×
Ad

ದಿಲ್ಲಿಯ ವಾಯುಮಾಲಿನ್ಯಕ್ಕೆ ಪಂಜಾಬನ್ನು ದೂಷಿಸಬಾರದು: ಕುಲದೀಪ್ ಧಲಿವಾಲ್

Update: 2022-11-01 23:48 IST

ಚಂಡೀಗಢ, ನ.1:  ರಾಜಧಾನಿ ದಿಲ್ಲಿಯ ವಾಯುವಿನ ಗುಣಮಟ್ಟವು 551 ಸೂಚ್ಯಂಕವನ್ನು ದಾಖಲಿಸಿದ್ದು, ಅಪಾಯಕಾರಿ ಹಂತಕ್ಕೆ ತಲುಪಿದೆ. ರಾಜಧಾನಿ ದಿಲ್ಲಿಯ ವಾಯುಮಾಲಿನ್ಯಕ್ಕೆ ಪಂಜಾಬ್ ರಾಜ್ಯವನ್ನು ದೂಷಿಸಬಾರದೆಂದು ಪಂಜಾಬ್‌ನ ಕೃಷಿ ಸಚಿವ ಕುಲದೀಪ್ ಧಲಿವಾಲ್ ಹೇಳಿದ್ದಾರೆ.

‘‘ದಿಲ್ಲಿಯ ಮಾಲಿನ್ಯಕ್ಕೆ ಪಂಜಾಬ್‌ನಲ್ಲಿ ಭತ್ತದ ಪೈರಿನ ಕೂಳೆಯನ್ನು ಸುಡುವುದು ಕಾರಣವಲ್ಲ. ಹರ್ಯಾಣದ ರೋಹ್ಟಕ್, ಪಾಣಿಪತ್ ಹಾಗೂ ಸೋನೆಪತ್ ಜಿಲ್ಲೆಗಳು ದಿಲ್ಲಿ ಮಾಲಿನ್ಯಕ್ಕೆ ಕೊಡುಗೆಯನ್ನು ನೀಡುತ್ತಿವೆ. ಪಂಜಾಬ್‌ನ ವಾಯುಮಾಲಿನ್ಯವು ದಿಲ್ಲಿಯನ್ನು ತಲುಪಲು ಹೇಗೆ ಸಾಧ್ಯ?, ಹರ್ಯಾಣದ ಪಾಣಿಪತ್‌ನ ಹೊಗೆಯು ದಿಲ್ಲಿಯನ್ನು ತಲುಪುದಿಲ್ಲವಾದರೆ ಅಮೃತಸರದಲ್ಲಿನ ಹೊಗೆಯು  ರಾಜಧಾನಿಯನ್ನು ತಲುಪುವುದು ಹೇಗೆ ಸಾಧ್ಯ’’ ಎಂದು ಅವರು ಪ್ರಶ್ನಿಸಿದ್ದಾರೆ.

ನ್ಯೂಸ್‌18 ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ದಿಲ್ಲಿ-ರಾಷ್ಟ್ರ ರಾಜಧಾನಿ ಪ್ರದೇಶದ ವಾಯುಗುಣಮಟ್ಟ ಕುಸಿತಕ್ಕೆ ರ್ಯಾಣ ಹೊಣೆಗಾರನಾಗಿದೆ. ಹರ್ಯಾಣದಲ್ಲಿ ಪೈರಿನ ಕೂಳೆಯ ಸುಡುವಿಕೆಯ ಕುರಿತಾದ ಅಂಕಿಅಂಶಗಳನ್ನು  ಬಿಜೆಪಿಯು ಬಚ್ಚಿಡುತ್ತಿದೆಯೆಂದು ಅವರು ಆಪಾದಿಸಿದರು.
ಪೈರಿನ ಕೂಳೆಯ ಸುಡುವಿಕೆಯ ಸಮಸ್ಯೆಗೆ ಪರಿಹಾರವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘‘ ಭತ್ತದ ಕೃಷಿಯ ಬಗ್ಗೆ ಹೇಳುವುದಾದರೆ ಪಂಜಾಬ್‌ನಲ್ಲಿ  ಅಕ್ಕಿಯ ಸೇವನೆ ತೀರಾ ಕಡಿಮೆ. ಮದುವೆ ಮತ್ತಿತರ ಕಾರ್ಯಕ್ರಮಗಳಿಗಷ್ಟೇ ಅದು ಬಳಕೆಯಾಗುತ್ತಿದೆ. 

ಪಂಜಾಬಿಗಳು ಅದನ್ನು ದೇಶದ ಉಳಿದ ಭಾಗದ ಜನರಿಗಾಗಿ ಬೆಳೆಯುತ್ತಾರೆ. ಭತ್ತದ ಕೃಷಿಯಿಂದಾಗಿ ಪಂಜಾಬ್‌ನಲ್ಲಿ ನೀರಿನ ಮಟ್ಟವು ಕಡಿಮೆಯಾಗಿದೆ.  ಭತ್ತದ ಕೃಷಿಯನ್ನು ಕಡಿಮೆಗೊಳಿಸುವುದು ಹಾಗೂ ಕಬ್ಬಿನಂತಹ ಇತರ ಬೆಳೆಗಳನ್ನು ಬೆಳೆಯುವಂತೆ ರೈತರನ್ನು ಉತ್ತೇಜಿಸುವುದು ಇದಕ್ಕಿರುವ ಅತ್ಯುತ್ತಮ ಪರಿಹಾರವಾಗಿದೆ’’ ಎಂದು ಧಲಿವಾಲ್ ತಿಳಿಸಿದರು.

ಕೂಳೆಗಳ ನಿರ್ವಹಣೆಗಾಗಿ ಕೇಂದ್ರ ಸರಕಾರವು ಒದಗಿಸಿರುವ ಯಂತ್ರಗಳು  ಬಳಕೆಯಾಗದೆ ಯಾಕೆ ಉಳಿದಿವೆ  ಎಂಬ ಪ್ರಶ್ನೆಗೆ ಉತ್ತರಿಸಿದ ಧಲಿವಾಲ್, ‘‘ಈವರೆಗೆ ನಾವು ನೋಂದಣಿಯನ್ನು  ಆರಂಭಿಸಿದ್ದೇವೆ. ಆದರೆ ಯಂತ್ರಗಳಿಗೆ ಅಧಿಕ ಬೇಡಿಕೆಯಿದೆಯಾದರೂ, ಪೂರೈಕೆ ಕಡಿಮೆಯಿದೆ.  ರಾಜ್ಯಕ್ಕೆ 1.20 ಲಕ್ಷ ಯಂತ್ರಗಳಿದ್ದು, ಪ್ರಸಕ್ತ 1.20 ಲಕ್ಷ ಯಂತ್ರಗಳಷ್ಟೇ ಇವೆ ಎಂದರು.

Similar News