ಅಕ್ಟೋಬರ್ ನಲ್ಲಿ 1.51 ಲ.ಕೋ.ರೂ.ದಾಟಿದ ಜಿಎಸ್ಟಿ ಸಂಗ್ರಹ: ಇದು ಈವರೆಗಿನ ಎರಡನೇ ಅತ್ಯಂತ ಹೆಚ್ಚಿನ ಮೊತ್ತ

Update: 2022-11-01 17:05 GMT

ಹೊಸದಿಲ್ಲಿ,ನ.1: ಅಕ್ಟೋಬರ್ ತಿಂಗಳಲ್ಲಿ 1,51,718 ಕೋ.ರೂ.ಜಿಎಸ್‌ಟಿ ಸಂಗ್ರಹವಾಗಿದ್ದು,2017 ಜುಲೈನಲ್ಲಿ ನೂತನ ತೆರಿಗೆ ಪದ್ಧತಿ ಜಾರಿಗೊಂಡ ಬಳಿಕ ಇದು ಎರಡನೇ ಅತ್ಯಂತ ಹೆಚ್ಚಿನ ಮೊತ್ತವಾಗಿದೆ ಎಂದು ಕೇಂದ್ರ ವಿತ್ತ ಸಚಿವಾಲಯವು ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದೆ.

1,67,540 ಕೋ.ರೂ.ಗಳ ಅತ್ಯಂತ ಹೆಚ್ಚಿನ ಮಾಸಿಕ ಜಿಎಸ್‌ಟಿ ಸಂಗ್ರಹ ಎಪ್ರಿಲ್‌ನಲ್ಲಿ ದಾಖಲಾಗಿತ್ತು. ಮಾಸಿಕ ಜಿಎಸ್‌ಟಿ ಸಂಗ್ರಹ ಕಳೆದ ಎಂಟು ತಿಂಗಳುಗಳಿಂದ ಸತತವಾಗಿ 1.4 ಲ.ಕೋ.ರೂ.ಗಿಂತ ಮೇಲೆಯೇ ಇದೆ.

ಅಕ್ಟೋಬರ್ ತಿಂಗಳಿನ ಒಟ್ಟು ಆದಾಯ ಸಂಗ್ರಹದಲ್ಲಿ 26,039 ಕೋ.ರೂ. ಕೇಂದ್ರ ಜಿಎಸ್‌ಟಿಯಾಗಿದ್ದರೆ,33,396 ಕೋ.ರೂ.ರಾಜ್ಯ ಜಿಎಸ್‌ಟಿಯಾಗಿದೆ. ಏಕೀಕೃತ ಜಿಎಸ್‌ಟಿಯಿಂದ ಆದಾಯ 81,778 ಕೋ.ರೂ.ಗಳಾಗಿದ್ದರೆ ಸಂಗ್ರಹವಾದ ಜಿಎಸ್‌ಟಿ ಸೆಸ್ 10,505 ಕೋ.ರೂ.ಆಗಿದೆ.

ಗಮನಾರ್ಹ ಸಂಗ್ರಹದ ಹೊರತಾಗಿಯೂ ಹಲವಾರು ರಾಜ್ಯಗಳು ಅಕ್ಟೋಬರ್‌ನಲ್ಲಿ ನಕಾರಾತ್ಮಕ ಜಿಎಸ್‌ಟಿ ಬೆಳವಣಿಗೆಯನ್ನು ದಾಖಲಿಸಿವೆ. ಲಡಾಖ್ ಶೇ.74ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದರೆ ಇದಕ್ಕೆ ತೀರ ವ್ಯತಿರಿಕ್ತವಾಗಿ ಜಮ್ಮು-ಕಾಶ್ಮೀರವು ಆದಾಯದಲ್ಲಿ ಶೇ.34ರಷ್ಟು ತೀವ್ರ ಕುಸಿತವನ್ನು ದಾಖಲಿಸಿದೆ.

ಛತ್ತೀಸ್‌ಗಡ (ಶೇ.-3),ಅಸ್ಸಾಂ (ಶೇ.-13),ಮಿರೆರಂ ಮತ್ತು ಮಣಿಪುರ (ತಲಾ ಶೇ.-23) ಮತ್ತು ಬಿಹಾರ (ಶೇ.-1) ನಕಾರಾತ್ಮಕ ಬೆಳವಣಿಗೆಯನ್ನು ದಾಖಲಿಸಿರುವ ಇತರ ರಾಜ್ಯಗಳಾಗಿವೆ.

Similar News