×
Ad

ಭಾಷೆ-ಬದುಕಿನ ಪ್ರಗತಿಗೆ ಒಗ್ಗಟ್ಟಿನ ಪ್ರಯತ್ನ ಅಗತ್ಯ: ಎಸಿ ರಾಜು ಕೆ.

Update: 2022-11-01 17:59 IST

ಕುಂದಾಪುರ : ನಾಡು ನುಡಿ ಬಗೆಗಿನ ಅಭಿಮಾನದ ಜೊತೆಗೆ ಅಭಿವೃದ್ಧಿಯ ಹೆಜ್ಜೆಗಳ ವೇಗಗೊಳಿಸುವ ಅಗತ್ಯತೆಯೂ ನಮ್ಮ ಮೇಲಿದೆ. ಭಾಷೆ ಹಾಗೂ ಬದುಕಿನ ಪ್ರಗತಿಗೆ ಒಗ್ಗಟ್ಟಿನ ಪ್ರಯತ್ನ ಅಗತ್ಯವಾಗಿದೆಂದು ಕುಂದಾಪುರ ಉಪವಿಭಾಗಾಧಿಕಾರಿ ರಾಜು ಕೆ. ಹೇಳಿದ್ದಾರೆ.

ಕುಂದಾಪುರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಪಂಚಾಯಿತ್, ಪುರಸಭೆ ಆಶ್ರಯದಲ್ಲಿ ಕುಂದಾಪುರ ಗಾಂಧಿ ಮೈದಾನದಲ್ಲಿ ಮಂಗಳವಾರ ನಡೆದ ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡುತಿದ್ದರು.

ಕನ್ನಡ, ಕರ್ನಾಟಕ ಎಂದರೆ ಬರೀ ಭಾಷೆಯಲ್ಲ, ಭಾವನಾತ್ಮಕ ಸಂಬಂಧ. ಮಹಾಸಾಗರದ ಹೆಬ್ಬಾಗಿಲಿನಂತಿರುವ ಕರಾವಳಿ ಪರಂಪರೆ, ವೈವಿಧ್ಯತೆ, ಇತಿಹಾಸ, ಆಚಾರ ವಿಚಾರ, ಸಂಸ್ಕೃತಿ ಸೊಗಡು, ವಿಶಿಷ್ಟತೆಗಳ ಮೂಲಕ ಹೆಸರಾಗಿದೆ. ನಮ್ಮ ನಾಡಿನ ವೈಶಿಷ್ಟ್ಯತೆಗೆ ಮತ್ತಷ್ಟು ಮೆರಗು ನೀಡಿರುವ ಕರಾವಳಿ ಪ್ರದೇಶ ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವುದು ಹೆಮ್ಮೆಯ ವಿಷಯ ಎಂದರು.

ಕುಂದಾಪುರ ಠಾಣಾಧಿಕಾರಿ ಸದಾಶಿವ ಆರ್. ಗವರೋಜಿ ನೇತೃತ್ವದ ವಿವಿಧ ಶಾಲಾ ಮಕ್ಕಳ ಸ್ಕೌಟ್, ಗೈಡ್ಸ್, ಸೇವಾದಳ, ಎನ್‌ಸಿಸಿ, ಗೃಹರಕ್ಷಕ ದಳ, ಅಗ್ನಿಶಾಮಕ ದಳ, ಪೌರಕಾರ್ಮಿಕರ ಪಥ ಸಂಚಲನವು ಸೈಂಟ್ ಜೋಸೆಪ್ ಪ್ರೌಢಶಾಲೆ ಮಕ್ಕಳ ಬ್ಯಾಂಡ್ ವಾದನದೊಂದಿಗೆ ಸಾಗಿಬಂತು.

ವಿಕೆಆರ್ ಆಚಾರ್ಯ ಆಂಗ್ಲ ಮಾಧ್ಯಮ ಶಾಲೆ ಸಂಗೀತ ಶಿಕ್ಷಕ ಪ್ರಕಾಶ್ ಮತ್ತು ವಿದ್ಯಾರ್ಥಿಗಳು, ವೆಂಕಟರಮಣ ಆಂಗ್ಲ್ಲ ಮಾಧ್ಯಮ ಶಾಲೆ ವಿದ್ಯಾರ್ಥಿ ಗಳಿಂದ ಕನ್ನಡ ಗೀತ ಗಾಯನ ನಡೆಯಿತು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ಜರಗಿತು.

ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ವಿಜಯ ಎಸ್.ಪೂಜಾರಿ, ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ದೇವಾಡಿಗ, ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ., ತಾಲೂಕು ಯುವಜನ ಸೇವೆ ಮತ್ತು ಕ್ರೀಡಾಧಿಕಾರಿ ಕುಸುಮಾಕರ ಶೆಟ್ಟಿ, ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಸದಸ್ಯರಾದ ದೇವಕಿ ಸಣ್ಣಯ್ಯ, ಶ್ರೀಧರ ಶೇರೆಗಾರ್, ವತ್ಸಲಾ, ತಾಪಂ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಕುಮಾರ್ ಹೊಳ್ಳ, ಸಿಡಿಪಿಒ ಶ್ವೇತಾ, ಪುರಸಭೆ ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ ಉಪಸ್ಥಿತರಿದ್ದರು.

ಕುಂದಾಪುರ ತಹಸೀಲ್ದಾರ್ ಕಿರಣ್ ಜಿ.ಗೌರಯ್ಯ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಕಾಂತರಾಜು ವಂದಿಸಿದರು.
 

Similar News