ಸುರತ್ಕಲ್ ಟೋಲ್ ಗೇಟ್ ದರೋಡೆಯ ಕೇಂದ್ರ: ಕೆಪಿಸಿಸಿ ಪ್ರಧಾನ‌ ಕಾರ್ಯದರ್ಶಿ ಇನಾಯತ್‌ ಅಲಿ

Update: 2022-11-03 07:34 GMT

ಸುರತ್ಕಲ್, ನ.3: ಇಲ್ಲಿನ ಎನ್ಐಟಿಕೆ ಟೋಲ್‌ಗೇಟ್ ತೆರವಿಗೆ ಆಗ್ರಹಿಸಿ ಟೋಲ್ ಗೇಟ್ ತೆರವು ಹೋರಾಟ‌ ಸಮಿತಿ ಮತ್ತು ಸಮಾನ ಮನಸ್ಕ‌ ಸಂಘಟನೆಗಳ ನಡೆಸುತ್ತಿರುವ ಅನಿರ್ದಿಷ್ಟಾವಧಿ ಹಗಲು- ರಾತ್ರಿ ಧರಣಿಯ 6ನೇ ದಿನವಾದ ಮಂಗಳವಾರ ರಾತ್ರಿ‌ ಕೆಪಿಸಿಸಿ ಪ್ರಧಾನ‌ ಕಾರ್ಯದರ್ಶಿ ಇನಾಯತ್‌ ಅಲಿ ಅವರು ಚಾಪೆ ದಿಂಬು ಜೊತೆಗೆ ಧರಣಿಯ ವೇದಿಕೆಯಲ್ಲಿ ತಂಗುವ ಮೂಲಕ ಧರಣಿಗೆ ಬೆಂಬಲ‌ ವ್ಯಕ್ತಪಡಿಸಿದರು.

ಈ ವೇಳೆ ಮಾಧ್ಯಮಗಳ‌ ಜೊತೆ ಮಾತನಾಡಿದ ಇನಾಯತ್ ಅಲಿ, ಇದು ಟೋಲ್ ಗೇಟ್ ಅಲ್ಲ, ಇದೊಂದು ದರೋಡೆಯ ಕೇಂದ್ರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದ.ಕ.‌ ಸಂಸದ ನಳಿನ್‌ ಕುಮಾರ್ ಕಟೀಲ್ ಬಾಯಿ ಬಿಟ್ಟರೆ ಸುಳ್ಳು ಹೇಳುತ್ತಾರೆ. ಟೋಲ್ ತೆರವಿನ ದಿನಾಂಕ‌ ಪ್ರಕಟಿಸುವಂತೆ ಮನವಿ ಮಾಡಿಕೊಂಡಾಗಲೆಲ್ಲಾ ಟೋಲ್ ಗೇಟ್ ಕಾಂಗ್ರೆಸ್ ಸರಕಾರದ ವೇಳೆ ನಿರ್ಮಿಸಲಾಗಿದೆ  ಎನ್ನುತ್ತಿದ್ದರು. ಈಗ ಆ ವರಸೆ ಬದಲಾಗಿದ್ದು, ಟೋಲ್ ತೆರವಿಗೆ ಪ್ರಥಮವಾಗಿ ಆಗ್ರಹಿಸಿದವರು ಬಿಜೆಪಿ ಎಂದು ಸುಳ್ಳು ಹೇಳುತ್ತಿದ್ದಾರೆ. ಪ್ರಥಮ ಹಂತದಲ್ಲಿ ಆಗ್ರಹಿಸಿದವರಿಗೆ ಅಧಿಕಾರ ನಿಮ್ಮ ಕೈಯಲ್ಲಿದ್ದರೂ ಯಾಕೆ ತೆರವುಗೊಳಿಸಲು ಮಿನಮೇಷ ಎಣಿಸುತ್ತಿದ್ದೀರಿ‌ ಎಂದು ಸಂಸದರನ್ನು ನೇರವಾಗಿ ಪ್ರಶ್ನಿಸಿದರು. 

ಸಂಸದರು ಈ ಹೋರಾಟಕ್ಕೂ ರಾಜಕಿಯದ ಬಣ್ಣ ಬಳಿದು ಅದರಲ್ಲೂ ರಾಜಕೀಯದ ಬೇಳೆ ಬೇಯಿಸಿ ಬಿಜೆಪಿ ಲಾಭ ಪಡೆಯುವ ಹುನ್ನಾರ ನಡೆಸುತ್ತಿದ್ದಾರೆ. ಎಲ್ಲೋ ಕುಳಿತು ನಮ್ಮ ಬೆಂಬಲವಿದೆ‌, ನಾವೇ ಧರಣಿಯನ್ನು ಮಾಡುತ್ತೇವೆ, ನ್ಯಾಯಾಲಯ ಮೆಟ್ಟಲೇರುತ್ತೇವೆ ಎನ್ನುತ್ತಿದ್ದ ಇಲ್ಲಿನ ಸಂಸದರು, ಶಾಸಕರು ಈ ವರೆಗೂ ಧರಣಿಯ ಸ್ಥಳಕ್ಕೆ ಬಂದು ಬೆಂಬಲವನ್ನೂ ಸೂಚಿಸಿಲ್ಲ ಎಂದರು.

ಶಾಸಕ ಭರತ್‌ಶೆಟ್ಟಿ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಅವರ‌ ಕ್ಷೇತ್ರದ ಜನರ ಮೇಲೆ ಎಳ್ಳಷ್ಟೂ ಕಾಳಜಿ ಇದ್ದರೆ, ಅವರೇ ಹೇಳಿದಂತೆ ನ.7 ರಂದು ಟೋಲ್ ಗೇಟ್ ತೆರವು ಗೊಳಿಸಲಿ ಇಲ್ಲವಾದಲ್ಲಿ ರಾಜಿನಾಮೆ ಕೊಟ್ಟು ನಮ್ಮೊಂದಿಗೆ ಧರಣಿಯಲ್ಲಿ ಭಾಗವಹಿಸಲಿ ಎಂದು ಸವಾಲು ಹಾಕಿದರು. 

ಈ ಸಂದರ್ಭ ಟೋಲ್ ಗೇಟ್ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಶಂಶುದ್ದೀನ್ ಮುಕ್ಕ, ಮುಹಮ್ಮದ್ ಶಮೀರ್ , ಹೋರಾಟ ಸಮಿತಿಯ ಸಹ  ಬಿ.ಕೆ. ಇಮ್ತಿಯಾಝ್ ಸೇರಿದಂತೆ ಕೆಪಿಸಿಸಿಯ ಕಾರ್ಯಕರ್ತರು, ಇನಾಯತ್ ಆಲಿ ಅಭಿಮಾನಿ ಬಳಗ ಜೊತೆಗಿದ್ದರು‌.

Similar News