗಿರುವ ಕಯ್ಯಾರ ಕಿಞ್ಞಣ್ಣ ರೈ ಅವರ ಸ್ಮಾರಕಕ್ಕೆ ಗಡಿ ಪ್ರದೇಶಾಭಿವೃದ್ಧಿ ಯೋಜನೆಯಡಿ 50 ಲಕ್ಷ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.

ನಗರದ ನೆಹರೂ ಮೈದಾನದಲ್ಲಿ ಮಂಗಳವಾರ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಳ್ಳಲಾದ ಕರ್ನಾಟಕ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಯೋಜನೆಯಡಿ ನಮ್ಮ ಸರ್ಕಾರ ದ.ಕ ಜಿಲ್ಲೆಗೆ ಕಳೆದ 5 ವರ್ಷಗಳಲ್ಲಿ 21ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದೆ ಹಾಗೂ ಕಳೆದ ಸಾಲಿನಲ್ಲಿ 23 ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಿದೆ ಈ ಮೂಲಕ ಗಡಿ ಪ್ರದೇಶಾಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದರು.

ದ.ಕ ಜಿಲ್ಲೆಯಲ್ಲಿ ಬಹುದಿನಗಳಿಂದಲೂ ರಂಗಮಂದಿರಕ್ಕೆ ಸಾಕಷ್ಟು ಬೇಡಿಕೆಯಿದ್ದು, ವಿವಿಧ ಕಾರಣಗಳಿಂದ ಜಿಲ್ಲಾ ರಂಗ ಮಂದಿರವು ನೆನೆಗುದಿಗೆ ಬಿದ್ದಿದೆ ಆದ್ದರಿಂದ ಈ ಬಗ್ಗೆ ಅಗತ್ಯ ಕ್ರಮ ವಹಿಸಲಾಗಿದೆ. ಈ ಬಗ್ಗೆ ಒಟ್ಟು 14 ಕೋಟಿ ರೂ. ವೆಚ್ಚದಲ್ಲಿ ಪರಿಷ್ಕೃತ ಯೋಜನೆ ತಯಾರಿಸಲಾಗಿದೆ ಹಾಗೂ ರಂಗ ಮಂದಿರ ನಿರ್ಮಾಣಕ್ಕೆ ಕ್ರಮವಹಿಸಲಾಗಿದೆ ಎಂದು ಸಚಿವರು ಈ ಸಂದರ್ಭ ತಿಳಿಸಿದರು.

ಕನ್ನಡ ಶಾಲೆಗಳ ಅಭಿವೃದ್ಧಿಯಡಿ ದ.ಕ ಜಿಲ್ಲಾ ಪಂಚಾಯತ್ ವತಿಯಿಂದ ಪ್ರಾರಂಭಿಕ ಹಂತದಲ್ಲಿ ಆಯ್ದ 27 ಶಾಲೆಗಳಲ್ಲಿ ಸ್ಮಾರ್ಟ್ ತರಗತಿಗಳನ್ನು ಆರಂಭಿಸಲಾಗಿದೆ ಹಾಗೂ ಕನ್ನಡ ಮಾಧ್ಯಮ ವಿಷಯಗಳಿಗೆ ಅನುಕೂಲವಾಗುವಂತೆ ವಿಜ್ಞಾನ ಮತ್ತು ಗಣಿತ ಲ್ಯಾಬ್‌ಗಳನ್ನು ಸ್ಥಾಪಿಸಲಾಗಿದೆ.ಕನ್ನಡಿಗರಿಗೆ ಉದ್ಯೋಗದಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತೀ ಹೆಚ್ಚು ಉದ್ಯೋಗಾವಕಾಶ ಸಲ್ಲಿಸಿರುವ ಪ್ರಮುಖ 45 ಕೈಗಾರಿಕೆಗಳಲ್ಲಿ ಒಟ್ಟು 13,055 ಉದ್ಯೋಗಗಳಿದ್ದು, ಇದರಲ್ಲಿ 11,627 ಅಂದರೆ ಶೇ. 89 ಕನ್ನಡಿಗರಿಗೆ ಉದ್ಯೋಗಾವಕಾಶ ನೀಡಲಾಗಿದೆ. ಕೋಟಿ ಕಂಠ ಗಾಯನದಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 12 ಲಕ್ಷ ಸಂಖ್ಯೆಯಲ್ಲಿ ಸಾರ್ವಜನಿಕರು ನೊಂದಾಯಿಸಿದ್ದು ಲಕ್ಷಾಂತರ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ ಎಂದು ಸಚಿವರು ಹೇಳಿದರು.

ನ್ಯಾಯಾಲಯಗಳಲ್ಲಿ ಕಾರ್ಯಕಲಾಪಗಳನ್ನು ಕನ್ನಡದಲ್ಲಿ ನಡೆಸಲು ಸಹ ಚಿಂತಿಸಲಾಗಿದೆ. ಕನ್ನಡ ಬಾಷೆಯ ಬಳಕೆ ಮತ್ತು ವ್ಯಾಪಕ ಪ್ರಚಾರಕ್ಕಾಗಿ ಎಲ್ಲಾ ಅಗತ್ಯ ಕ್ರಮಗಳನ್ನು ವಹಿಸಲಾಗುವುದು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಭಾಷೆಯನ್ನು ಸಹ ಸಮರ್ಪಕವಾಗಿ ಬಳಸಲಾಗುವುದು ಎಂದವರು ಹೇಳಿದರು.

ಉದ್ಯೋಗ ಪೋರ್ಟಲ್‌ನ್ನು ಅನುಷ್ಟಾನಕ್ಕೆ ತರುವ ಮೂಲಕ ರಾಜ್ಯ ಸರ್ಕಾರಿ ಕಛೇರಿ, ಸ್ಥಳೀಯ ಸಂಸ್ಥೆಗಳ ಪ್ರಾಧಿಕಾರ, ಸಾರ್ವಜನಿಕ ಉದ್ದಿಮೆ, ಖಾಸಗಿ ಕೈಗಾರಿಕೆ ಇವುಗಳಲ್ಲಿನ ನೇಮಕಾತಿಯನ್ನು ಉದ್ಯೋಗ ಪೋರ್ಟಲ್‌ನ ಮೂಲಕ ರ್ತಿ ಮಾಡಲು ಕ್ರಮವಹಿಸಲಾಗುವುದು. ಕೈಗಾರಿಕಾ ನೀತಿಯ ಪ್ರಕಾರ ಕನ್ನಡಿಗರಿಗೆ ಮೀಸಲಾತಿ ಒದಗಿಸುವ ಎಲ್ಲಾ ಕೈಗಾರಿಕೆಗಳು ಸಕಾರದಿಂದ ತೆರಿಗೆ ರಿಯಾಯಿತಿ ಅಥವಾ ತೆರಿಗೆ ಮುಂದೂಡಿಕೆ ಸೌಲ್ಯ ಪಡೆಯುವ ಹಕ್ಕನ್ನು ನೀಡಲು ಸೂಚಿಸಲಾಗಿದೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.

ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಯು.ಟಿ.ಖಾದರ್, ಉಮಾನಾಥ್ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್, ಹರೀಶ್ ಕುಮಾರ್ ಮೇಯರ್ ಜಯಾನಂದ ಅಂಚನ್, ಉಪ ಮೇಯರ್ ಪೂರ್ಣಿಮಾ, ದ.ಕ. ಜಿಲ್ಲಾಧಿಕಾರಿ (ಪ್ರಭಾರ) ಡಾ. ಕುಮಾರ, ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೊನಾವಣೆ, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಶ್ರೀನಾಥ್ ಉಪಸ್ಥಿತರಿದ್ದರು.

ವಿವಿಧ ಸಂಘ ಸಂಸ್ಥೆಗಳು ಹಾಗೂ ಸಾಧಕರಿಗೆ ದ.ಕ. ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನದ ಬಳಿಕ ನೆಹರೂ ಮೈದಾನದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನಡೆಯಿತು.

ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Similar News