ಉಡುಪಿ: ಆರು ಅಂಗಡಿಗಳ ಬೀಗ ಮುರಿದು ಸರಣಿ ಕಳವು
Update: 2022-11-01 11:42 IST
ಉಡುಪಿ, ನ.1: ಮಣಿಪಾಲ ಹಾಗೂ ಉಡುಪಿ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ಸರಣಿ ಕಳವು ನಡೆದಿರುವುದಾಗಿ ವರದಿಯಾಗಿದೆ.
ಕಳ್ಳರು ಆರು ಅಂಗಡಿಗಳ ಬೀಗ ಮುರಿದು, ಅಂಗಡಿಯೊಳಗಿದ್ದ ನಗದು ದೋಚಿಕೊಂಡು ಪರಾರಿಯಾಗಿದ್ದಾರೆ. ಮಣಿಪಾಲ ಠಾಣಾ ವ್ಯಾಪ್ತಿಯ ದೊಡ್ಡಣಗುಡ್ಡೆಯ ಒಂದು ಬಟ್ಟೆ ಮಳಿಗೆ ಮತ್ತು ಮೂರು ಜನರಲ್ ಶಾಪ್, ಉಡುಪಿ ನಗರ ಠಾಣೆ ವ್ಯಾಪ್ತಿಯ ಗುಂಡಿಬೈಲ್‌ನಲ್ಲಿ ಎರಡು ಅಂಗಡಿಗಳ ಬೀಗ ಮುರಿದು ಕಳ್ಳತನ ಮಾಡಿರುವ ಬಗ್ಗೆ ವರದಿಯಾಗಿದೆ.
ಉಡುಪಿ ಮತ್ತು ಮಣಿಪಾಲ ಠಾಣೆಯ ಪೊಲೀಸರು ಕಳ್ಳತನ ನಡೆದ ಅಂಗಡಿಗಳಿಗೆ ಬೆಳಿಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೀಗ ಮುರಿದು ಒಳ ನುಗ್ಗಿದ ಕಳ್ಳರು ಅಂಗಡಿಗಳಲ್ಲಿದ್ದ ಸಾವಿರಾರು ರೂಪಾಯಿ ನಗದು ದೋಚಿ ಪರಾರಿಯಾಗಿದ್ದಾರೆ. ಮಣಿಪಾಲ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.