ಸುಬ್ರಮಣ್ಯನ್ ಸ್ವಾಮಿ ಭದ್ರತೆ ಖಾತರಿಪಡಿಸಿದ ಸರ್ಕಾರ: ಅರ್ಜಿ ವಿಲೇವಾರಿ

Update: 2022-11-04 01:46 GMT

ಹೊಸದಿಲ್ಲಿ: ಬಿಜೆಪಿಯ ಮಾಜಿ ಸಂಸದ ಸುಬ್ರಮಣ್ಯನ್ ಸ್ವಾಮಿ (former BJP MP, Subramanian Swamy) ಅವರಿಗೆ ಝೆಡ್ ವರ್ಗದ ಭದ್ರತೆ ನೀಡುವುದೂ ಸೇರಿದಂತೆ ಅವರ ಭದ್ರತೆ ಹಾಗೂ ಸುರಕ್ಷತೆ ಖಾತರಿಪಡಿಸಲು ಎಲ್ಲ ಅಗತ್ಯ ವ್ಯವಸ್ಥೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್‍ಗೆ ಗುರುವಾರ ತಿಳಿಸಿದ ಹಿನ್ನೆಲೆಯಲ್ಲಿ ಸುಬ್ರಮಣ್ಯನ್ ಸ್ವಾಮಿಯವರ ಮನವಿಯನ್ನು ಹೈಕೋರ್ಟ್ ವಿಲೇವಾರಿ ಮಾಡಿದೆ ಎಂದು timesofindia.com ವರದಿ ಮಾಡಿದೆ.

ತಮ್ಮ ಖಾಸಗಿ ನಿವಾಸದಲ್ಲಿ ಭದ್ರತೆ ಒದಗಿಸುತ್ತಿಲ್ಲ ಎಂದು ಆಪಾದಿಸಿ ಸುಬ್ರಮಣ್ಯನ್ ಸ್ವಾಮಿ ಅರ್ಜಿ ಸಲ್ಲಿಸಿದರು. "ಮೇಲಿನ ಹೇಳಿಕೆಯ ಹಿನ್ನೆಲೆಯಲ್ಲಿ ಅರ್ಜಿಯ ವಿಚಾರಣೆ ಮುಕ್ತಾಯಗೊಳಿಸಲಾಗಿದೆ" ಎಂದು ನ್ಯಾಯಮೂರ್ತಿ ಯಶವಂತ ವರ್ಮಾ ನೇತೃತ್ವದ ನ್ಯಾಯಪೀಠ ಸ್ಪಷ್ಟಪಡಿಸಿದೆ.

ಕೇಂದ್ರ ಸರ್ಕಾರ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‍ಜಿ) ಸಂಜಯ್ ಜೈನ್ ಅವರ ಮೂಲಕ ನ್ಯಾಯಮೂರ್ತಿ ವರ್ಮಾ ಅವರ ಮುಂದೆ ಅಫಿಡವಿಟ್ ಸಲ್ಲಿಸಿ, ಸ್ವಾಮಿಯವರ ಸುರಕ್ಷತೆ ಮತ್ತ ಭದ್ರತೆಯನ್ನು ಖಚಿತಪಡಿಸಲು ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿತ್ತು.

ಕಳೆದ ವಾರ ದೆಹಲಿ ಹೈಕೋರ್ಟ್, ಮಾಜಿ ರಾಜ್ಯಸಭಾ ಸದಸ್ಯರು ಎತ್ತಿರುವ ಭದ್ರತಾ ಆತಂಕದ ಬಗ್ಗೆ ಸಮಗ್ರ ಅಫಿಡವಿಟ್ಟ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು ಎಂದು timesofindia.com ವರದಿ ಮಾಡಿದೆ. 

Similar News