ಶಾಸಕರ ಖರೀದಿ ಪ್ರಕ್ರಿಯೆಯ ಸಭೆಯದ್ದೆನ್ನಲಾದ ಹಿಡನ್ ಕೆಮರಾ ದೃಶ್ಯ ಬಹಿರಂಗಪಡಿಸಿದ ತೆಲಂಗಾಣ ಸಿಎಂ

Update: 2022-11-03 18:07 GMT

ಹೈದರಾಬಾದ್: ಬಿಜೆಪಿ (BJP) ತನ್ನ ಪಕ್ಷಗಳ ಶಾಸಕರನ್ನು ಖರೀದಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿರುವ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ (Telangana CM KCR) ಅವರು ಗುರುವಾರ ಅನಿರೀಕ್ಷಿತ ಸುದ್ದಿಗೋಷ್ಠಿಯನ್ನು ಕರೆದಿದ್ದು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ತಮ್ಮ ಪಕ್ಷದ ಶಾಸಕರನ್ನು ಖರೀದಿಸಲು ನಡೆಯುತ್ತಿರುವ ಆರೋಪವನ್ನು ಮತ್ತೆ ಉಚ್ಚರಿಸಿದ ಅವರು, ತಮ್ಮ ಆರೋಪಗಳನ್ನು ಸಮರ್ಥಿಸುವ ಕೆಲವು ವೀಡಿಯೊಗಳ ಸರಣಿಯನ್ನು ಬಹಿರಂಗಪಡಿಸಿದ್ದಾರೆ. 

ತಮ್ಮನ್ನು ಖರೀದಿಸುವ ಪ್ರಯತ್ನವನ್ನು ವಿಫಲಗೊಳಿಸಿದ ನಾಲ್ವರು ಶಾಸಕರನ್ನು ಪ್ರಸ್ತುತಪಡಿಸಿದ ಕೆಸಿಆರ್, ಬಿಜೆಪಿ ವಿರುದ್ಧವಿರುವ ಒಂದು ಗಂಟೆಗೂ ಹೆಚ್ಚು ಉದ್ದದ ಹಿಡನ್ ಕ್ಯಾಮೆರಾ ದೃಶ್ಯಗಳು ತಮ್ಮ ಬಳಿ ಇವೆ ಎಂದು ಹೇಳಿದ್ದಾರೆ. ತಮ್ಮ ಸುದ್ದಿಗೋಷ್ಠಿಯಲ್ಲಿ ಐದು ನಿಮಿಷಗಳ ವಿಡಿಯೋ ಒಂದನ್ನು ಪ್ಲೇ ಮಾಡಿ ತೋರಿಸಿದ್ದಾರೆ.

ತಮ್ಮ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಪಕ್ಷದ ನಾಲ್ವರು ಶಾಸಕರಿಗೆ "ದಿಲ್ಲಿ ದಲ್ಲಾಳಿಗಳು" ಲಂಚ ನೀಡಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿ ಅವರು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಮೇಲಿನ ವಾಗ್ದಾಳಿಯನ್ನು ತೀವ್ರಗೊಳಿಸಿದ್ದಾರೆ.

ತೆಲಂಗಾಣದ ಫಾರ್ಮ್‌ಹೌಸ್‌ನಲ್ಲಿ ಕಳೆದ ವಾರ ನಡೆದಿದೆ ಎನ್ನಲಾದ ಘಟನೆಯ ಉಲ್ಲೇಖವು ಅವರ ಇಂದು ನಡೆದ ಪ್ರಮುಖ ಉಪಚುನಾವಣೆಗೆ ಮುನ್ನ ರಾಜ್ಯದಲ್ಲಿ ರಾಜಕೀಯ ಬಿರುಗಾಳಿಯನ್ನು ಎಬ್ಬಿಸಿದೆ.

ದಲ್ಲಾಳಿಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು '20 ಬಾರಿ', ಪ್ರಧಾನಿ ಮೋದಿಯನ್ನು 'ಮೂರು ಬಾರಿ' ಉಲ್ಲೇಖಿಸಿದ್ದಾರೆ ಮತ್ತು ಕರ್ನಾಟಕದಲ್ಲಿ ಸರ್ಕಾರದ ಬದಲಾವಣೆಯನ್ನು ಉಲ್ಲೇಖಿಸಿದ್ದರಿಂದ ಫಾರ್ಮ್‌ಹೌಸ್‌ನಲ್ಲಿ ನಡೆದ ಸಭೆಯು "ಕಳ್ಳಬೇಟೆಯ ಕಾರ್ಯಾಚರಣೆಯಾಗಿದೆ" ಎಂಬುದಕ್ಕೆ ವೀಡಿಯೊಗಳು ಸಾಕ್ಷಿಯಾಗಿದೆ ಎಂದು ಕೆಸಿಆರ್ ಹೇಳಿದ್ದಾರೆ.

"ದೇಶವನ್ನು ಉಳಿಸಿ" ಎಂದು ನ್ಯಾಯಾಂಗವನ್ನು ವಿನಂತಿಸಿದ ಅವರು, ಸುಪ್ರೀಂ ಕೋರ್ಟ್, ಹೈಕೋರ್ಟ್‌ಗಳ ಉನ್ನತ ನ್ಯಾಯಾಧೀಶರು ಮತ್ತು ವಿರೋಧ ಪಕ್ಷದ ನಾಯಕರಿಗೆ ವೀಡಿಯೊಗಳನ್ನು ಕಳುಹಿಸುವುದಾಗಿ ಹೇಳಿದರು.  ತೆಲಂಗಾಣ, ಆಂಧ್ರಪ್ರದೇಶ, ದೆಹಲಿ ಮತ್ತು ರಾಜಸ್ಥಾನದಲ್ಲಿ ಬಿಜೆಪಿ ಸರ್ಕಾರವನ್ನು ಬೀಳಿಸಲು ಪ್ರಯತ್ನಿಸುತ್ತಿದೆ ಎಂದು ಕೆಸಿಆರ್ ಆರೋಪಿಸಿದರು.

Similar News