ನಾವು ಇರಾನ್ ಅನ್ನು ವಿಮುಕ್ತಗೊಳಿಸಲಿದ್ದೇವೆ: ಅಮೆರಿಕ ಅಧ್ಯಕ್ಷ ಬೈಡನ್

Update: 2022-11-04 18:47 GMT

  ವಾಷಿಂಗ್ಟನ್, ನ.4: ಇರಾನ್ ಅನ್ನು ವಿಮುಕ್ತಗೊಳಿಸುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಗುರುವಾರ ಪ್ರತಿಜ್ಞೆ ಮಾಡಿ ದ್ದು , ಇರಾನ್ ಸರಕಾರದ ವಿರುದ್ಧ ನಿಂತಿರುವ ಪ್ರತಿಭಟನಾಕಾರರು ಶೀಘ್ರದಲ್ಲೇ ತಮ್ಮನ್ನು ಮುಕ್ತಗೊಳಿಸುವಲ್ಲಿ ಯಶಸ್ವಿಯಾಗುತ್ತಾರೆ ಎಂದಿದ್ದಾರೆ.

ಕ್ಯಾಲಿಫೋರ್ನಿಯದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಬೈಡನ್ ‘ಚಿಂತಿಸಬೇಡಿ, ನಾವು ಇರಾನ್ ಅನ್ನು ಮುಕ್ತಗೊಳಿಸಲಿದ್ದೇವೆ. ಅವರು ಶೀಘ್ರದಲ್ಲೇ ತಮ್ಮನ್ನು ಮುಕ್ತಗೊಳಿಸಲಿದ್ದಾರೆ’ ಎಂದರು. ಚುನಾವಣಾ ಪ್ರಚಾರ ಸಭೆಯ ಹೊರಗೆ ಹಲವರು ಇರಾನ್ ಪ್ರತಿಭಟನಾಕಾರರನ್ನು ಬೆಂಬಲಿಸುವ ಘೋಷಣೆಯನ್ನು ಹೊಂದಿರುವ ಬ್ಯಾನರ್ ಪ್ರದರ್ಶಿಸಿ ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸಿದರು. ಬಳಿಕ ಸ್ಯಾನ್ ಡಿಯೆಗೊದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡುವ ಸಂದರ್ಭ ತಮ್ಮ ಹೇಳಿಕೆಯ ಬಗ್ಗೆ ಹೆಚ್ಚಿನ ವಿವರಣೆ ನೀಡಲು ಬೈಡನ್ ನಿರಾಕರಿಸಿದರು ಎಂದು ಮಾಧ್ಯಮಗಳು ವರದಿ ಮಾಡಿವೆ.

 ಇದಕ್ಕೂ ಮುನ್ನ, ಇರಾನ್ ಮಾರಣಾಂತಿಕ ದಮನ ಕ್ರಮವನ್ನು ಹೆಚ್ಚಿಸಿದ್ದು, ಇರಾನ್‌ನ ವಿವಿಗಳಲ್ಲಿ ಭೀಕರ ಪರಿಸ್ಥಿತಿಯಿದೆ. ಈ ಬಗ್ಗೆ ತುರ್ತು ಗಮನ ಹರಿಸಿ ಹೆಚ್ಚಿನ ಕ್ರಮ ಕೈಗೊಳ್ಳುವಂತೆ ಅಮೆರಿಕಾದ್ಯಂತದ ವಿವಿಗಳ 2000ಕ್ಕೂ ಅಧಿಕ ಶಿಕ್ಷಣ ತಜ್ಞರು ಬೈಡನ್‌ರಿಗೆ ಬರೆದಿರುವ ಪತ್ರದಲ್ಲಿ ಒತ್ತಾಯಿಸಿದ್ದಾರೆ.

 ಈ ಮಧ್ಯೆ, ಮಹಿಳೆಯರ ಸ್ಥಾನಮಾನಕ್ಕೆ ಸಂಬಂಧಿಸಿದ ವಿಶ್ವಸಂಸ್ಥೆಯ ಆಯೋಗ(ಸಿಎಸ್‌ಡಬ್ಲ್ಯೂ)ದ ಸದಸ್ಯತ್ವದಿಂದ ಇರಾನ್ ಅನ್ನು ವಜಾಗೊಳಿಸಲು ಪ್ರಯತ್ನಿಸುವುದಾಗಿ ಅಮೆರಿಕ ಬುಧವಾರ ಹೇಳಿದೆ. ಇರಾನ್ ಸರಕಾರ ಮಹಿಳೆಯರ ಹಕ್ಕನ್ನು ನಿರಾಕರಿಸಿದೆ ಮತ್ತು ಹಿಜಾಬ್ ವಿರೋಧಿ ಪ್ರತಿಭಟನಾಕಾರರ ವಿರುದ್ಧ ಕ್ರೂರವಾಗಿ ವರ್ತಿಸಿರುವ ಹಿನ್ನೆಲೆಯಲ್ಲಿ, ಲಿಂಗ ಸಮಾನತೆ ಮತ್ತು ನಹಿಳೆಯರ ಸಬಲೀಕರಣ ಉತ್ತೇಜಿಸುವ ಗುರಿ ಹೊಂದಿರುವ 45 ದೇಶಗಳ ಸಿಎಸ್‌ಡಬ್ಲ್ಯೂನಿಂದ ಇರಾನ್ ಅನ್ನು ಹೊರಗಿರಿಸಬೇಕು ಎಂದು ಶ್ವೇತಭವನದ ಮೂಲಗಳು ಹೇಳಿವೆ.

43 ವರ್ಷಗಳ ಹಿಂದೆಯೇ ಇರಾನ್‌ಗೆ ಮುಕ್ತಿ ದೊರಕಿದೆ:ಇರಾನ್‌ ಅಧ್ಯಕ್ಷ ತಿರುಗೇಟು

ಟೆಹ್ರಾನ್, ನ.4: ಇರಾನ್ ಅನ್ನು ವಿಮುಕ್ತಗೊಳಿಸಲಿದ್ದೇವೆ ಎಂಬ ಅಮೆರಿಕ ಅಧ್ಯಕ್ಷ ಬೈಡನ್ ಹೇಳಿಕೆಗೆ ತಿರುಗೇಟು ನೀಡಿರುವ ಇರಾನ್‌ನ ಅಧ್ಯಕ್ಷ ಇಬ್ರಾಹಿಂ ರೈಸಿ ‘ಇರಾನ್‌ಗೆ 43 ವರ್ಷದ ಹಿಂದೆಯೇ ಮುಕ್ತಿ ದೊರಕಿದೆ ಎಂದು ಬೈಡನ್‌ಗೆ ತಿಳಿಸಬಯಸುತ್ತೇನೆ’ ಎಂದಿದ್ದಾರೆ.

  ಟಿವಿ ವಾಹಿನಿಯ ಮೂಲಕ ದೇಶವನ್ನುದ್ದೇಶಿಸಿ ಮಾತನಾಡಿದ ಅವರು ‘ನಾವು ಇರಾನ್‌ನ ವಿಮೋಚನೆಯ ಗುರಿಯನ್ನು ಹೊಂದಿದ್ದೇವೆ ಎಂದು ಬೈಡನ್ ಹೇಳಿದ್ದಾರೆ. ಬಹುಷಃ ಏಕಾಗ್ರತೆಯ ಕೊರತೆಯಿಂದ ಅವರು ಹೀಗೆ ಹೇಳಿರಬಹುದು’ ಎಂದರು. ಅಮೆರಿಕವು ಇರಾನ್‌ನಲ್ಲಿ ಅವ್ಯವಸ್ಥೆ, ಭಯೋತ್ಪಾದನೆ ಮತ್ತು ವಿನಾಶವನ್ನು ಪ್ರಚೋದಿಸುತ್ತಿದೆ ಎಂದು ರೈಸಿ ರವಿವಾರ ಆರೋಪಿಸಿದ್ದರು. ‘ತನ್ನ ಹೇಳಿಕೆಗಳ ಮೂಲಕ ಮತ್ತೊಂದು ದೇಶದಲ್ಲಿ ಅವ್ಯವಸ್ಥೆ, ಭಯೋತ್ಪಾದನೆಯನ್ನು ಪ್ರಚೋದಿಸುವ ಅಮೆರಿಕದ ಅಧ್ಯಕ್ಷರು, ಅಮೆರಿಕವನ್ನು ಮಹಾನ್ ಸೈತಾನ ಎಂದು ಕರೆದ ಇಸ್ಲಾಮಿಕ್ ಗಣರಾಜ್ಯದ ಸಂಸ್ಥಾಪಕರ ಶಾಶ್ವತ ಮಾತುಗಳನ್ನು ನೆನಪಿಸಿಕೊಳ್ಳಬೇಕು’ ಎಂದು ಇಬ್ರಾಹಿಂ ರೈಸಿ ಹೇಳಿರುವುದಾಗಿ ಸರಕಾರಿ ಸ್ವಾಮ್ಯದ ‘ಇರ್ನಾ’ ಸುದ್ಧಿಸಂಸ್ಥೆ ವರದಿ ಮಾಡಿದೆ.

Similar News