×
Ad

ನಾಲ್ವರು ಟಿಆರ್‌ಎಸ್ ಶಾಸಕರಿಗೆ ಆಮಿಷ ಪ್ರಕರಣ: ವೀಡಿಯೊ ಬಿಡುಗಡೆಗೊಳಿಸಿದ ತೆಲಂಗಾಣ ಸಿಎಂ ಚಂದ್ರಶೇಖರ ರಾವ್

Update: 2022-11-04 07:47 IST

ಹೈದರಾಬಾದ್ : ನಾಲ್ವರು ಟಿಆರ್‌ಎಸ್ ಶಾಸಕರಿಗೆ ದೊಡ್ಡ ಮೊತ್ತದ ಆಮಿಷವೊಡ್ಡಿ ಅವರನ್ನು ಬಂಡೇಳುವಂತೆ ಕುಮ್ಮಕ್ಕು ನೀಡಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದ್ದು ಎನ್ನಲಾದ ಹೊಸ ವೀಡಿಯೊ ದೃಶ್ಯಾವಳಿಯನ್ನು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ (Telangana CM K Chandrasekhar Rao) ಬಿಡುಗಡೆ ಮಾಡಿದ್ದಾರೆ.

ಮುನುಗೋಡು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಮುಕ್ತಾಯವಾದ ತಕ್ಷಣ ರಾಮಚಂದ್ರ ಭಾರತಿ, ಸಿಂಹಯಾಜಿ ಮತ್ತು ನಂದಕುಮಾರ್ ಎಂಬ ಮೂವರು ಆರೋಪಿಗಳು ಶಾಸಕರಿಗೆ ಆಮಿಷವೊಡ್ಡುವ ವೀಡಿಯೊ ಬಿಡುಗಡೆ ಮಾಡಿದರು. ಇದಕ್ಕೂ ಮುನ್ನ 'ಪೋಚ್‍ಗೇಟ್' ಬಹಿರಂಗಪಡಿಸುವ ಸಂದರ್ಭದಲ್ಲಿ ಎರಡು ಆಡಿಯೊ ಮತ್ತು ವೀಡಿಯೊ ತುಣುಕುಗಳನ್ನು ಬಿಡುಗಡೆ ಮಾಡಲಾಗಿತ್ತು.

ಈ ವೀಡಿಯೊ ತುಣುಕುಗಳನ್ನು ಭಾರತದ ಮುಖ್ಯ ನ್ಯಾಯಮೂರ್ತಿಗಳು, ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು, ಎಲ್ಲ ಹೈಕೋರ್ಟ್‍ಗಳ ಮುಖ್ಯ ನ್ಯಾಯಮೂರ್ತಿಗಳು, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಎಲ್ಲ ಮಾಧ್ಯಮ ಸಂಸ್ಥೆಗಳು ಹಾಗೂ ಸಿಬಿಐ, ಇಡಿ ಹಾಗೂ ಕೇಂದ್ರೀಯ ಜಾಗೃತ ಆಯೋಗದಂಥ ತನಿಖಾ ಏಜೆನ್ಸಿಗಳಿಗೆ ಕಳುಹಿಸಲಾಗುವುದು ಎಂದು ಅವರು ಹೇಳಿದರು. "ಭಾರತದಲ್ಲಿ ಪ್ರಜಾಪ್ರಭುತ್ವ ರಕ್ಷಿಸುವಂತೆ ಸಿಜೆಐ, ಎಲ್ಲ ಹೈಕೋರ್ಟ್‍ಗಳ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಮಾಡಲಿದ್ದೇನೆ" ಎಂದರು.

"ಶಾಸಕರನ್ನು ಖರೀದಿ ಮಾಡಿ, ಚುನಾಯಿತ ಸರ್ಕಾರವನ್ನು ಪತನಗೊಳಿಸುವ ಕಾರ್ಯ ದೇಶದಲ್ಲಿ ಬಹಿರಂಗವಾಗಿ ನಡೆಯುತ್ತಿದೆ. ತೆಲಂಗಾಣ, ಆಂಧ್ರಪ್ರದೇಶ, ದೆಹಲಿ ಮತ್ತು ರಾಜಸ್ಥಾನದಲ್ಲಿ ಕೂಡಾ ಚುನಾಯಿತ ಸರ್ಕಾರವನ್ನು ಬೀಳಿಸುವ ಸಂಚು ನಡೆದಿದೆ" ಎಂದು ಆಪಾದಿಸಿದರು.

24 ಮಂದಿಯ ತಂಡ ಇಡೀ ಹಗರಣದ ಮೂಲವನ್ನು ಹುಡುಕುವ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದ ಅವರು, ಮೂವರು ವ್ಯಕ್ತಿಗಳ ಐಡಿ ಕಾರ್ಡ್‍ಗಳನ್ನು ಮತ್ತು ಟಿಆರ್‌ಎಸ್ ಸದಸ್ಯರ ಖರೀದಿಗೆ ಮುಂದಾಗಿದ್ದ ಎನ್ನಲಾದ ಮಧ್ಯವರ್ತಿ ತುಷಾರ್ ಎಂಬಾತನ ಜತೆ ಅಮಿತ್ ಶಾ ಇರುವ ಚಿತ್ರವನ್ನು ಕೂಡಾ ಬಿಡುಗಡೆ ಮಾಡಿದರು. ತುಷಾರ್ ವಯನಾಡ್‍ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು ಎಂದು ಅವರು ವಿವರಿಸಿದರು. ಈ ಬಗ್ಗೆ timesofindia.com ವರದಿ ಮಾಡಿದೆ. 

Similar News