ಉಕ್ರೇನ್‌ನಲ್ಲಿ ‘ಡರ್ಟಿ ಬಾಂಬ್’ ತಯಾರಿ ಆರೋಪ: ವಿಶ್ವಸಂಸ್ಥೆ ಪರಮಾಣು ಏಜೆನ್ಸಿ ತನಿಖೆ ಆರಂಭ

Update: 2022-11-01 18:49 GMT

ಕೀವ್, ನ.1: ಉಕ್ರೇನ್ ‘ಡರ್ಟಿ ಬಾಂಬ್’ ಉತ್ಪಾದಿಸುತ್ತಿದೆ ಎಂದು ರಶ್ಯ ಆರೋಪಿಸಿದ ಹಿನ್ನೆಲೆಯಲ್ಲಿ, ಈ ಬಗ್ಗೆ ತನಿಖೆ ನಡೆಸಲು ವಿಶ್ವಸಂಸ್ಥೆ ಪರಮಾಣು ಏಜೆನ್ಸಿಯ ತಜ್ಞರು ಉಕ್ರೇನ್‌ನ 2 ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುವುದಾಗಿ ವರದಿಯಾಗಿದೆ.

ಉಕ್ರೇನ್‌ನ 2 ಸ್ಥಳಗಳಲ್ಲಿ ಪರಿಶೀಲನೆ ಆರಂಭವಾಗಿದ್ದು ಶೀಘ್ರವೇ ಅಂತ್ಯಗೊಳ್ಳಲಿದೆ. ರಶ್ಯದ ಆರೋಪದ ಹಿನ್ನೆಲೆಯಲ್ಲಿ ಈ ತನಿಖೆಗೆ ಉಕ್ರೇನ್ ಮನವಿ ಮಾಡಿದೆ ಎಂದು ಇಂಟರ್‌ನ್ಯಾಷನಲ್ ಅಟೊಮಿಕ್ ಎನರ್ಜಿ ಏಜೆನ್ಸಿ( ಅಂತರಾಷ್ಟ್ರೀಯ ಪರಮಾಣು ಶಕ್ತಿ ಏಜೆನ್ಸಿ- ಐಎಇಎ)ಯ ಮುಖ್ಯಸ್ಥ ರಫೇಲ್ ಗ್ರಾಸಿ ಹೇಳಿದ್ದಾರೆ.

ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸಹಿತ ಉನ್ನತ ಅಧಿಕಾರಿಗಳು ಉಕ್ರೇನ್ ಡರ್ಟಿ ಬಾಂಬ್ ಎಂದು ಕರೆಯಲ್ಪಡುವ ವಿಕಿರಣಶೀಲ ವಸ್ತುಗಳನ್ನು ಹೊಂದಿರುವ ಸ್ಫೋಟಕಗಳನ್ನು ಬಳಸಲು ತಯಾರಿ ನಡೆಸುತ್ತಿದೆ ಎಂದು ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ. ಇಂತಹ ಬಾಂಬ್‌ಗಳನ್ನು ನಿರ್ಮಿಸುವಂತೆ ಉಕ್ರೇನ್‌ನ ಪರಮಾಣು ಸಂಶೋಧನೆ ಮತ್ತು ಗಣಿಗಾರಿಕೆ ಸಂಸ್ಥೆಗೆ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿಯಿಂದ ನೇರ ಆದೇಶ ರವಾನೆಯಾಗಿದೆ ಎಂದು ಆರೋಪಿಸಿ ವಿಶ್ವಸಂಸ್ಥೆಯಲ್ಲಿನ ರಶ್ಯದ ರಾಯಭಾರಿ ವ್ಯಾಸಿಲಿ ನೆಬೆಂಝಿಯಾ ಕಳೆದ ವಾರ ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಪತ್ರ ಬರೆದಿದ್ದರು. ಇದೊಂದು ಆಧಾರ ರಹಿತ ಆರೋಪ ಮತ್ತು ಸ್ಪಷ್ಟ ಸುಳ್ಳು ಪ್ರತಿಪಾದನೆ ಎಂದು ಪಾಶ್ಚಿಮಾತ್ಯ ದೇಶಗಳು ಪ್ರತಿಕ್ರಿಯಿಸಿದ್ದವು.

 ಉಕ್ರೇನ್ ವಿರುದ್ಧ ಹಗೆಸಾಧಿಸಲು ಡರ್ಟಿ ಬಾಂಬ್ ಸ್ಫೋಟಿಸುವ ರಶ್ಯದ ಯೋಜನೆಯಿಂದ ಜಾಗತಿಕ ಸಮುದಾಯದ ಗಮನವನ್ನು ಬೇರೆಡೆಗೆ ಸೆಳೆಯಲು ಮಾಡಿರುವ ತಂತ್ರ ಇದಾಗಿದೆ ಎಂದು ಉಕ್ರೇನ್ ಹೇಳಿದ್ದು ರಶ್ಯದ ಆರೋಪವನ್ನು ತಿರಸ್ಕರಿಸಿದೆ. ರಶ್ಯ ಆರೋಪಿಸಿರುವ ಎರಡೂ ಪ್ರದೇಶಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಈ ಎರಡೂ ಸ್ಥಳಗಳು ಐಎಇಎ ಸುರಕ್ಷತೆಯ ಮಾನದಂಡಕ್ಕೆ ಅನುಗುಣವಾಗಿ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿ ಅಘೋಷಿತ ಪರಮಾಣು ಚಟುವಟಿಕೆ ನಡೆಯುತ್ತಿದೆಯೇ ಅಥವಾ ರಶ್ಯ ಆರೋಪಿಸಿದಂತೆ ಡರ್ಟಿ ಬಾಂಬ್ ತಯಾರಿಸಲಾಗುತ್ತಿದೆಯೇ ಎಂಬ ಮೇಲೆ ತನಿಖೆ ಕೇಂದ್ರೀಕೃತವಾಗಿದೆ. ಇವೆರಡರಲ್ಲಿ ಒಂದು ಪ್ರದೇಶಕ್ಕೆ ಒಂದು ತಿಂಗಳ ಹಿಂದೆ ಭೇಟಿ ನೀಡಿ ಪರಿಶೀಲಿಸಿದ್ದು ಅಘೋಷಿತ ಪರಮಾಣು ಚಟುವಟಿಕೆ ಅಥವಾ ವಸ್ತುಗಳು ಕಂಡು ಬಂದಿಲ್ಲ ಎಂದು ಐಎಇಎ ಸೋಮವಾರ ಹೇಳಿಕೆ ನೀಡಿದೆ.

ಡರ್ಟಿ ಬಾಂಬ್ ಡರ್ಟಿ ಬಾಂಬ್ ಎಂಬುದು ಡೈನಮೈಟ್‌ನಂತಹ ಸ್ಫೋಟಕ ಹಾಗೂ ವಿಕಿರಿಣಶೀಲ ಪುಡಿ ಅಥವಾ ಉಂಡೆಯ ಮಿಶ್ರಣವಾಗಿದ್ದು , ಇದಕ್ಕೆ ಡೈನಮೈಟ್ ಅಥವಾ ಇತರ ಸ್ಫೋಟಕಗಳನ್ನು ಹೊಂದಿಸಿದಾಗ ಆಗುವ ಸ್ಫೋಟವು ವಿಕಿರಣಶೀಲ ವಸ್ತುಗಳನ್ನು ಸುತ್ತಮುತ್ತಲಿನ ಪ್ರದೇಶಕ್ಕೆ ಪಸರಿಸುತ್ತದೆ.ರಶ್ಯದ ಎದುರಿನ ಯುದ್ಧದಲ್ಲಿ ಬಳಸಲು ಇಂತಹ ಬಾಂಬ್‌ಗಳನ್ನು ಉಕ್ರೇನ್ ಉತ್ಪಾದಿಸುತ್ತಿದೆ ಎಂಬುದು ರಶ್ಯದ ಆರೋಪವಾಗಿದೆ.

Similar News