ಉಡುಪಿ | ಅಪಾಯಕಾರಿ ಸ್ಥಿತಿಯಲ್ಲಿ ಕೆಮ್ಮಣ್ಣು ತೂಗು ಸೇತುವೆ!

► ಗುಜರಾತ್ ದುರಂತದಿಂದ ಸ್ಥಳೀಯರಲ್ಲಿ ಆತಂಕ ► 7 ವರ್ಷಗಳಿಂದ ನಿರ್ವಹಣೆ ಇಲ್ಲದ ಬ್ರಿಡ್ಜ್

Update: 2022-11-01 08:33 GMT

ಉಡುಪಿ, ಅ.31: ಗುಜರಾತ್‌ನಲ್ಲಿ ತೂಗು ಸೇತುವೆ ಕುಸಿದು ನೂರಾರು ಮಂದಿ ಮೃತಪಟ್ಟ ಘಟನೆಯು ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದು, ಇದೇ ರೀತಿ ಸರಿಯಾದ ನಿರ್ವಹಣೆ ಇಲ್ಲದೆ ಅಪಾಯಕಾರಿ ಸ್ಥಿತಿಯಲ್ಲಿರುವ ಉಡುಪಿ ತಾಲೂಕಿನ ಕೆಮ್ಮಣ್ಣು ತೂಗು ಸೇತುವೆ ಬಗ್ಗೆಯೂ ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿದೆ. ವಾರಾಂತ್ಯದಲ್ಲಿ ಪ್ರವಾಸಿಗರಿಂದ ಜಿನುಗುವ ಈ ಸೇತುವೆಯಿಂದ ಅನಾಹುತ ಸಂಭವಿಸುವ ಮೊದಲೇ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕೆಂಬ ಒತ್ತಾಯಗಳು ಕೇಳಿಬರುತ್ತಿವೆ.

ದೋಣಿಯನ್ನೇ ಅವಲಂಬಿಸಿಕೊAಡಿದ್ದ ತಿಮ್ಮಣ್ಣ ಕುದ್ರುವಿನಲ್ಲಿದ್ದ 28-30 ಮನೆಗಳಿಗೆ ಸಂಪರ್ಕ ಸಾಧಿಸಲು 1988-89ರಲ್ಲಿ ತೋನ್ಸೆ ಮಂಡಲ ಪಂಚಾಯತ್, ವಿವಿಧ ಅನುದಾನಗಳಲ್ಲಿ ಈ ತೂಗು ಸೇತುವೆಯನ್ನು ನಿರ್ಮಿಸಿತ್ತು. ಬಳಿಕ ಈ ಸೇತುವೆಯ ನಿರ್ವಹಣೆಗಾಗಿ ತೂಗು ಸೇತುವೆ ನಿರ್ವಹಣಾ ಸಮಿತಿಯನ್ನು ಸ್ಥಳೀಯರು ರಚಿಸಿದ್ದು, ಈ ಸಮಿತಿ ತೂಗು ಸೇತುವೆಯ ನಿರ್ವಹಣೆ ವಹಿಸಿಕೊಂಡಿತ್ತು.

ಬಳಿಕ 2015-16ನೇ ಸಾಲಿನಲ್ಲಿ ರಾಜ್ಯಸಭೆ ಸದಸ್ಯರಾಗಿದ್ದ ಆಸ್ಕರ್ ಫೆರ್ನಾಂಡಿಸ್‌ರ 10 ಲಕ್ಷ ರೂ. ಅನುದಾನದಲ್ಲಿ ಜಿಲ್ಲಾ ನಿರ್ಮಿತಿ ಕೇಂದ್ರದ ಮೂಲಕ ಈ ಸೇತುವೆಯನ್ನು ದುರಸ್ತಿ ಪಡಿಸ ಲಾಗಿತ್ತು. ನಂತರ ಈ ಸೇತುವೆಗೆ ಯಾವುದೇ ಅನುದಾನಗಳು ಬಾರದೆ ನಿರ್ವಹಣೆ ಸರಿಯಾಗಿ ನಡೆದಿರಲಿಲ್ಲ.  ಪರಿಣಾಮವಾಗಿ ತೂಗುಸೇತುವೆ ಹಾಳಾಗಿ ಅಪಾಯದ ಸ್ಥಿತಿಯಲ್ಲಿದೆ ಎಂಬುದು ಸ್ಥಳೀಯರ ಆತಂಕವಾಗಿದೆ.

ಗ್ರಾಪಂನಿಂದ ಪತ್ರ

ಸಂಪೂರ್ಣ ಹಾಳಾಗಿರುವ ಈ ತೂಗುಸೇತುವೆಯ ನಿರ್ವಹಣೆ ಮಾಡುವಂತೆ ಉಡುಪಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಹಾಗೂ ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ತೋನ್ಸೆ ಗ್ರಾಪಂ ಕೆಮ್ಮಣ್ಣು ವತಿಯಿಂದ ಪತ್ರ ಬರೆಯಲಾಗಿತ್ತು. 2022ರ ಮಾ.9ರಂದು ಜಿಲ್ಲಾಧಿಕಾರಿ ಅಧ್ಯಕ್ಷತೆಯ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ದಿ ಸಮಿತಿಗೆ ಪತ್ರ ಬರೆದ ಗ್ರಾಪಂ, ಎರಡು ವರ್ಷಗಳ ಹಿಂದೆ ತಿಮ್ಮಣ್ಣ ಕುದ್ರುವಿಗೆ ಘನ ವಾಹನ ಸಂಚಾರದ ಹೊಸ ಸೇತುವೆ ನಿರ್ಮಾಣವಾಗಿರುವುದರಿಂದ ಈ ತೂಗು ಸೇತುವೆ ಕೇವಲ ಪ್ರವಾಸಿಗರ ಪ್ರೇಕ್ಷಣೀಯ ಸ್ಥಳವಾಗಿ ಹೆಚ್ಚು ಬಳಕೆಯಾಗುತ್ತಿದೆ ಎಂದು ತಿಳಿಸಿತ್ತು.

ಇದರ ದುರಸ್ತಿಗೆ ಸುಮಾರು 15 ಲಕ್ಷ ರೂ. ವೆಚ್ಚವಾಗಬಹುದೆಂದು ಅಂದಾಜು ಮಾಡಲಾಗಿದೆ. ಪಂಚಾಯತ್ ಅನುದಾನದಲ್ಲಿ ಇದು ಸಾಧ್ಯವಾಗದೆ ಇರುವುದರಿಂದ ಮತ್ತು ಸದ್ಯ ಈ ಸೇತುವೆ ಪ್ರವಾಸಿಗರು ಮಾತ್ರ ಬಳಕೆ ಮಾಡುತ್ತಿರುವುದರಿಂದ ಸಮಿತಿಯೇ ಇದನ್ನು ದುರಸ್ತಿ ಮಾಡಿ, ನಿರ್ವಹಣೆ ಜವಾಬ್ದಾರಿಯನ್ನು ಪಂಚಾಯತ್‌ಗೆ ವಹಿಸಿಕೊಡಬೇಕು ಎಂದು ಗ್ರಾಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡಲಾಗಿತ್ತು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಆದರೆ ಗ್ರಾಪಂನ ಈ ಪತ್ರಕ್ಕೆ ಯಾವುದೇ ಸ್ಪಂದನ ದೊರೆಯದ ಹಿನ್ನೆಲೆಯಲ್ಲಿ ಮಾ.21ರಂದು ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿಗೂ ಪತ್ರ ಬರೆಯಲಾಗಿತ್ತು. ಈ ಪತ್ರದಲ್ಲಿ ಈ ತೂಗು ಸೇತುವೆಯನ್ನು ಖಾಸಗಿಯವರಿಗೆ ವಹಿಸಿಕೊಟ್ಟು, ಶುಲ್ಕ ಸಂಗ್ರಹಿಸಿ ಅವರೇ ನಿರ್ವಹಣೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಲಾಗಿತ್ತಾದರೂ ಯಾವುದೇ ಸ್ಪಂದನ ದೊರೆತಿಲ್ಲ ಎಂದು ಗ್ರಾಪಂ ಅಧಿಕಾರಿಗಳು ತಿಳಿಸಿದ್ದಾರೆ.

ಜೋಲಾಡುತ್ತಿರುವ ರೋಪ್, ತುಕ್ಕುಹಿಡಿದ ಪೈಪ್!

ಕಳೆದ 6-7ವರ್ಷಗಳಿಂದ ನಿರ್ವಹಣೆ ಇಲ್ಲದೆ ಕೆಮ್ಣಣ್ಣು ತೂಗು ಸೇತುವೆ ಮೇಲಿಂದ ಹಿಡಿದು ನಿಲ್ಲಿಸಿದ ಕಬ್ಬಿಣದ ರೋಪು ಜೋಲಾಡುತ್ತಿದೆ. ಅದರ ಬದಿಯ ರಕ್ಷಣಾ ಬೇಲಿಯಂತಿರುವ ಪೈಪುಗಳು ಕೆಲವು ಕಡೆ ತುಕ್ಕು ಹಿಡಿದು ಹಾಳಾಗಿದ್ದು, ನಡೆದು ಹೋಗಲು ಬಳಸಲಾದ ಕಾಂಕ್ರಿಟ್ ಹಲಗೆಗಳು ಹೆಲವು ಕಡೆ ತುಂಡಾಗಿವೆ.

ಅಲ್ಲದೆ ಕೆಲವರು ಇಂದಿಗೂ ಈ ಸೇತುವೆ ಮೂಲಕ ದ್ವಿಚಕ್ರ ವಾಹನಗಳನ್ನು ಚಲಾಯಿಸಿಕೊಂಡು ಹೋಗುತ್ತಿರುವುದರಿಂದ ಈ ಸೇತುವೆಯಲ್ಲಿ ಸಮಸ್ಯೆಗಳು ಕಂಡುಬಂದಿವೆ. ಇದನ್ನು ತಡೆಗಟ್ಟಲು  ವಾಹನಗಳನ್ನು ಸೇತುವೆ ಮೇಲೆ ಕೊಂಡೊಯ್ಯಲು ಸಾಧ್ಯವಾಗದಂತೆ ಮೆಟ್ಟಿಲುಗಳನ್ನು ನಿರ್ಮಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

50-60 ಮಂದಿ ನಿಲ್ಲುತ್ತಾರೆ!

ವಾರಾಂತ್ಯದಲ್ಲಿ ಈ ತೂಗು ಸೇತುವೆ ಪ್ರವಾಸಿ ಗರಿಂದ ತುಂಬಿರುತ್ತದೆ. ಸರಿಯಾಗಿ ದುರಸ್ತಿ ಕಾಣದೆ ತುಕ್ಕು ಹಿಡಿದಿರುವ ಈ ಅಪಾಯಕಾರಿ ತೂಗು ಸೇತುವೆಯಲ್ಲಿ ಎಂಟು ಜನರಿಗಿಂತ ಹೆಚ್ಚು ಜನರು ನಿಲ್ಲಬಾರದು ಎಂದು ಕನ್ನಡ ಮತ್ತು ಇಂಗ್ಲಿ ಷ್‌ನಲ್ಲಿ ಫಲಕವನ್ನು ಅಳವಡಿಸಲಾಗಿದೆ. ಆದರೂ ವಾರಾಂತ್ಯದಲ್ಲಿ ಒಂದೇ ಸಮಯ 50-60 ಮಂದಿ ಈ ಸೇತುವೆಯಲ್ಲಿ ನಿಲ್ಲುತ್ತಾರೆ ಎಂದು ಸ್ಥಳೀಯ ಗ್ರಾಪಂ ಸದಸ್ಯೆ ಆಶಾ ತಿಮ್ಮಣ್ಣ ಕುದ್ರು ಆತಂಕ ವ್ಯಕ್ತಪಡಿಸಿದ್ದಾರೆ.

ಕೆಮ್ಮಣ್ಣು ತೂಗುಸೇತುವೆ ಬಗ್ಗೆ ಪರಿಶೀಲನೆ ನಡೆಸುವಂತೆ ಸಂಬಂಧಪಟ್ಟ ಇಲಾಖೆಯವರಿಗೆ ಸೂಚನೆ ನೀಡಲಾಗಿದೆ. ಅವರಿಂದ ವರದಿ ತರಿಸಿ ಮುಂದೆ ಆಗ ಬೇಕಾದ ಕಾರ್ಯ ಮಾಡಲಾಗುವುದು. ವಾರಾಂತ್ಯದಲ್ಲಿ ಒಂದೇ ಬಾರಿಗೆ 60 ಜನ ಸೇರುವ ಬಗ್ಗೆಯೂ ಪರಿಶೀಲನೆ ನಡೆಸಿ ಸೂಕ್ತ ಕ್ರಮ ತೆಗೆದು ಕೊಳ್ಳಲಾಗುವುದು.

- ಕೂರ್ಮಾರಾವ್, ಉಡುಪಿ ಜಿಲ್ಲಾಧಿಕಾರಿ

ತಿಮ್ಮಣ್ಣ ಕುದ್ರುವಿನವರಿಗೆ ಇದೀಗ ಬೇರೆ ಸೇತುವೆ ಆಗಿದೆ. ಹೆಚ್ಚಿನವರು ಆ ಸೇತುವೆಯನ್ನೇ ಅವಲಂಬಿಸಿಕೊಂಡಿದ್ದಾರೆ. ನಿರ್ವಹಣೆ ಇಲ್ಲದ ತೂಗು ಸೇತುವೆಯ ಕೆಳಗೆ ನೀರು ಸಾಕಷ್ಟು ಆಳವಾಗಿದೆ. 2015ರವರೆಗೆ ತಿಮ್ಮಣ್ಣ ಕುದ್ರುವಿನ ಮಸೀದಿಯ ಹಣದಿಂದ ಈ ಸೇತುವೆಯ ನಿರ್ವಹಣೆ ಮಾಡಲಾಗುತ್ತಿತ್ತು. ಇದೀಗ ಈ ಸೇತುವೆಯ ದುರಸ್ತಿಗಾಗಿ ಪ್ರವಾಸೋದ್ಯಮ ಮತ್ತು ಜಿಪಂಗೆ ಪತ್ರ ಬರೆಯಲಾಗಿದ್ದರೂ ಯಾವುದೇ ಸ್ಪಂದನ ಇಲ್ಲ. ಅನಾಹುತ ಸಂಭವಿ ಸುವ ಮೊದಲು ಜಿಲ್ಲಾಡಳಿತ ಕೂಡಲೇ ಎಚ್ಚೆತ್ತು ಕೊಳ್ಳಬೇಕು.

- ಆಶಾ ತಿಮ್ಮಣ್ಣಕುದ್ರು, ಗ್ರಾಪಂ ಸದಸ್ಯೆ

Similar News