ಡಿಸೆಂಬರ್ ನಲ್ಲಿ ಐಎಂಫ್ ಸಾಲ ಪಡೆಯುವ ಶ್ರೀಲಂಕಾದ ಆಶಯಕ್ಕೆ ಹಿನ್ನಡೆ

Update: 2022-11-03 17:25 GMT

ಕೊಲಂಬೊ, ನ.3: ಶ್ರೀಲಂಕಾ(Sri Lanka)ದ ಪ್ರಮುಖ ಮಿತ್ರ ಹಾಗೂ ಸಾಲಗಾರ(ಆರ್ಥಿಕ ನೆರವು ಒದಗಿಸಿದ) ದೇಶವಾದ ಚೀನಾವು ಸಾಲವನ್ನು ಪುನರ್ರಚನೆ ಮಾಡದ ಕಾರಣ ಈ ಡಿಸೆಂಬರ್ ನಲ್ಲಿ ಐಎಂಎಫ್(IMF) ನಿಂದ 2.9 ಶತಕೋಟಿ ಡಾಲರ್ ಸಾಲ ಪಡೆಯಲು ಶ್ರೀಲಂಕಾಕ್ಕೆ ಸಾಧ್ಯವಾಗದು ಎಂದು ಜಾಗತಿಕ ಆರ್ಥಿಕ ತಜ್ಞರು ಹೇಳಿದ್ದಾರೆ.

    ಚೀನಾದಲ್ಲಿ ಕಳೆದ ತಿಂಗಳು ಕಮ್ಯುನಿಸ್ಟ್ ಪಕ್ಷದ 20ನೇ ರಾಷ್ಟ್ರೀಯ ಅಧಿವೇಶನ ನಡೆದ ಕಾರಣ ಸಾಲ ಪುನರ್ರಚನೆಯ ಮಾತುಕತೆಯನ್ನು ಚೀನಾ ಮುಂದೂಡಿತ್ತು. ಪ್ರಮುಖ ಸಾಲಗಾರರಿಂದ ( ಆರ್ಥಿಕ ನೆರವು ಒದಗಿಸುವ ದೇಶಗಳು) ಸಾಲದ ಸಮನ್ವಯ ಮತ್ತು ಪುನರ್ರಚನೆಯ ಖಾತರಿಯನ್ನು ಒದಗಿಸುವಂತೆ ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ(ಐಎಂಎಫ್) ಶ್ರೀಲಂಕಾಕ್ಕೆ ಸೂಚಿಸಿತ್ತು.

ಈ ಖಾತರಿಯನ್ನು ಸಲ್ಲಿಸಿದ ಬಳಿಕ ಶ್ರೀಲಂಕಾಕ್ಕೆ 2.9 ಶತಕೋಟಿ ಡಾಲರ್ ಆರ್ಥಿಕ ನೆರವು ಒದಗಿಸುವ ಮುಂದಿನ ಹಂತದ ಪರಿಶೀಲನೆಯನ್ನು ಐಎಂಎಫ್ ನಡೆಸುತ್ತದೆ. ಭಾರತ, ಜಪಾನ್ ಮತ್ತು ಚೀನಾ ದೇಶಗಳು ಶ್ರೀಲಂಕಾಕ್ಕೆ ಆರ್ಥಿಕ ನೆರವು ಒದಗಿಸುವ ಪ್ರಮುಖ ದೇಶಗಳಾಗಿವೆ. ಇದರಲ್ಲಿ ಭಾರತ ಮತ್ತು ಜಪಾನ್ ) ಸಾಲದ ಸಮನ್ವಯ ಮತ್ತು ಪುನರ್ರಚನೆಯ ಕುರಿತು ಶ್ರೀಲಂಕಾದೊಂದಿಗೆ ಮಾತುಕತೆ ಆರಂಭಿಸಿವೆ. ಆದರೆ ಚೀನಾ ಇನ್ನೂ ಈ ವಿಷಯದಲ್ಲಿ ಆಸಕ್ತಿ ತೋರಿಲ್ಲ. ಆದ್ದರಿಂದ ಡಿಸೆಂಬರ್ನಲ್ಲಿ ನಡೆಯುವ ಐಎಂಎಫ್ ಆಡಳಿತ ಮಂಡಳಿ ಸಭೆಗೂ ಮುನ್ನ ಚೀನಾದಿಂದ ಖಾತರಿ ಲಭಿಸುವ ಸಾಧ್ಯತೆ ಕ್ಷೀಣಿಸಿದ್ದು ಸಾಲಕ್ಕಾಗಿ 2023ರ ಮಾರ್ಚ್ನಲ್ಲಿ ನಡೆಯುವ ಐಎಂಎಫ್ ಆಡಳಿತ ಮಂಡಳಿ ಸಭೆಯವರೆಗೆ ಶ್ರೀಲಂಕಾ ಕಾಯಬೇಕಾಗುತ್ತದೆ.

    

 ಈ ಮಧ್ಯೆ, ವಿದೇಶಿ ವಿನಿಮಯ ಸವಕಳಿ, ತೀವ್ರ ಆರ್ಥಿಕ ಹಿಂಜರಿತ ಮತ್ತು ಹೆಚ್ಚುತ್ತಿರುವ ಹಣಕಾಸಿನ ಕೊರತೆಯಿಂದಾಗಿ ಶ್ರೀಲಂಕಾದ ಸಾಲದ ಹೊರೆ ಮತ್ತಷ್ಟು ಹೆಚ್ಚಲಿದೆ. 2021ರ ಅಂತ್ಯಕ್ಕೆ ಶ್ರೀಲಂಕಾದ ಒಡ್ಡು ಸಾಲದ ಪ್ರಮಾಣ 36 ಶತಕೋಟಿ ಡಾಲರ್ ಆಗಿದ್ದು ಇದರಲ್ಲಿ 20%ದಷ್ಟು ಅಂದರೆ 7.1 ಶತಕೋಟಿ ಡಾಲರ್ನಷ್ಟು(ಜಿಡಿಪಿಯ 115.3%ದಷ್ಟು) ಸಾಲವನ್ನು 2021ರ ಡಿಸೆಂಬರ್ ಅಂತ್ಯಕ್ಕೆ ಚೀನಾಕ್ಕೆ ಮರುಪಾವತಿಸಬೇಕಿತ್ತು.

ಆದರೆ ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಶ್ರೀಲಂಕಾ ಸಾಲ ಪಾವತಿ ಬಾಕಿಯಿರಿಸಿದ್ದು 2022ರ ಜೂನ್ ವೇಳೆಗೆ ಚೀನಾಕ್ಕೆ ಪಾವತಿಸಬೇಕಿರುವ ಬಾಕಿ ಸಾಲದ ಮೊತ್ತ ಜಿಡಿಪಿಯ 143.7%ಕ್ಕೆ ಹೆಚ್ಚಿದೆ. ಭಾರತದಿಂದ ಸುಮಾರು 1.7 ಶತಕೋಟಿ ಡಾಲರ್ನಷ್ಟು ದ್ವಿಪಕ್ಷೀಯ ಸಾಲ ಹಾಗೂ 4 ಶತಕೋಟಿ ಡಾಲರ್ ತುರ್ತು ಸಾಲದ ನೆರವನ್ನು ಶ್ರೀಲಂಕಾ ಪಡೆದಿದೆ.

 ಐಎಂಎಫ್ ಸಾಲ ಪಡೆಯುವಲ್ಲಿ ವಿಳಂಬವಾದಷ್ಟೂ ಶ್ರೀಲಂಕಾದ ಸಾಲದ ಹೊರೆ ಹೆಚ್ಚಲಿದೆ. ಅಕ್ಟೋಬರ್ 31ರಂದು ಸಂಸತ್ತಿನಲ್ಲಿ ಮಾತನಾಡಿದ್ದ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ‘ ಈ ಪ್ರಕ್ರಿಯೆಯೊಂದಿಗೆ ನಾವು ಮುಂದುವರಿಯಬೇಕಿದೆ. ನವೆಂಬರ್ ಮಧ್ಯಭಾಗದೊಳಗೆ ನಮ್ಮ ಮಿತ್ರರೊಂದಿಗೆ ಒಂದು ಒಪ್ಪಂದಕ್ಕೆ ಬಂದರೆ ಅದನ್ನು ಡಿಸೆಂಬರ್ ಮಧ್ಯಭಾಗದಲ್ಲಿ ನಡೆಯುವ ಐಎಂಎಫ್ ಆಡಳಿತ ಮಂಡಳಿ ಸಭೆಗೆ ಒಪ್ಪಿಸಬಹುದು. ಆಗ ನಮಗೆ ದೊಡ್ಡ ಲಾಭ ಸಿಗುತ್ತದೆ.

ಆದರೆ ಚೀನಾವು ಪಕ್ಷದ ಅಧಿವೇಶನದ ಬಳಿಕ ಈ ಕುರಿತು ಗಮನ ಹರಿಸಲಿದೆ ಎಂಬ ಸರಳ ಕಾರಣದಿಂದಾಗಿ ನಾವು ಇದನ್ನು ಸಾಧಿಸುವ ಬಗ್ಗೆ ಅನುಮಾನವಿದೆ. ಆದರೂ, ಜನವರಿಯೊಳಗೆ ಐಎಂಎಫ್ ಗೆ ಸಲ್ಲಿಸುವತ್ತ ಗಮನ ಹರಿಸಲಾಗುವುದು’ ಎಂದು ಹೇಳಿದ್ದಾರೆ. ಇದೀಗ ಐಎಂಎಫ್ ಸಾಲಕ್ಕಾಗಿ 2023ರ ಮಾರ್ಚ್ವರೆಗೆ ಶ್ರೀಲಂಕಾ ಕಾಯಬೇಕಿದೆ.

ಆದರೆ ಅದುವರೆಗೆ ದೇಶದ ವೆಚ್ಚವನ್ನು ನಿರ್ವಹಿಸಲು 850 ದಶಲಕ್ಷ ಡಾಲರ್ಗಳಷ್ಟು ‘ಮಧ್ಯಂತರ ಸಾಲದ ನೆರವು’ ಪಡೆಯುವುದು ವಿಕ್ರಮಸಿಂಘೆ ಆಡಳಿತಕ್ಕೆ ಅನಿವಾರ್ಯವಾಗಿದೆ. ಆದರೆ ಇಷ್ಟು ಮೊತ್ತದ ಸಾಲ ನೀಡುವವರು ಯಾರು ಎಂಬುದು ಇಲ್ಲಿನ ಯಕ್ಷಪ್ರಶ್ನೆಯಾಗಿದೆ.

 ಈ ಮಧ್ಯೆ, ಖಾತರಿ ಪ್ರಕ್ರಿಯೆ ತ್ವರಿತಗೊಳಿಸುವಂತೆ ಚೀನಾಕ್ಕೆ ಮನವಿ ಮಾಡಲು ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಚೀನಾಕ್ಕೆ ಭೇಟಿ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

Similar News