ಹೊಸ ಭಾಷೆ ಕಲಿಯುವುದರಿಂದ ಸಂಬಂಧ ಗಟ್ಟಿ: ಡಾ.ಪಾರ್ವತಿ ಐತಾಳ್
ಉಡುಪಿ : ಪ್ರತಿಯೊಬ್ಬರ ಬದುಕಿನಲ್ಲಿಯೂ ಭಾಷೆಯ ಪಾತ್ರ ಬಹಳ ದೊಡ್ಡದ್ದಾಗಿದೆ. ಹೊಸ ಹೊಸ ಭಾಷೆಗಳನ್ನು ಕಲಿಯುವುದರಿಂದ ನಮ್ಮ ನಡುವಿನ ಸಂಬಂಧಗಳು ಬೆಳೆಯುತ್ತವೆ. ಮತ್ತು ಗಟ್ಟಿಗೊಳ್ಳುತ್ತವೆ ಎಂದು ಸಾಹಿತಿ ಡಾ. ಪಾರ್ವತಿ ಐತಾಳ್ ಹೇಳಿದ್ದಾರೆ.
ಕೇರಳ ಕಲ್ಚರಲ್ ಆ್ಯಂಡ್ ಸೋಶಿಯಲ್ ಸೆಂಟರ್ ಉಡುಪಿ ಹಾಗೂ ಮಲಯಾಳಂ ಮಿಷನ್ ಕರ್ನಾಟಕ ಶಾಖೆ ಇವುಗಳ ಜಂಟಿ ಆಶ್ರಯದಲ್ಲಿ ಮಣಿಪಾಲ ಸೊನೀಯಾ ಕ್ಲಿನಿಕ್‌ನ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸ ಲಾದ ಕೇರಳ ಪಿರವಿ ಮತ್ತು ಕರ್ನಾಟಕ ರಾಜ್ಯೋತ್ಸವ ಸಮಾರಂಭ ದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಭಾಷೆ, ಸಾಹಿತ್ಯದ ಮೂಲಕ ಇನ್ನೊಬ್ಬರ ಜೊತೆ ಸಂಬಂಧ ಬೆಳೆಸಿ ಕಷ್ಟಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ ವಾಗುತ್ತದೆ. ಅಲ್ಲದೆ ಇನ್ನೊಂದು ಭಾಷಿಗರ ಜೀವನ ಕ್ರಮ ಹಾಗೂ ಸಂಸ್ಕೃತಿಯನ್ನು ಅರಿತುಕೊಳ್ಳಬಹುದಾಗಿದೆ. ಅದೇ ರೀತಿ ನಮ್ಮ ಭಾಷೆಯಲ್ಲಿನ ಸಾಹಿತ್ಯವನ್ನು ಬೇರೆ ಭಾಷೆಗಳಿಗೆ ಭಾಷಾಂತರ ಮಾಡುವುದ ರಿಂದ ಜ್ಞಾನ, ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಶ್ರೀಮಂತಗೊಳಿಸಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮವನ್ನು ಕೇರಳ ಕಲ್ಚರಲ್ ಆ್ಯಂಡ್ ಸೋಶಿಯಲ್ ಸೆಂಟರ್ ಅಧ್ಯಕ್ಷ ಸುಗುಣ ಕುಮಾರ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಹಿರಿಯ ವಿಜ್ಞಾನಿ ಡಾ.ಕೆ.ಪಿ.ರಾವ್, ಜಾನಪದ ತಜ್ಞ ಡಾ.ಗಣನಾಥ ಎಕ್ಕಾರು ಮಾತ ನಾಡಿದರು. ಬೆಂಗಳೂರು ಮಲಯಾಳಂ ಮಿಷನ್‌ನ ಅಧ್ಯಕ್ಷ ಕೆ.ದಾಮೋದರ್, ವೈದ್ಯ ಡಾ.ರಾಮಕೃಷ್ಣನ್, ಸೆಂಟರ್‌ನ ಮಂಗಳೂರು ಅಧ್ಯಕ್ಷ ಎಸ್.ಕೆ.ಕುಟ್ಟಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಹಿಳೆಯರು, ಮಕ್ಕಳು ಮಲಯಾಳಂ ಹಾಗೂ ಕನ್ನಡ ಗೀತೆಗಳನ್ನು ಹಾಡಿದರು. ಕೇರಳ ಕಲ್ಚರಲ್ ಆ್ಯಂಡ್ ಸೋಶಿಯಲ್ ಸೆಂಟರ್‌ನ ಸಮಿತಿ ಸದಸ್ಯ ಮೋಹನ್ ಕುಮಾರ್ ಸ್ವಾಗತಿಸಿದರು. ರಾಜಿ ಮೋನ್ ಕಾರ್ಯಕ್ರಮ ನಿರೂಪಿಸಿದರು. ಬಿನೇಶ್ ವಂದಿಸಿದರು.