ಸುರತ್ಕಲ್‌ ಟೋಲ್‌ ಗೇಟ್‌ ಕೇವಲ ಸ್ಥಳೀಯರ ಪ್ರಶ್ನೆಯಲ್ಲ: ಕೇರಳ ಶಾಸಕ ರೋಝಿ ಜಾನ್‌

Update: 2022-11-02 17:44 GMT

ಸುರತ್ಕಲ್‌, ನ.2: ಇಲ್ಲಿನ ಸುರತ್ಕಲ್‌ ಹೋರಾಟ ಸಮಿತಿ ಮತ್ತು ಸಮಾನ ಮನಸ್ಕ ಸಂಘಟನೆಗಳು ಟೋಲ್‌ ಗೇಟ್‌ ತೆರವಿಗೆ ಆಗ್ರಹಿಸಿ ನಡೆಸುತ್ತಿರುವ ಆಹೋರಾತ್ರಿ ಧರಣಿ ಸತ್ಯಾಗ್ರಹವು ಬುಧವಾರ 6ನೇ ದಿನವನ್ನು ಪೂರೈಸಿತು.

ಇಂದು ಧರಣಿ ಸತ್ಯಾಗ್ರಹದ ವೇದಿಕೆಗೆ ಆಗಮಿಸಿ ಬೆಂಬಲ ವ್ಯಕ್ತಪಡಿಸಿದ ಎಐಸಿಸಿ ಕಾರ್ಯದರ್ಶಿ ಹಾಗೂ ಕೇರಳ ಶಾಸಕ ರೋಝಿ ಜಾನ್‌, ಸುರತ್ಕಲ್‌ ಟೋಲ್‌ ಗೇಟ್‌ ಕೇವಲ ಸ್ಥಳೀಯರ ಪ್ರಶ್ನೆಯಲ್ಲ, ಇದರಿಂದ ಸ್ಥಳಿಯರಿಗಷ್ಟೇ ತೊಂದರೆಗಳಾಗುತ್ತಿಲ್ಲ. ಈ ಟೋಲ್‌ಗೇಟ್‌ ಮೂಲಕ ಕೇವಲ ಸ್ಥಳೀಯರನ್ನು ಮಾತ್ರ ದೋಚುತ್ತಿಲ್ಲ. ಈ ಟೋಲ್‌ ಗೇಟ್‌ ಮೂಲಕ ರಾಜ್ಯ, ದೇಶ-ವಿದೇಶಗಳಿಗೂ ವಾಹನಗಳು ಸಂಚರಿಸುತ್ತಿರುತ್ತವೆ. ಮುಖ್ಯವಾಗಿ ಕೇರಳ, ಮುಂಬೈ ಸೇರಿದಂತೆ ತಲುಪಬೇಕಿದ್ದರೂ ಈ ಟೋಲ್‌ ಗೇಟನ್ನು ದಾಟಿಕೊಂಡೇ ಹೋಗಬೇಕಿದೆ. ಆದ್ದರಿಂದ ಈ ಟೋಲ್‌ ಸ್ಥಳೀಯರ ಸಮಸ್ಯೆ ಮಾತ್ರವಲ್ಲಿದೆ, ಇದು ದೇಶದ ಸಮಸ್ಯೆಯಾಗಿ ಪರಿವರ್ತನೆಯಾಗಿದೆ. ಯಾವುದೇ ಕಾರಣಕ್ಕೂ ದೇಶದ ಸಮಸ್ಯೆ ನೀಗುವವರೆಗೂ, ಈ ಅಕ್ರಮ ಟೋಲ್‌ ಗೇಟ್‌ ತೆರವು ಗೊಳ್ಳುವ ವರೆಗೂ ಪ್ರತಿಭಟನೆಗಳು ನಡೆಯತ್ತಲೇ ಇರಬೇಕಿದೆ ಅದಕ್ಕೆ ಕಾಂಗ್ರೆಸ್‌ ಹಾಗೂ ಅದರ ಎಲ್ಲಾ ವಿಭಾಗಗಳೂ ಸಂಪೂರ್ಣ ಬೆಂಬಲ ನೀಡಲಿದೆ ಎಂದರು.

ಧರಣಿ ನಿರತರನ್ನು ಉದ್ದೇಶಿಸಿ ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್‌ ಅಲಿ ಮಾತನಾಡಿದರು.

ಉಡುಪಿ ಜಿಲ್ಲಾ ಕಾಂಗ್ರೇಸ್‌ ಅಧ್ಯಕ್ಷ ಅಶೋಕ್‌ ಒಳವೂರು, ಹೋರಾಟ ಸಮಿತಿ ಸಂಚಾಲಕ ಮುನೀರ್‌ ಕಾಟಿಪಳ್ಳ, ಬಿ.ಕೆ ಇಮ್ತಿಯಾಝ್‌, ಶಾಲೆಟ್‌ ಪಿಂಟೊ, ಪ್ರತಿಭಾ ಕುಲಾಯಿ, ಮನೋಜ್‌ ವಾಮಂಜೂರು, ಮುಹಮ್ಮದ್‌  ಕುಂಜತ್ತಬೈಲ್‌, ವಿಲ್ಸೆನ್ಟ್‌ ಪಿರೇರಾ, ಕನಕದಾಸ ಕೂಳೂರು, ಸನ್ನಿ ಡಿಸೋಜಾ ರೈತ ಸಂಘದ ಮುಖಂಡರಾದ ಬಾವಾ ಪದರಂಜಿ, ವಿಲ್ಲಿ ವಿಲ್ಸನ್‌, ಆನಂದ ಅಮೀನ್‌, ರಾಜೇಶ್‌ ಪೂಜಾರಿ ಕುಳಾಯಿ, ಶ್ರೀಕಾಂತ್ ಸಾಲ್ಯಾನ್‌, ಶ್ರೀನಾಥ್‌ ಕುಲಾಲ್‌ ಮೊದಲಾದವರು ಭಾಗವಹಿಸಿದ್ದರು.

Similar News