×
Ad

ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿ: ಮಧ್ಯಪ್ರದೇಶ ಸಚಿವೆ ಉಷಾ ಠಾಕೂರ್

Update: 2022-11-04 07:58 IST

ಖಾಂಡ್ವಾ (ಮಧ್ಯಪ್ರದೇಶ): ಅತ್ಯಾಚಾರ ಪ್ರಕರಣಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು ಎಂದು ಮಧ್ಯಪ್ರದೇಶ ಸಚಿವೆ ಉಷಾ ಠಾಕೂರ್ ಸಲಹೆ ಮಾಡಿದ್ದಾರೆ. ಇಂಥ ಶಿಕ್ಷೆ ನೀಡಿದರೆ, ಇಂಥ ಅಪರಾಧವನ್ನು ಇತರರು ಮಾಡದಂತೆ ನಿರೋಧಕವಾಗಿ ಇದು ಕೆಲಸ ಮಾಡುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಜಿಲ್ಲೆಯಲ್ಲಿ ನಾಲ್ಕು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆ ಎನ್ನಲಾದ ಪ್ರಕರಣದ ಹಿನ್ನೆಲೆಯಲ್ಲಿ ಸಚಿವೆ ಈ ಹೇಳಿಕೆ ನೀಡಿದ್ದಾರೆ.

"ಮಧ್ಯಪ್ರದೇಶ ಸರ್ಕಾರ ಅಂಥ ಅನಾಗರಿಕ ಶಕ್ತಿಗಳ ವಿರುದ್ಧ ಎಚ್ಚರಿಕೆಯಿಂದ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಿದೆ. ಅತ್ಯಾಚಾರಿಗಳಿಗೆ ಮರಣ ದಂಡನೆ ವಿಧಿಸಲು ಅವಕಾಶ ಮಾಡುವ ಕಾನೂನು ತಂದ ಮೊದಲ ರಾಜ್ಯ ಇದು. ಇದುವರೆಗೆ 72 ಆರೋಪಿಗಳಿಗೆ ಮರಣ ದಂಡನೆ ವಿಧಿಸಲಾಗಿದೆ" ಎಂದು ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವೆಯಾಗಿರುವ ಅವರು ವಿವರ ನೀಡಿದರು.

ಆದರೆ ಇಂಥ ಅಪರಾಧಗಳು ಮಂದುವರಿದರೆ, ಅದು ಸಮಾಜಕ್ಕೆ, ಪ್ರಜಾಪ್ರಭುತ್ವದ ನಾಲ್ಕನೇ ಅಂಗಕ್ಕೆ, ಮಾಧ್ಯಮ ಹಾಗೂ ನಮಗೆಲ್ಲರಿಗೂ ಆತಂಕಕಾರಿ ವಿಚಾರ ಎಂದು ಬಣ್ಣಿಸಿದರು.

"ನಾವು ಸಮಾಜದಲ್ಲಿ ಹಲವು ಬಗೆಯಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ಇಂಥ ಕೃತ್ಯಗಳಲ್ಲಿ ಯಾರಾದರೂ ಹೇಗೆ ತೊಡಗಿಸಿಕೊಳ್ಳುತ್ತಾರೆ? ಇಂಥ ಅಪರಾಧಿಗಳಿಗೆ ಸಾರ್ವಜನಿಕ ಚೌಕಿಗಳಲ್ಲಿ ಮರಣ ದಂಡನೆ ವಿಧಿಸಬೇಕು ಎಂದು ನಾನು ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತಿದ್ದೇನೆ. ಆರೋಪಿಗಳಿಗೆ ಜೈಲಿನಲ್ಲಿ ಮರಣ ದಂಡನೆ ವಿಧಿಸಿದರೆ ಏನು ನಡೆಯುತ್ತದೆ ಎನ್ನುವುದು ಯಾರಿಗೂ ಗೊತ್ತಾಗುವುದಿಲ್ಲ" ಎಂದು ವಿಶ್ಲೇಷಿಸಿದರು. ಈ ಬಗ್ಗೆ ndtv.com ವರದಿ ಮಾಡಿದೆ. 

Similar News