ಮೊರ್ಬಿ ತೂಗು ಸೇತುವೆ ದುರಂತ: ತಲೆಮರೆಸಿಕೊಂಡ ಒರೆವಾ ಕಂಪೆನಿಯ ಮಾಲಕರು, ಅಧಿಕಾರಿಗಳು

Update: 2022-11-01 17:49 GMT

ಮೊರ್ಬಿ (ಗುಜರಾತ್), ನ.1: ಮೊರ್ಬಿ ತೂಗುಸೇತುವೆ ದುರಂತದ ಹಿಂದಿನ ಕಾರಣಗಳನ್ನು ಮರೆಮಾಚಲಾಗುತ್ತಿದೆಯೆಂಬ ಗಂಭೀರ ಆರೋಪಗಳನ್ನು ಗುಜರಾತ್‌ನ ಬಿಜೆಪಿ ಸರಕಾರವು ಎದುರಿಸುತ್ತಿದೆ.  ಬ್ರಿಟಿಶ್ ವಸಾಹತುಶಾಹಿ ಕಾಲದ ಈ ತೂಗುಸೇತುವೆಯ ನವೀಕರಣದ ಗುತ್ತಿಗೆ ವಹಿಸಿಕೊಂಡಿದ್ದ ಒರೆವಾ ಕಂಪೆನಿಯ ಮಾಲಕರು ಹಾಗೂ ಪ್ರಮುಖ ಕಾರ್ಯನಿರ್ವಾಹಕರು ದುರಂತದ ಬಳಿಕ ತಲೆಮರೆಸಿಕೊಂಡಿದ್ದಾರೆ ಹಾಗೂ ಕಂಪೆನಿಗೆ ಸೇರಿದ ವಿಶಾಲವಾದ ಫಾರ್ಮ್ ಹೌಸ್ ಕೂಡಾ ನಿರ್ಜನವಾಗಿದೆಯೆಂದು ತಿಳಿದುಬಂದಿದೆ.

ನವೀಕರಣಗೊಂಡಿರುವ ಸೇತುವೆಯು ಕನಿಷ್ಠ 8ರಿಂದ 10 ವರ್ಷಗಳವರೆಗೆ ಬಾಳಿಕೆ ಬರಬಹುದು ಎಂದು ಸಾರ್ವಜನಿಕವಾಗಿ ಪ್ರಕಟಿಸಿದ್ದ ಒರೆವಾದ ಆಡಳಿತ ನಿರ್ದೇಶಕ ಜಯಸುಖಭಾಯ್ ಪಟೇಲ್, ದುರಂತ ಸಂಭವಿಸಿದಾಗಿನಿಂದ  ತಲೆಮರೆಸಿಕೊಂಡಿರುವುದಾಗಿ ತಿಳಿದುಬಂದಿದೆ.

► ಒರೆವಾ ಕಂಪೆನಿಯ ಆಡಳಿತವರ್ಗವನ್ನು ರಕ್ಷಿಸಲು ಕಾನೂನು ಕುಣಿಕೆಯಿಂದ ರಕ್ಷಿಸಲು ಬಿಜೆಪಿ ಯತ್ನ 

ಮೊರ್ಬಿ ದುರಂತಕ್ಕೆ ಸಂಬಂಧಿಸಿ ಪೊಲೀಸರು ಒರೆವಾ ಸಂಸ್ಥೆಯ ಮಧ್ಯಮ ದರ್ಜೆಯ ಅಧಿಕಾರಿಗಳು, ಟಿಕೆಟ್ ಮಾರಾಟಗಾರರು ಹಾಗೂ ಭದ್ರತಾ ಸಿಬ್ಬಂದಿಯನ್ನು  ಬಂಧಿಸಿದ್ದಾರೆ. ಆದರೆ ಒರೆವಾ ಕಂಪೆನಿಯ ಉನ್ನತ ಆಡಳಿತ ವರ್ಗಕ್ಕೆ ಸರಕಾರವು ರಕ್ಷಿಸಲು ಯತ್ನಿಸುತ್ತಿದ್ದು, ಸಣ್ಣ ಪುಟ್ಟ ಉದ್ಯೋಗಿಗಳನ್ನು ದುರಂತಕ್ಕೆ ಹೊಣೆಗಾರರನ್ನಾಗಿ ಮಾಡಲು ಯತ್ನಿಸುತ್ತಿದೆಯೆಂದು ಪ್ರತಿಪಕ್ಷಗಳು ಆರೋಪಿಸಿವೆ. ಈ ದುರಂತಕ್ಕೆ ಒರೆವಾ ಕಂಪೆನಿಯ ಆಡಳಿತ ವರ್ಗವನ್ನು ಹೊಣೆಗಾರರನ್ನಾಗಿ ಮಾಡಬೇಕೆಂದು ಅವು ಆಗ್ರಹಿಸಿವೆ.

ತೂಗುಸೇತುವೆಯ ನವೀಕರಣಕ್ಕೆ ಸಂಬಂಧಿಸಿ ಜಯಸುಖಭಾಯ್ ಪಟೇಲ್ ಅವರು ಮೊರ್ಬಿ ಮುನ್ಸಿಪಲ್ ಕಾರ್ಪೊರೇಷನ್ ಹಾಗೂ ಒರೆವಾದ ಪೋಷಕ ಸಂಸ್ಥೆಯಾದ ಅಜಂತಾ ಮ್ಯಾನುಫ್ಯಾಕ್ಚರಿಂಗ್ ಲಿಮಿಟೆಡ್ ಸಂಸ್ಥೆಯ ಜೊತೆ ಸಹಿಹಾಕಿದ್ದರು.  ಅಜಂತಾ ಮ್ಯಾನುಫ್ಯಾಕ್ಚರಿಂಗ್ ಸಂಸ್ಥೆಯು  ಗಡಿಯಾರ ತಯಾರಿಕೆಯಲ್ಲಿ ಜನಪ್ರಿಯತೆಯನ್ನು ಪಡೆದಿದೆ.

ರವಿವಾರ ಮೊರ್ಬಿ ಜಿಲ್ಲೆಯ ಮಚ್ಚು ನದಿಯ ಮೇಲಿನ ತೂಗುಸೇತುವೆ ಕುಸಿದು, 47 ಮಕ್ಕಳು ಸೇರಿದಂತೆ 135 ಮಂದಿ ಮೃತಪಟ್ಟಿದ್ದರು.
ಇಂದು ಗುಜರಾತ್‌ನಾದ್ಯಂತ ಶೋಕಾಚರಣೆ ಮೊರ್ಬಿ ತೂಗುಸೇತುವೆ ದುರಂತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿ ಗುಜರಾತ್‌ನಾದ್ಯಂತ ಬುಧವಾರ ಶೋಕಾಚರಣೆಗೆ ಕರೆ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಗಾಂಧಿನಗರದ ರಾಜಭವನದಲ್ಲಿ ನಡೆದ ಉನ್ನತಮಟ್ಟದ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಯಿತು.

Similar News