ಜನಮನ ಗೆದ್ದ ನಾಗರಾಜ ಪಾಣರ ‘ಕಾಂತಾರ ಹಾಡು’

Update: 2022-11-01 14:32 GMT

ಉಡುಪಿ, ನ.1: ಕನ್ನಡ ರಾಜ್ಯೋತ್ಸವ ಸಂದರ್ಭದಲಿ ಇಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ 34 ಮಂದಿಯಲ್ಲಿ ದೈವಾರಾಧನೆ ಕ್ಷೇತ್ರದಲ್ಲಿ ಇಬ್ಬರು ಹಿರಿಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. 

ಇವರಲ್ಲಿ ಒಬ್ಬರು ಕಾರ್ಕಳ ತಾಲೂಕು ಹಿರ್ಗಾನ ಗ್ರಾಮದ ಲೋಕು ಪೂಜಾರಿ. 91ವರ್ಷ ಪ್ರಾಯದ ಲೋಕು ಪೂಜಾರಿ ಅವರು ಕಳೆದ ಏಳೂವರೆ ದಶಕಗಳಿಂದ ಬ್ರಹ್ಮಬೈದರ್ಕಳ ದರುಶನ ಪಾತ್ರಿಯಾಗಿ ಸೇವೆ ಸಲ್ಲಿಸುತಿದ್ದಾರೆ. ಈಗಲೂ ಅವರು ದೇವರ ಸೇವೆಯನ್ನು ಮುಂದುವರಿಸಿದ್ದಾರೆ.

ಇನ್ನೊಬ್ಬರು ಕುಂದಾಪುರ ತಾಲೂಕು ಅಂಪಾರು ಗ್ರಾಮದ ತಲುಕುಲುಗುಡ್ಡೆ ನಿವಾಸಿ ನಾಗರಾಜ ಪಾಣ. 60 ವರ್ಷ ಪ್ರಾಯದ ನಾಗರಾಜ ಪಾಣ ಭೂತಾರಾಧನೆ, ನಾಗಾರಾಧನೆ ಕುಲಕಸಬಾಗಿ ಆಚರಿಸಿಕೊಂಡು ಬರುತಿದ್ದಾರೆ. ದೈವಾರಾಧನೆ ಕ್ಷೇತ್ರದಲ್ಲೂ ಇವರು ವಿಶಿಷ್ಟ ಸಾಧನೆ ಮಾಡಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾಗಿ ದೇಶಾದ್ಯಂತ ಭಾರಿ ಯಶಸ್ಸು ಕಾಣುತ್ತಿರುವ  ಭೂತಾರಾಧನೆ ಆಧಾರಿತ ಕನ್ನಡ ಚಲನಚಿತ್ರ ‘ಕಾಂತಾರಾ’ದಲ್ಲೂ ನಾಗರಾಜ ಪಾಣ ನಟಿಸಿದ್ದು, ದೈವಾರಾಧನೆಯ ಸಂಬಂಧಿಸಿದ ಎಂಟು ಗೀತೆಗಳನ್ನು ಹಾಡಿದ್ದಾರೆ. ಇವುಗಳಲ್ಲಿ ಮೂರು-ನಾಲ್ಕನ್ನು ಮಾತ್ರ ಚಿತ್ರದಲ್ಲಿ ಬಳಸಲಾಗಿದೆ ಎಂದವರು ತಿಳಿಸಿದರು.

ಮಂಗಳವಾರ ಉಡುಪಿ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವದ ಪ್ರಶಸ್ತಿ ನೀಡಿ ಗೌರವಿಸಿದ ಸಂದರ್ಭದಲ್ಲಿ ನಾಗರಾಜ ಪಾಣ ಅವರು ಕೆಲವನ್ನು  ಹಾಡಿ ಕಾರ್ಯಕ್ರಮಕ್ಕೆ ಮೆರುಗನ್ನು ತಂದರು. ಕಾಂತಾರ ಚಿತ್ರದಲ್ಲಿ  ಹಾಡಿದ ದೈವಾರಾಧನೆಯ ಹೊಗಳಿಕೆ ಹಾಡು, ಕಾಡ್ತಿಯಮ್ಮ ದೈವದ ಹಾಡುಗಳನ್ನು ಹಾಡಿದರು. ಪಾಣ ಅವರು ಹಾಡಿದ ಲೇಲೇ.. ಲೇಲೇ... ಲೇಸು ನೆರೆದವರನ್ನು ಮಂತ್ರಮುಗ್ದಗೊಳಿಸಿತು.

Similar News