ಸೇತುವೆ ದುರಂತ 'ದೇವರ ಇಚ್ಛೆ' ಎಂದು ನ್ಯಾಯಾಲಯಕ್ಕೆ ಹೇಳಿದ ಒರೆವಾ ಕಂಪೆನಿಯ ಮ್ಯಾನೇಜರ್

Update: 2022-11-02 11:26 GMT

 ಮೊರ್ಬಿ:  ಗುಜರಾತ್‍ನ ಮೊರ್ಬಿ ಸೇತುವೆ(Morbi Bridge) ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳಲ್ಲೊಬ್ಬರಾಗಿರುವ ಸೇತುವೆ ನವೀಕರಿಸಿದ ಕಂಪೆನಿಯಾದ ಒರೇವಾ(Oreva Company) ಇದರ ಮ್ಯಾನೇಜರ್ ದೀಪಕ್ ಪಾರೇಖ್(Dileep Parekh) ನ್ಯಾಯಾಲಯದಲ್ಲಿ 135 ಮಂದಿಯನ್ನು ಬಲಿ ಪಡೆದ ಈ ದುರಂತ "ದೇವರ ಇಚ್ಛೆ" ಎಂದು ಹೇಳಿದ್ದಾರೆ. ದುರಂತಕ್ಕೆ ಪೊಲೀಸರು ಪಾರೇಖ್ ಸೇರಿದಂತೆ ಒಂಬತ್ತು ಮಂದಿಯನ್ನು ಬಂಧಿಸಿದ್ದಾರೆ.

 "ಇಂತಹ ಒಂದು ದುರಾದೃಷ್ಟಕರ ಘಟನೆ ನಡೆದಿರುವುದು ಭಗವಾನ್ ಕಿ ಇಚ್ಛಾ (ದೇವರ ಇಚ್ಛೆ)" ಎಂದು ಮುಖ್ಯ  ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಎಂ.ಜೆ ಖಾನ್ ಅವರ ಮುಂದೆ ಪಾರೇಖ್ ಹೇಳಿಕೆ ನೀಡಿದ್ದಾರೆ.

ಸೇತುವೆಯ ಕೇಬಲ್ ತುಕ್ಕು ಹಿಡಿದಿತ್ತು ಹಾಗೂ ದುರಸ್ತಿ ನಡೆಸಿದ ಕಂಪೆನಿ ಅದನ್ನು ಬದಲಿಸಿರಲಿಲ್ಲ ಎಂದು ಮೊರ್ಬಿ ಡಿವೈಎಸ್ಪಿ ಪಿ ಎ ಝಲಾ ನ್ಯಾಯಾಲಯಕ್ಕೆ ಹೇಳಿದರು.

ಸೇತುವೆ ದರುಸ್ತಿ ಕೈಗೊಂಡ ಗುತ್ತಿಗೆದಾರರಿಗೆ ಈ ರೀತಿಯ ಸಾರ್ವಜನಿಕ ಮೂಲಸೌಕರ್ಯವನ್ನು ನಿರ್ವಹಿಸಿ ಅನುಭವವಿರಲಿಲ್ಲ ಎಂದು ಪ್ರಾಸಿಕ್ಯೂಟರ್ ನ್ಯಾಯಾಲಯಕ್ಕೆ ಹೇಳಿದರು. "ಹಾಗಿದ್ದರೂ 2007ರಲ್ಲಿ ಅವರಿಗೆ ಸೇತುವೆ ದುರಸ್ತಿಯ ಕಾಮಗಾರಿ ವಹಿಸಲಾಗಿತ್ತು ಮತ್ತೆ 2022 ರಲ್ಲಿ ನೀಡಲಾಗಿತ್ತು" ಎಂದು ಅವರು ಹೇಳಿದರು.

ನವೀಕೃತ ಸೇತುವೆ ಕನಿಷ್ಠ ಎಂಟರಿಂದ ಹತ್ತು ವರ್ಷ ಬಾಳ್ವಿಕೆ ಬರುತ್ತದೆ ಎಂದು ಈ ಹಿಂದೆ ಹೇಳಿಕೊಂಡಿದ್ದ ಒರೇವಾ ಆಡಳಿತ ನಿರ್ದೇಶಕ ಜಯಸುಖ್‍ಭಾಯಿ ಪಟೇಲ್ ಅವರು ದುರಂತ ನಡೆದಂದಿನಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.

ಸೇತುವೆ ಉದ್ಘಾಟನೆ ಸಂದರ್ಭ ಮಾತ್ರ ಅವರು ಮತ್ತವರ ಕುಟುಂಬ ಕಾಣಿಸಿಕೊಂಡಿತ್ತು ಎಂದು ಸ್ಥಳೀಯರು ಹೇಳುತ್ತಾರೆ. ಒರೇವಾ ಮಾಲೀಕರ ಅಹ್ಮದಾಬಾದ್ ಫಾರ್ಮ್ ಹೌಸ್‍ಗೆ ಬೀಗ ಹಾಕಲಾಗಿದೆ ಹಾಗೂ ಅಲ್ಲಿ ಯಾರೂ ವಾಸಿಸುತ್ತಿಲ್ಲ ಎಂದು ತಿಳಿದು ಬಂದಿದೆ.

Similar News